CM ಸ್ಥಾನ ತ್ಯಜಿಸಿದ ಸಿದ್ದರಾಮಯ್ಯ; ರಾಜ್ಯಪಾಲರ ಬದಲು ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಹಸ್ತಾಂತರ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹಲವು ದಿನಗಳಿಂದ ತೀವ್ರ ಕುತೂಹಲ ಮತ್ತು ರಾಜಕೀಯ ಚರ್ಚೆಗೆ ಕಾರಣವಾಗಿದ್ದ ನಾಯಕತ್ವ ಬದಲಾವಣೆಗೆ ಕೊನೆಗೂ ತೆರೆ ಬಿದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸುವ ಮೂಲಕ ಅಧಿಕಾರದಿಂದ ಹಿಂದೆ ಸರಿದಿದ್ದಾರೆ.
ರಾಜೀನಾಮೆ ಸಲ್ಲಿಸುವ ಮೊದಲು ಇಂದು ಬೆಳಿಗ್ಗೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಸಚಿವರು ಹಾಗೂ ಆಪ್ತ ನಾಯಕರೊಂದಿಗೆ ಕೊನೆಯ ಬ್ರೇಕ್ಫಾಸ್ಟ್ ಸಭೆ ನಡೆಯಿತು. ಸಾಮಾನ್ಯವಾಗಿ ರಾಜಕೀಯ ಚಟುವಟಿಕೆಗಳಿಂದ ಕಿಕ್ಕಿರಿದು ಕಾಣುವ ಕಾವೇರಿ ನಿವಾಸ ಇಂದು ಭಾವುಕ ವಾತಾವರಣಕ್ಕೆ ಸಾಕ್ಷಿಯಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ಸಚಿವರು ಹಾಗೂ ಆಪ್ತ ನಾಯಕರು ಸಿದ್ದರಾಮಯ್ಯ ಅವರ ದೀರ್ಘ ರಾಜಕೀಯ ಪಯಣವನ್ನು ಸ್ಮರಿಸಿ ಭಾವುಕರಾದರು. ಕೆಲ ಸಚಿವರ ಕಣ್ಣಲ್ಲಿ ಕಣ್ಣೀರು ಕಾಣಿಸಿಕೊಂಡಿದ್ದು, ಸಭೆಯ ವಾತಾವರಣ ಭಾರವಾಗಿತ್ತು ಎನ್ನಲಾಗಿದೆ.
ಸಹೋದ್ಯೋಗಿಗಳಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ, ಮಧ್ಯಾಹ್ನದ ಬಳಿಕ ರಾಜೀನಾಮೆ ಪತ್ರದೊಂದಿಗೆ ರಾಜಭವನದತ್ತ ತೆರಳಿದರು. ಆದರೆ ರಾಜ್ಯಪಾಲರು ರಾಜಧಾನಿಯಲ್ಲಿ ಇಲ್ಲದ ಕಾರಣ, ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಹಸ್ತಾಂತರಿಸಿದರು.
ಪ್ರಸ್ತುತ ರಾಜೀನಾಮೆ ಪತ್ರವನ್ನು ಕಾರ್ಯದರ್ಶಿಗಳು ಸ್ವೀಕರಿಸಿದ್ದರೂ, ರಾಜ್ಯಪಾಲರು ಅಧಿಕೃತವಾಗಿ ಸಹಿ ಮಾಡಿದ ಬಳಿಕವೇ ರಾಜೀನಾಮೆ ಅಂಗೀಕಾರವಾಗಲಿದೆ. ಮೂಲಗಳ ಪ್ರಕಾರ ರಾಜ್ಯಪಾಲರು ನಾಳೆ ಬೆಂಗಳೂರಿಗೆ ಮರಳುವ ಸಾಧ್ಯತೆಯಿದ್ದು, ನಂತರ ಸಂವಿಧಾನಾತ್ಮಕ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ.
ಈ ಮೂಲಕ ಐದು ದಶಕಗಳ ರಾಜಕೀಯ ಅನುಭವ ಹೊಂದಿರುವ ಸಿದ್ದರಾಮಯ್ಯ ಅವರ ಎರಡನೇ ಅವಧಿಯ ಮುಖ್ಯಮಂತ್ರಿ ಆಡಳಿತ ಅಂತ್ಯ ಕಂಡಂತಾಗಿದೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆ ಹಾಗೂ ರಾಹುಲ್ ಗಾಂಧಿ ಅವರ ಸಂದೇಶಕ್ಕೆ ಗೌರವ ಸೂಚಿಸಿ ಅವರು ರಾಜೀನಾಮೆ ನೀಡಲು ಮುಂದಾಗಿರುವುದು ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.



