No menu items!
15.3 C
Munich
Saturday, June 13, 2026

ಭಾರತೀಯ ಕ್ರೀಡಾಲೋಕಕ್ಕೆ ಶಾಕ್: ಭಾರತೀಯ ಶೂಟಿಂಗ್ ದಿಗ್ಗಜ ಜಸ್ಪಾಲ್ ರಾಣಾ ನಿಧನ

Must read

ಭಾರತೀಯ ಕ್ರೀಡಾಲೋಕಕ್ಕೆ ಶಾಕ್: ಭಾರತೀಯ ಶೂಟಿಂಗ್ ದಿಗ್ಗಜ ಜಸ್ಪಾಲ್ ರಾಣಾ ನಿಧನ

ನವದೆಹಲಿ: ಭಾರತದ ಶೂಟಿಂಗ್ ಕ್ಷೇತ್ರದ ಪ್ರಮುಖ ವ್ಯಕ್ತಿತ್ವ, ಖ್ಯಾತ ಕೋಚ್ ಹಾಗೂ ಮಾಜಿ ಶೂಟರ್ ಜಸ್ಪಾಲ್ ರಾಣಾ ಅವರು 49ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ಭಾರತೀಯ ಕ್ರೀಡಾ ಲೋಕದ ಗಣ್ಯರು ಹಾಗೂ ಶೂಟಿಂಗ್ ಸಮುದಾಯ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಕೆಲವು ದಿನಗಳ ಹಿಂದೆ ಜರ್ಮನಿಯ ಮ್ಯೂನಿಕ್ನಲ್ಲಿ ನಡೆದ ಐಎಸ್ಎಸ್ಎಫ್ ವಿಶ್ವಕಪ್ ವೇಳೆ ಜಸ್ಪಾಲ್ ರಾಣಾ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಆರಂಭದಲ್ಲಿ ಅದನ್ನು ಸಾಮಾನ್ಯ ಅಸಿಡಿಟಿ ಎಂದು ಭಾವಿಸಿ ತಮ್ಮ ಪ್ರವಾಸವನ್ನು ಮುಂದುವರಿಸಿದ್ದರು. ಆದರೆ ಭಾರತಕ್ಕೆ ವಾಪಸ್ ಆಗುವ ವೇಳೆ ವಿಮಾನ ಪ್ರಯಾಣದ ಸಂದರ್ಭದಲ್ಲೂ ಮತ್ತೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ದೆಹಲಿಗೆ ತಲುಪಿದ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವೈದ್ಯಕೀಯ ಪರೀಕ್ಷೆಯಲ್ಲಿ ಹೃದಯದ ರಕ್ತನಾಳದಲ್ಲಿ ಬ್ಲಾಕೇಜ್ ಇರುವುದು ಪತ್ತೆಯಾಗಿದ್ದು, ವೈದ್ಯರು ಸ್ಟೆಂಟ್ ಅಳವಡಿಸಿ ಚಿಕಿತ್ಸೆ ನೀಡಿದ್ದರು. ಇನ್ನೊಂದು ಸ್ಟೆಂಟ್ ಅಳವಡಿಸುವ ಪ್ರಕ್ರಿಯೆಯೂ ಬಾಕಿ ಇತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ಶೂಟಿಂಗ್ ಇತಿಹಾಸದಲ್ಲಿ ಜಸ್ಪಾಲ್ ರಾಣಾ ಅಪರೂಪದ ಸಾಧಕರಲ್ಲಿ ಒಬ್ಬರಾಗಿದ್ದರು. ಒಲಿಂಪಿಯನ್ ಮನು ಭಾಕರ್ ಅವರ ಯಶಸ್ಸಿನ ಹಿಂದಿನ ಪ್ರಮುಖ ಮಾರ್ಗದರ್ಶಕರಾಗಿ ಗುರುತಿಸಿಕೊಂಡಿದ್ದ ಅವರು, ತಮ್ಮ ತರಬೇತಿಯ ಮೂಲಕ ಮನು ಭಾಕರ್ ಅವರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸಿನ ಶಿಖರಕ್ಕೆ ಕೊಂಡೊಯ್ದಿದ್ದರು. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮನು ಭಾಕರ್ ಎರಡು ಪದಕಗಳನ್ನು ಗೆಲ್ಲುವಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು.
ಕ್ರೀಡಾಪಟುವಾಗಿ ಜಸ್ಪಾಲ್ ರಾಣಾ ಕಾಮನ್ವೆಲ್ತ್ ಕ್ರೀಡಾಕೂಟಗಳಲ್ಲಿ ಭಾರತದ ಅತ್ಯಂತ ಯಶಸ್ವಿ ಶೂಟರ್ಗಳಲ್ಲಿ ಒಬ್ಬರಾಗಿದ್ದರು. 1994, 1998, 2002 ಹಾಗೂ 2006ರ ಕಾಮನ್ವೆಲ್ತ್ ಕ್ರೀಡಾಕೂಟಗಳಲ್ಲಿ ಹಲವು ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದರು. 1994ರ ಮಿಲಾನ್ ವಿಶ್ವ ಚಾಂಪಿಯನ್ಶಿಪ್ನ ಜೂನಿಯರ್ ವಿಭಾಗದಲ್ಲಿ ಕೇವಲ 18ನೇ ವಯಸ್ಸಿನಲ್ಲಿ ಚಿನ್ನದ ಪದಕ ಗೆದ್ದು ವಿಶ್ವ ದಾಖಲೆ ನಿರ್ಮಿಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರೀ ಗಮನ ಸೆಳೆದಿದ್ದರು.
ಶೂಟರ್ ಆಗಿ ಮಾತ್ರವಲ್ಲದೆ ಕೋಚ್ ಆಗಿಯೂ ಅನೇಕ ಪ್ರತಿಭಾವಂತ ಕ್ರೀಡಾಪಟುಗಳನ್ನು ರೂಪಿಸಿದ್ದ ಜಸ್ಪಾಲ್ ರಾಣಾ ಅವರ ನಿಧನ ಭಾರತೀಯ ಕ್ರೀಡಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವೆಂದು ಕ್ರೀಡಾ ವಲಯ ಅಭಿಪ್ರಾಯಪಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಭಾರತೀಯ ಕ್ರೀಡಾ ಲೋಕಕ್ಕೆ ಇದು ದೊಡ್ಡ ನಷ್ಟ ಎಂದು ಹೇಳಿದ್ದಾರೆ.

- Advertisement -spot_img

More articles

- Advertisement -spot_img

Latest article