ಲಕ್ಷಾಂತರ ವಿದ್ಯಾರ್ಥಿಗಳ ನಿರೀಕ್ಷೆಗೆ ಇಂದು ತೆರೆ: ಮಧ್ಯಾಹ್ನ 12ಕ್ಕೆ KCET ಫಲಿತಾಂಶ ಘೋಷಣೆ
ಬೆಂಗಳೂರು: 2026ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ಬರೆದಿರುವ ಲಕ್ಷಾಂತರ ವಿದ್ಯಾರ್ಥಿಗಳ ನಿರೀಕ್ಷೆಗೆ ಇಂದು ತೆರೆ ಬೀಳಲಿದ್ದು, ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರಕಟಿಸಲು ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.
ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಹ ಅಧ್ಯಕ್ಷರಾದ ಡಾ. ಶರಣ ಪ್ರಕಾಶ್ ಪಾಟೀಲ್ ಅವರು ಇಂದು ಮಧ್ಯಾಹ್ನ 12 ಗಂಟೆಗೆ ಸುದ್ದಿಗೋಷ್ಠಿ ನಡೆಸಿ KCET-2026 ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ. ಇದೇ ವೇಳೆ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಟಾಪರ್ಗಳ ಪಟ್ಟಿಯನ್ನೂ ಬಿಡುಗಡೆ ಮಾಡಲಾಗುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಫಲಿತಾಂಶ ಘೋಷಣೆಯ ಬಳಿಕ ಮಧ್ಯಾಹ್ನ 2 ಗಂಟೆಯಿಂದ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ನಲ್ಲಿ ತಮ್ಮ ನೋಂದಣಿ ಸಂಖ್ಯೆಯನ್ನು (Register Number) ನಮೂದಿಸುವ ಮೂಲಕ ಫಲಿತಾಂಶ ಮತ್ತು ರ್ಯಾಂಕ್ ಪಟ್ಟಿಯನ್ನು ಪರಿಶೀಲಿಸಬಹುದಾಗಿದೆ. ವಿದ್ಯಾರ್ಥಿಗಳು ತಮ್ಮ ಸ್ಕೋರ್ ಕಾರ್ಡ್ಗಳನ್ನು ಡೌನ್ಲೋಡ್ ಮಾಡಿಕೊಂಡು ಭವಿಷ್ಯದ ಪ್ರವೇಶ ಪ್ರಕ್ರಿಯೆಗಾಗಿ ಸಂರಕ್ಷಿಸಿಕೊಳ್ಳಬಹುದು.
ಫಲಿತಾಂಶ ಪ್ರಕಟವಾಗುವ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಏಕಕಾಲದಲ್ಲಿ ವೆಬ್ಸೈಟ್ಗೆ ಭೇಟಿ ನೀಡುವ ಸಾಧ್ಯತೆ ಇರುವುದರಿಂದ ಸರ್ವರ್ ಮೇಲೆ ಒತ್ತಡ ಉಂಟಾಗಬಹುದು. ಇದರಿಂದ ವೆಬ್ಸೈಟ್ ನಿಧಾನವಾಗಿ ಕಾರ್ಯನಿರ್ವಹಿಸುವ ಅಥವಾ ತಾತ್ಕಾಲಿಕ ತೊಂದರೆ ಎದುರಾಗುವ ಸಾಧ್ಯತೆಯೂ ಇದೆ.
ಆದ್ದರಿಂದ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗದೇ, ಕೆಲ ಸಮಯದ ಬಳಿಕ ಮತ್ತೆ ಪ್ರಯತ್ನಿಸುವಂತೆ ಹಾಗೂ ಅಗತ್ಯವಿದ್ದರೆ ಪರ್ಯಾಯ ಲಿಂಕ್ಗಳ ಮೂಲಕ ಫಲಿತಾಂಶವನ್ನು ವೀಕ್ಷಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮನವಿ ಮಾಡಿದೆ.



