No menu items!
30.1 C
Munich
Wednesday, June 24, 2026

ಕೆಆರ್ ಪುರಂ ತ್ರಿವಳಿ ಹತ್ಯೆ ಪ್ರಕರಣ: ಪುದುಚೇರಿಯಲ್ಲಿ ಆರೋಪಿ ಶ್ವೇತಾ ಬಂಧನ

Must read

ಕೆಆರ್ ಪುರಂ ತ್ರಿವಳಿ ಹತ್ಯೆ ಪ್ರಕರಣ: ಪುದುಚೇರಿಯಲ್ಲಿ ಆರೋಪಿ ಶ್ವೇತಾ ಬಂಧನ

ಬೆಂಗಳೂರು: ಕೆಆರ್ ಪುರಂನಲ್ಲಿ ನಡೆದಿದ್ದ ತ್ರಿವಳಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಶ್ವೇತಾಳನ್ನು ಪುದುಚೇರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಹಾಗೂ ಶ್ವೇತಾಳ ಪ್ರಿಯಕರ ಕೆನತ್‌ಗಾಗಿ ಪೊಲೀಸರು ವ್ಯಾಪಕ ಶೋಧ ಕಾರ್ಯ ಮುಂದುವರಿಸಿದ್ದಾರೆ.

ತಂದೆ, ತಾಯಿ ಮತ್ತು ತಂಗಿಯನ್ನು ಹತ್ಯೆಗೈದ ಬಳಿಕ ಶ್ವೇತಾ ತನ್ನ ಪ್ರಿಯಕರ ಕೆನತ್ ಜೊತೆ ಪರಾರಿಯಾಗಿದ್ದಳು. ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಶ್ವೇತಾಳನ್ನು ವಶಕ್ಕೆ ಪಡೆದಿದ್ದಾರೆ.

ಹತ್ಯೆ ನಡೆದ ಮನೆಯಲ್ಲಿ ಪರಿಶೀಲನೆ ನಡೆಸಿದ ವೇಳೆ ಶ್ವೇತಾ ಬರೆದಿದ್ದ ಡೈರಿ ಪೊಲೀಸರಿಗೆ ಸಿಕ್ಕಿದೆ. ಡೈರಿಯಲ್ಲಿ “I am sad”, “I am lonely”, “Feeling loved”, “I am depressed”, “I am superior” ಸೇರಿದಂತೆ ಹಲವು ಮನಸ್ಥಿತಿಯನ್ನು ಬಿಂಬಿಸುವ ಬರಹಗಳು ಪತ್ತೆಯಾಗಿವೆ. ಡೈರಿ ಸೇರಿದಂತೆ ಹಲವು ಪ್ರಮುಖ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಶ್ವೇತಾ ಮತ್ತು ಕೆನತ್ ಒಂದೇ ಸ್ಥಳದಲ್ಲಿ ಉಳಿಯದೆ ನಿರಂತರವಾಗಿ ಸಂಚರಿಸುತ್ತಿದ್ದರು. ಇವರ ಪತ್ತೆಗಾಗಿ ವೈಟ್‌ಫೀಲ್ಡ್ ವಿಭಾಗದ ಆರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ಅದರ ಫಲವಾಗಿ ಶ್ವೇತಾ ಬಂಧನಕ್ಕೊಳಗಾಗಿದ್ದು, ಕೆನತ್ ಬಂಧನಕ್ಕಾಗಿ ಬಲೆ ಬೀಸಲಾಗಿದೆ.

ಶ್ವೇತಾ ಹಾಗೂ ಕೆನತ್ ಇಬ್ಬರೂ ನ್ಯೂ ಹಾರಿಜನ್ ಕಾಲೇಜಿನಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದ ವೇಳೆ ಪರಿಚಯವಾಗಿ ಪ್ರೀತಿಗೆ ಒಳಗಾಗಿದ್ದರು. ನಂತರ ಇಬ್ಬರೂ ಉದ್ಯೋಗಕ್ಕೆ ಸೇರಿ ಲಿವ್-ಇನ್ ಸಂಬಂಧದಲ್ಲಿದ್ದರು. ಬಳಿಕ ಉದ್ಯೋಗ ತೊರೆದು ಸ್ವಂತ ಉದ್ಯಮ ಆರಂಭಿಸುವ ಉದ್ದೇಶದಿಂದ ಪೋಷಕರ ಹೆಸರಿನಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಸುಮಾರು 30 ಲಕ್ಷ ರೂಪಾಯಿ ಸಾಲ ಪಡೆದಿದ್ದರು.

ಸಾಲದ ಕಂತು ಹಾಗೂ ಬಡ್ಡಿ ಪಾವತಿಸದ ಹಿನ್ನೆಲೆಯಲ್ಲಿ ಬ್ಯಾಂಕ್‌ನಿಂದ ನೋಟಿಸ್ ಬಂದ ಬಳಿಕವೇ ಈ ವಿಚಾರ ಪೋಷಕರ ಗಮನಕ್ಕೆ ಬಂದಿತ್ತು. ಇದೇ ವಿಚಾರವಾಗಿ ಕುಟುಂಬದೊಳಗೆ ತೀವ್ರ ವಾಗ್ವಾದ ನಡೆದಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಕುಟುಂಬ ಸದಸ್ಯರೊಂದಿಗೆ ನಡೆದ ಜಗಳವೇ ಹತ್ಯೆಗೆ ಕಾರಣವಾಗಿದೆ ಎನ್ನಲಾಗಿದೆ. ಮೂವರು ಮೃತರ ಮೇಲೂ ಸುಮಾರು 30ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಬಂಧಿತ ಶ್ವೇತಾಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬರಬೇಕಿದೆ. ಕೆನತ್ ಬಂಧನದ ಬಳಿಕ ಇನ್ನಷ್ಟು ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.

- Advertisement -spot_img

More articles

- Advertisement -spot_img

Latest article