ಬೀದರ್: ಎದುರು ಮನೆಯ ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಶಂಕೆಯ ಹಿನ್ನೆಲೆ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಗಾಯಮುಖ ದೇವಸ್ಥಾನದ ಸಮೀಪದ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಧನ್ನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತೆಯನ್ನು ಬೀದರ್ ತಾಲೂಕಿನ ಹೊನ್ನಿಕೇರಿ ಗ್ರಾಮದ 26 ವರ್ಷದ ಸಂಜನಾ ಎಂದು ಗುರುತಿಸಲಾಗಿದೆ. ಆರೋಪಿ ಪತಿ ಭಗವತ್ ಜ್ಞಾನೇಶ್ವರ್, ಭಾಲ್ಕಿ ತಾಲೂಕಿನ ಬೋಳೆಗಾವ್ ಗ್ರಾಮದ ನಿವಾಸಿಯಾಗಿದ್ದು, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ದಂಪತಿ ಬೀದರ್ ನಗರದ ಶಿವನಗರದಲ್ಲಿ ವಾಸವಾಗಿದ್ದರು.
ತವರು ಮನೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಪತ್ನಿಯನ್ನು ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದ ಆರೋಪಿ, ಕಬ್ಬಿಣದ ರಾಡ್ನಿಂದ ತಲೆ ಹಾಗೂ ಕುತ್ತಿಗೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಬಳಿಕ ಘಟನೆಯನ್ನು ಅಪಘಾತ ಎಂಬಂತೆ ಬಿಂಬಿಸಲು ಯತ್ನಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.
ಗಂಭೀರವಾಗಿ ಗಾಯಗೊಂಡ ಸಂಜನಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಅವರು ಮೃತಪಟ್ಟಿದ್ದಾರೆ. ಶವಾಗಾರದ ಎದುರು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
ಸುಮಾರು ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿಯ ಜೀವನ ದುರಂತ ಅಂತ್ಯ ಕಂಡಿದೆ. ಪ್ರಕರಣ ದಾಖಲಿಸಿಕೊಂಡಿರುವ ಧನ್ನೂರ ಪೊಲೀಸರು ಆರೋಪದ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿಸಿದ್ದಾರೆ.
ಎದುರು ಮನೆ ಹುಡುಗಿ ಜೊತೆ ಪತಿ ಲವ್ವಿಡವ್ವಿ: ಪತಿಯಿಂದಲೇ ಪತ್ನಿ ಕೊಲೆ..!



