No menu items!
29.6 C
Munich
Wednesday, June 24, 2026

ಬಿಡದಿಗೆ ಸಿಎಂ ಯಾಕೆ ಹೋಗಬೇಕು? ಕುಮಾರಸ್ವಾಮಿ ನಾಟಕ ಬಿಡಲಿ – ಹೆಚ್.ಸಿ. ಬಾಲಕೃಷ್ಣ ವಾಗ್ದಾಳಿ

Must read

ಬಿಡದಿಗೆ ಸಿಎಂ ಯಾಕೆ ಹೋಗಬೇಕು? ಕುಮಾರಸ್ವಾಮಿ ನಾಟಕ ಬಿಡಲಿ – ಹೆಚ್.ಸಿ. ಬಾಲಕೃಷ್ಣ ವಾಗ್ದಾಳಿ

ಬೆಂಗಳೂರು: ಬಿಡದಿ ಟೌನ್ಶಿಪ್ ಹಾಗೂ ಎಐ ಸಿಟಿ ಯೋಜನೆ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡುವಿನ ವಾಗ್ವಾದ ತೀವ್ರಗೊಂಡಿರುವ ಬೆನ್ನಲ್ಲೇ, ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಬಿಡದಿ ಟೌನ್ಶಿಪ್ ಯೋಜನೆ ಕುರಿತು ಚರ್ಚೆ ನಡೆಸಲು ಮುಖ್ಯಮಂತ್ರಿ ಏಕೆ ಬಿಡದಿಗೆ ಹೋಗಬೇಕು? ಸಿಎಂ ವಿಧಾನಸೌಧಕ್ಕೆ ಬನ್ನಿ ಎಂದು ಆಹ್ವಾನಿಸಿದ್ದಾರೆ. ಕುಮಾರಸ್ವಾಮಿ ಅಲ್ಲಿಗೆ ಬಂದು ಚರ್ಚೆ ಮಾಡಲಿ. ಅನಗತ್ಯ ನಾಟಕಗಳನ್ನು ಬಿಡಬೇಕು” ಎಂದು ಕಿಡಿಕಾರಿದರು.

ಬಿಡದಿ ಟೌನ್ಶಿಪ್ ಯೋಜನೆಯ ಮೂಲ ಪರಿಕಲ್ಪನೆಯೇ ಕುಮಾರಸ್ವಾಮಿ ಅವರದ್ದಾಗಿದೆ ಎಂದು ಹೇಳಿದ ಬಾಲಕೃಷ್ಣ, “ಅವರು ಮತ್ತು ಅವರ ತಂದೆ ಅಧಿಕಾರದಲ್ಲಿದ್ದಾಗ ಯೋಜನೆಯನ್ನು ರದ್ದುಪಡಿಸಲಿಲ್ಲ. ಈಗ ವಿರೋಧ ವ್ಯಕ್ತಪಡಿಸುವುದು ರಾಜಕೀಯ ನಾಟಕವಷ್ಟೇ. ಸರ್ಕಾರ ಈಗಾಗಲೇ ನಿರ್ಧಾರ ಕೈಗೊಂಡಿದ್ದು, ಯೋಜನೆ ಜಾರಿಯಾಗುವುದು ಖಚಿತ. ಎಷ್ಟೇ ಹೋರಾಟ ಮಾಡಿದರೂ ಅದು ನಿಲ್ಲುವುದಿಲ್ಲ” ಎಂದು ಸವಾಲು ಹಾಕಿದರು.

“ರೈತರ ಸಮ್ಮುಖದಲ್ಲೇ ಚರ್ಚೆ ನಡೆಯಲಿ” ಎಂಬ ಕುಮಾರಸ್ವಾಮಿ ಅವರ ಪತ್ರದ ಕುರಿತು ಪ್ರತಿಕ್ರಿಯಿಸಿದ ಅವರು, “ಯಾಕೆ ಸಿಎಂ ಬಿಡದಿಗೆ ಹೋಗಬೇಕು? ಇತ್ತೀಚೆಗೆ ನಡೆಸಿದ ಪ್ರತಿಭಟನೆಯಲ್ಲಿ ನಿಜವಾದ ರೈತರು ಎಷ್ಟು ಮಂದಿ ಇದ್ದರು? ಹೆಚ್ಚಿನವರು ಹೊರಗಿನಿಂದ ಬಂದವರೇ. ಮುಖ್ಯಮಂತ್ರಿ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಬರುವುದಿದ್ದರೆ ಬರಲಿ, ಇಲ್ಲದಿದ್ದರೆ ಬಿಡಲಿ” ಎಂದು ತಿರುಗೇಟು ನೀಡಿದರು.

ಯೋಜನೆ ಜಾರಿಗೂ ಮುನ್ನ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ ಬಾಲಕೃಷ್ಣ, “ರೈತರಿಗೆ ಹಿಂದಿನಿಗಿಂತ ಹೆಚ್ಚು ಪರಿಹಾರ ನೀಡುತ್ತಿದ್ದೇವೆ. ಕೆರೆಗಳ ಅಭಿವೃದ್ಧಿ ಮತ್ತು ಶುದ್ಧೀಕರಣಕ್ಕಾಗಿ ಹಣ ಮೀಸಲಿಟ್ಟಿದ್ದೇವೆ. ಪ್ರತಿದಿನ ರೈತರಿಗೆ ಆರ್ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತಿದೆ. ಸಾಲದ ಬಾಧೆ ಎದುರಿಸುತ್ತಿರುವ ರೈತರಿಗೆ ಒನ್ ಟೈಮ್ ಸೆಟಲ್ಮೆಂಟ್ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತಿದೆ” ಎಂದು ಹೇಳಿದರು.

“ಕೆಲವರು ಕೇವಲ ಬೈರಮಂಗಲ ಪಂಚಾಯತ್ ಭಾಗವನ್ನಷ್ಟೇ ತೋರಿಸುತ್ತಿದ್ದಾರೆ. ಬನ್ನಿಕೊಪ್ಪ ಪಂಚಾಯತ್ ಪ್ರದೇಶವನ್ನು ನೋಡಲಿ, ಅಲ್ಲಿ ಈಗಾಗಲೇ ಲೇಔಟ್ಗಳು ನಿರ್ಮಾಣವಾಗಿವೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪಾದಯಾತ್ರೆ ಮಾಡದವರು, ಈಗ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆದ ಬಳಿಕ ಪಾದಯಾತ್ರೆ ನಡೆಸುತ್ತಿರುವುದು ಉದ್ದೇಶಪೂರ್ವಕ ವಿರೋಧವಷ್ಟೇ” ಎಂದು ಆರೋಪಿಸಿದರು.

- Advertisement -spot_img

More articles

- Advertisement -spot_img

Latest article