ಕೇಂದ್ರದ ಬೆಲೆ ಏರಿಕೆಗೆ ಕಾಂಗ್ರೆಸ್ ಗ್ಯಾರಂಟಿಗಳೇ ಪರಿಹಾರ; ಬಿಜೆಪಿ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ
ಬೆಂಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಿರಂತರ ಬೆಲೆ ಏರಿಕೆಯ ಮೂಲಕ ಜನರ ಮೇಲೆ ಆರ್ಥಿಕ ಹೊರೆ ಹಾಕುತ್ತಿದ್ದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜನಸಾಮಾನ್ಯರ ಬದುಕಿಗೆ ನೆರವಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಕೇವಲ ಕರ್ನಾಟಕದಲ್ಲೇ ಅಲ್ಲ, ದೇಶದಾದ್ಯಂತ ಗಮನ ಸೆಳೆದಿವೆ. ವಿಶ್ವಸಂಸ್ಥೆಯೂ ಈ ಯೋಜನೆಗಳನ್ನು ಮೆಚ್ಚಿದೆ” ಎಂದು ಹೇಳಿದರು.
“ಇಂದು ಬೆಲೆ ಏರಿಕೆ ಗಗನಕ್ಕೇರಿದೆ. ಜನರ ಆದಾಯ ಮಾತ್ರ ಕುಸಿಯುತ್ತಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ ಮತ್ತು ಸರಬರಾಜಿನ ಸಮಸ್ಯೆಯಿಂದ ಅನೇಕ ಹೋಟೆಲ್ಗಳು ಅರ್ಧಬಾಗಿಲು ಹಾಕುವ ಪರಿಸ್ಥಿತಿ ಎದುರಿಸುತ್ತಿವೆ” ಎಂದು ಆತಂಕ ವ್ಯಕ್ತಪಡಿಸಿದರು.
ಈ ವರ್ಷ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಮಾರ್ಚ್ 1ರಂದು ₹28, ಮಾರ್ಚ್ 7ರಂದು ₹114.50, ಮಾರ್ಚ್ 23ರಂದು ₹49, ಏಪ್ರಿಲ್ 1ರಂದು ₹195 ರಿಂದ ₹218 ರವರೆಗೆ, ಮೇ 1ರಂದು ₹993 ನಷ್ಟು ಏರಿಕೆ ಮಾಡಿದ್ದಾರೆ” ಎಂದು ವಿವರಿಸಿದರು.
ಇಂಧನ ಮೇಲಿನ ತೆರಿಗೆ ಮೂಲಕ ಕೇಂದ್ರ ಸರ್ಕಾರ ಪ್ರತಿದಿನ ಸುಮಾರು ₹1,000 ಕೋಟಿ ಆದಾಯ ಸಂಗ್ರಹಿಸುತ್ತಿದೆ ಎಂದು ಆರೋಪಿಸಿದ ಅವರು, “ಈ ತೆರಿಗೆ ಕಡಿಮೆ ಮಾಡಿದರೆ ಜನರ ಮೇಲಿನ ಆರ್ಥಿಕ ಹೊರೆ ತಗ್ಗಿಸಬಹುದಿತ್ತು” ಎಂದು ಹೇಳಿದರು.
ಕಳೆದ 11 ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ₹7.52ರವರೆಗೆ ಹೆಚ್ಚಳ ಮಾಡಿರುವುದು ಜನಸಾಮಾನ್ಯರ ಜೀವನದ ಮೇಲೆ ನೇರ ಪರಿಣಾಮ ಬೀರಿದೆ ಎಂದು ಡಿಸಿಎಂ ಹೇಳಿದರು.



