No menu items!
23.9 C
Munich
Thursday, June 18, 2026

ತಾತನ ಸ್ವಯಾರ್ಜಿತ ಆಸ್ತಿಯಲ್ಲಿ ಮೊಮ್ಮಗಳಿಗೆ ಪಾಲು ಕೇಳುವ ಹಕ್ಕಿಲ್ಲ; ಮಹತ್ವದ ತೀರ್ಪು ನೀಡಿದ ಹೈಕೋರ್ಟ್

Must read

ತಾತನ ಸ್ವಯಾರ್ಜಿತ ಆಸ್ತಿಯಲ್ಲಿ ಮೊಮ್ಮಗಳಿಗೆ ಪಾಲು ಕೇಳುವ ಹಕ್ಕಿಲ್ಲ; ಮಹತ್ವದ ತೀರ್ಪು ನೀಡಿದ ಹೈಕೋರ್ಟ್

ಬೆಂಗಳೂರು: ತಾತನು ಸ್ವಂತವಾಗಿ ಸಂಪಾದಿಸಿದ ಆಸ್ತಿಯು ಕುಟುಂಬ ವಿಭಜನೆಯ ನಂತರ ತಂದೆಯ ಪಾಲಿಗೆ ಬಂದಿದ್ದರೂ, ಅದು ಹಿಂದೂ ಅವಿಭಕ್ತ ಕುಟುಂಬದ ಆಸ್ತಿಯಾಗದೆ ತಂದೆಯ ವೈಯಕ್ತಿಕ ಆಸ್ತಿಯಾಗುತ್ತದೆ. ಹೀಗಾಗಿ ಅಂತಹ ಆಸ್ತಿಯಲ್ಲಿ ಮೊಮ್ಮಗಳು ಪಾಲು ಕೇಳಲು ಕಾನೂನಾತ್ಮಕ ಹಕ್ಕು ಇರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅಮೆರಿಕದಲ್ಲಿ ನೆಲೆಸಿರುವ ಉಷಾ ಎನ್. ಸ್ವಾಮಿ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಪ್ರಕಟಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ವಿವಾದಿತ ಆಸ್ತಿಗಳನ್ನು ಅರ್ಜಿದಾರರ ತಾತ ಸ್ವಂತವಾಗಿ ಸಂಪಾದಿಸಿದ್ದು, ಬಳಿಕ ಕುಟುಂಬದ ಒಪ್ಪಂದದಂತೆ ತಮ್ಮ ಮಕ್ಕಳಿಗೆ ಹಂಚಿಕೆ ಮಾಡಿದ್ದರು ಎಂದು ತಿಳಿಸಿದೆ. ಈ ಸಂದರ್ಭದಲ್ಲಿ ತಂದೆಗೆ ಬಂದ ಆಸ್ತಿ ಅವರ ವೈಯಕ್ತಿಕ ಆಸ್ತಿಯಾಗುತ್ತದೆ ಹೊರತು ಪಿತ್ರಾರ್ಜಿತ ಅಥವಾ ಹಿಂದೂ ಅವಿಭಕ್ತ ಕುಟುಂಬದ ಆಸ್ತಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಮಿತಾಕ್ಷರ ಕಾನೂನಿನ ಪ್ರಕಾರ, ವ್ಯಕ್ತಿಗೆ ತನ್ನ ಸ್ವಯಾರ್ಜಿತ ಆಸ್ತಿಯನ್ನು ಇಚ್ಛೆಯಂತೆ ವಿಲೇವಾರಿ ಮಾಡುವ ಸಂಪೂರ್ಣ ಹಕ್ಕು ಇರುತ್ತದೆ. ಅಲ್ಲದೆ, ವಿವಾದಿತ ಆಸ್ತಿಗಳು ಜಂಟಿ ಕುಟುಂಬದ ಆಸ್ತಿಗಳಾಗಿದ್ದವು ಎಂಬುದನ್ನು ಸಾಬೀತುಪಡಿಸುವ ಯಾವುದೇ ಸಮರ್ಪಕ ದಾಖಲೆ ಅಥವಾ ಸಾಕ್ಷ್ಯವನ್ನು ಅರ್ಜಿದಾರರು ಸಲ್ಲಿಸಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಆಸ್ತಿಗಳು ಪಿತ್ರಾರ್ಜಿತವಾಗಿವೆ ಎಂಬುದನ್ನೂ ಅರ್ಜಿದಾರರು ಸಾಬೀತುಪಡಿಸಲು ವಿಫಲರಾಗಿರುವುದರಿಂದ, ಆಸ್ತಿಯಲ್ಲಿ ಪಾಲು ಪಡೆಯುವ ಹಕ್ಕು ಅವರಿಗೆ ಇರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ತಿಳಿಸಿ ಮೇಲ್ಮನವಿಯನ್ನು ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ
ಅರ್ಜಿದಾರರಾದ ಉಷಾ ಎನ್. ಸ್ವಾಮಿ ಅವರು 1979ರಲ್ಲಿ ವೈದ್ಯ ಜವರಯ್ಯ ಎನ್. ಸ್ವಾಮಿ ಅವರನ್ನು ವಿವಾಹವಾಗಿದ್ದು, ಬಳಿಕ ಪತಿಯೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದರು.
ಕುಟುಂಬದವರು ತಮ್ಮ ಗಮನಕ್ಕೆ ಬಾರದೆ ಸುಮಾರು 10 ಎಕರೆ ಜಮೀನನ್ನು ಮಾರಾಟ ಮಾಡಿದ್ದಾರೆ. ಅಲ್ಲದೆ, ಪಿತ್ರಾರ್ಜಿತ ಆಸ್ತಿಯಲ್ಲಿ ಕಲ್ಲು ಗಣಿಗಾರಿಕೆ ನಡೆಸಿ ಗಳಿಸಿದ ಲಾಭದ ಹಣದಿಂದ ಇತರೆ ಆಸ್ತಿಗಳನ್ನು ಖರೀದಿಸಿದ್ದಾರೆ. ಈ ಎಲ್ಲಾ ಆಸ್ತಿಗಳು ಪೂರ್ವಜರಿಂದ ಬಂದ ಜಂಟಿ ಕುಟುಂಬದ ಆಸ್ತಿಗಳಾಗಿರುವುದರಿಂದ, ಅವುಗಳಲ್ಲಿ ತಮಗೂ ಪಾಲು ನೀಡಬೇಕು. ಜೊತೆಗೆ ಬ್ಯಾಂಕ್ ಠೇವಣಿಗಳಲ್ಲಿಯೂ ತಮ್ಮ ಹಕ್ಕು ಪರಿಗಣಿಸಬೇಕು ಎಂದು ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಆದರೆ ವಿಚಾರಣಾ ನ್ಯಾಯಾಲಯ ಈ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಉಷಾ ಎನ್. ಸ್ವಾಮಿ ಅವರು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ಇದಕ್ಕೆ ಪ್ರತಿಯಾಗಿ ಅರ್ಜಿದಾರರ ಪೋಷಕರು, ವಿವಾದಿತ ಆಸ್ತಿಗಳು ಪೂರ್ವಜರಿಂದ ಬಂದ ಪಿತ್ರಾರ್ಜಿತ ಆಸ್ತಿಗಳಲ್ಲ ಹಾಗೂ ಹಿಂದೂ ಅವಿಭಕ್ತ ಕುಟುಂಬದ ಆಸ್ತಿಗಳೂ ಅಲ್ಲ ಎಂದು ವಾದಿಸಿದ್ದರು. ಈ ವಾದವನ್ನು ಪರಿಗಣಿಸಿದ ಹೈಕೋರ್ಟ್, ಅರ್ಜಿದಾರರ ಮೇಲ್ಮನವಿಯನ್ನು ತಿರಸ್ಕರಿಸಿ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.

- Advertisement -spot_img

More articles

- Advertisement -spot_img

Latest article