ಓಟ್ ಬ್ಯಾಂಕ್ ಸುಭದ್ರ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್: ವಿಜಯೇಂದ್ರ
ಬೆಂಗಳೂರು: ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದಾಗಿನಿಂದ ತುಷ್ಟೀಕರಣದ ಎಲ್ಲ ಮಿತಿಗಳನ್ನು ದಾಟಿ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಅಲ್ಪಸಂಖ್ಯಾತರನ್ನು ಓಲೈಸಲು ಯಾವ ಮಟ್ಟಕ್ಕಾದರೂ ಈ ಸರ್ಕಾರ ಇಳಿಯಲಿದೆ. ಅಳಂದ ಗಲಭೆ ಪ್ರಕರಣವನ್ನು ಕೈ ಬಿಡಲು ಸಚಿವ ಸಂಪಟು ತೀರ್ಮಾನ ಕೈಗೊಂಡಿದೆ. ದೇಶದ್ರೋಹಿಗಳ ವಿರುದ್ಧ, ಕಾನೂನು ಹಾಳು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಸರ್ಕಾರ ಹಾಗೂ ಕಾಂಗ್ರೆಸ್ ತಮ್ಮ ಓಟ್ ಬ್ಯಾಂಕ್ ಸುಭದ್ರ ಮಾಡಿಕೊಳ್ಳುತ್ತಿದೆ ಎಂದು ದೂರಿದರು.
ಹಿಂದೂಗಳಿಗೆ ಪದೇ ಪದೇ ಅಪಮಾನ ಮಾಡುತ್ತಿರುವ ಕಾಂಗ್ರೆಸ್ ನೀತಿಯನ್ನು ರಾಜ್ಯದ ಜನ ಗಮನಿಸಿದ್ದಾರೆ. ವಿರೋಧ ಪಕ್ಷವಾಗಿ ನಾವೂ ಹೋರಾಟ ಮಾಡುತ್ತೇವೆ. ಹಿಂದೂ ವಿರೋಧ ನೀತಿ ಅನುಸರಿಸುತ್ತಿರುವುದರ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದರು.



