ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣ: ಜಾಮೀನು ರದ್ದು ಅರ್ಜಿ ಆದೇಶ ಜೂನ್ 30ಕ್ಕೆ ಕಾಯ್ದಿರಿಸಿದ ಕೋರ್ಟ್
ದಾವಣಗೆರೆ: ಹರಿಹರದ ವಚನಾನಂದ ಸ್ವಾಮೀಜಿ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರಿಗೆ ನೀಡಲಾಗಿರುವ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ಕುರಿತು ದಾವಣಗೆರೆಯ ವಿಶೇಷ ಪೋಕ್ಸೋ ನ್ಯಾಯಾಲಯ ತೀರ್ಪನ್ನು ಜೂನ್ 30ಕ್ಕೆ ಕಾಯ್ದಿರಿಸಿದೆ.
ವಚನಾನಂದ ಸ್ವಾಮೀಜಿ ಪಡೆದಿರುವ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸಬೇಕೆಂದು ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಜೂನ್ 11ರಂದು ಪೂರ್ಣಗೊಂಡಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿದ ಸ್ವಾಮೀಜಿ ಪರ ವಕೀಲ ಎಸ್.ವಿ. ಪಾಟೀಲ್, “ಹೈಕೋರ್ಟ್ನಲ್ಲಿ ಜೂನ್ 23ರಂದು ಜಾಮೀನು ಸಂಬಂಧಿತ ಅರ್ಜಿಯ ವಿಚಾರಣೆ ನಿಗದಿಯಾಗಿದೆ. ಹೈಕೋರ್ಟ್ ಆದೇಶದ ನಂತರ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯ ಜೂನ್ 30ರಂದು ತನ್ನ ತೀರ್ಪು ಪ್ರಕಟಿಸಲಿದೆ” ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ, ಸಂತ್ರಸ್ತ ಬಾಲಕನ ತಾಯಿಯೂ ವಚನಾನಂದ ಸ್ವಾಮೀಜಿಗೆ ನೀಡಿರುವ ಜಾಮೀನನ್ನು ರದ್ದುಪಡಿಸುವಂತೆ ಕೋರಿ ಈಗಾಗಲೇ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಜೂನ್ 6ರಂದು ಸಲ್ಲಿಕೆಯಾಗಿದ್ದ ಈ ಅರ್ಜಿಯ ಮಾಹಿತಿಯನ್ನು ದೂರುದಾರರು ಜಿಲ್ಲಾ ನ್ಯಾಯಾಲಯದ ಗಮನಕ್ಕೆ ತಂದಿರಲಿಲ್ಲ ಎನ್ನಲಾಗಿದೆ.
ಈ ಹಿನ್ನೆಲೆ ಹೈಕೋರ್ಟ್ನಲ್ಲಿ ಜೂನ್ 23ರಂದು ನಡೆಯಲಿರುವ ವಿಚಾರಣೆ ಮಹತ್ವ ಪಡೆದಿದ್ದು, ವಚನಾನಂದ ಸ್ವಾಮೀಜಿ ತಮ್ಮ ವಕೀಲರೊಂದಿಗೆ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ.



