No menu items!
20.1 C
Munich
Tuesday, June 23, 2026

ಲೀವ್ ಇನ್ ವಿಚಾರಕ್ಕೆ ಜಗಳ : ಪ್ರಿಯಕರನ ಜೊತೆ ಸೇರಿ ತಂಗಿ ಹಾಗೂ ಹೆತ್ತವರ ಕೊಲೆ!

Must read

ಲೀವ್ ಇನ್ ವಿಚಾರಕ್ಕೆ ಜಗಳ : ಪ್ರಿಯಕರನ ಜೊತೆ ಸೇರಿ ತಂಗಿ ಹಾಗೂ ಹೆತ್ತವರ ಕೊಲೆ!

ಬೆಂಗಳೂರು: ಲೀವ್-ಇನ್ ಸಂಬಂಧದ ವಿಚಾರವಾಗಿ ಉಂಟಾದ ಗಲಾಟೆ ತ್ರಿವಳಿ ಹತ್ಯೆಯಲ್ಲಿ ಅಂತ್ಯಗೊಂಡಿರುವ ಘಟನೆ ಕೆಆರ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸೀಗೆಹಳ್ಳಿ ಸಮೀಪದ ಸಾಯಿ ಗ್ರೀನ್ ಹೋಮ್ಸ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.
ಶ್ವೇತಾ ಎಂಬ ಯುವತಿ ತನ್ನ ಪ್ರಿಯಕರ ಕೆನತ್ ಜೊತೆ ಕಳೆದ ಒಂದೂವರೆ ತಿಂಗಳಿಂದ ಅದೇ ಅಪಾರ್ಟ್‌ಮೆಂಟ್‌ನಲ್ಲಿ ಲೀವ್-ಇನ್ ಸಂಬಂಧದಲ್ಲಿ ವಾಸವಾಗಿದ್ದಳು. ಈ ಸಂಬಂಧದ ಬಗ್ಗೆ ಬುದ್ಧಿವಾದ ಹೇಳಿ ಮಗಳನ್ನು ಮನೆಗೆ ಕರೆತರುವ ಉದ್ದೇಶದಿಂದ ಆಕೆಯ ಪೋಷಕರು ಹಾಗೂ ತಂಗಿ ಅಪಾರ್ಟ್‌ಮೆಂಟ್‌ಗೆ ಬಂದಿದ್ದರು.
ಈ ವೇಳೆ ಪೋಷಕರು, ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನತ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಗಲಾಟೆ ವೇಳೆ ಚಾಕುವಿನಿಂದ ಹಲ್ಲೆ ನಡೆದಿದ್ದು, ಶ್ವೇತಾಳ ತಾಯಿ ಮುತ್ತುಲಕ್ಷ್ಮೀ ಹಾಗೂ ತಂಗಿ ಸುಪ್ರಿಯಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ತಂದೆ ಸೋಮಸುಂದರ್ ರಕ್ತದ ಮಡುವಿನಲ್ಲೇ ಮನೆಯಿಂದ ಹೊರಬಂದು ಸಹಾಯ ಕೋರಿದ್ದಾರೆ. ಸ್ಥಳೀಯರು ತಕ್ಷಣ 112ಕ್ಕೆ ಕರೆ ಮಾಡಿದ್ದು, ಹೊಯ್ಸಳ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಅಪಾರ್ಟ್‌ಮೆಂಟ್ ಪಾರ್ಕಿಂಗ್ ಪ್ರದೇಶದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸೋಮಸುಂದರ್ ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದರು. ಆದರೆ ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿದ್ದಾರೆ.
ಸಾವಿಗೂ ಮುನ್ನ ಪೊಲೀಸರಿಗೆ ಮಾಹಿತಿ ನೀಡಿದ ಸೋಮಸುಂದರ್, “ನನ್ನ ಹೆಂಡತಿ ಮತ್ತು ಚಿಕ್ಕ ಮಗಳು ಮನೆಯೊಳಗಿದ್ದಾರೆ. ದೊಡ್ಡ ಮಗಳು ಹಾಗೂ ಆಕೆಯ ಬಾಯ್‌ಫ್ರೆಂಡ್ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಮಗಳು ಬಾಯ್‌ಫ್ರೆಂಡ್ ಜೊತೆ ಲೀವ್-ಇನ್ ಸಂಬಂಧದಲ್ಲಿದ್ದಳು. ಇದು ಸರಿಯಲ್ಲ ಎಂದು ಬುದ್ಧಿವಾದ ಹೇಳಲು ಬಂದಿದ್ದೆವು” ಎಂದು ತಿಳಿಸಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆ ಬಳಿಕ ಶ್ವೇತಾ ಹಾಗೂ ಕೆನತ್ ಪರಾರಿಯಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಕೆಆರ್ ಪುರ ಪೊಲೀಸರು ವಿಶೇಷ ತಂಡ ರಚಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

- Advertisement -spot_img

More articles

- Advertisement -spot_img

Latest article