No menu items!
24.8 C
Munich
Saturday, July 4, 2026

ಕೊಪ್ಪಳದಲ್ಲಿ ಸಾಲಕ್ಕೆ ಬಲಿಯಾದ ಕುಟುಂಬ; ಸೀಜ್ ಮಾಡಿದ್ದ ಮನೆಯಲ್ಲೇ ಪತಿ-ಪತ್ನಿ-ಮಗ ಆತ್ಮಹತ್ಯೆ

Must read

ಕೊಪ್ಪಳದಲ್ಲಿ ಸಾಲಕ್ಕೆ ಬಲಿಯಾದ ಕುಟುಂಬ; ಸೀಜ್ ಮಾಡಿದ್ದ ಮನೆಯಲ್ಲೇ ಪತಿ-ಪತ್ನಿ-ಮಗ ಆತ್ಮಹತ್ಯೆ

ಕೊಪ್ಪಳ: ಜಿಲ್ಲೆಯ ಗಂಗಾವತಿ ನಗರದಲ್ಲಿ ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದಿದೆ. ಗಂಗಾವತಿಯ ಪ್ರಶಾಂತನಗರದಲ್ಲಿರುವ ಮನೆಯಲ್ಲಿ ಪತಿ, ಪತ್ನಿ ಹಾಗೂ ಪುತ್ರ ನೇಣಿಗೆ ಶರಣಾಗಿದ್ದು, ಸಾಲದ ಒತ್ತಡವೇ ಈ ದುರ್ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದೆ.
ಮೃತರನ್ನು ಪ್ರಕಾಶ್ ರಾಯ್ಕರ್ (54), ಪತ್ನಿ ಪ್ರಭಾ (46) ಹಾಗೂ ಪುತ್ರ ಶಶಾಂಕ್ (21) ಎಂದು ಗುರುತಿಸಲಾಗಿದೆ. ಪ್ರಕಾಶ್ ರಾಯ್ಕರ್ ಅವರು ಗಂಗಾವತಿಯಲ್ಲಿ ಜ್ಯುವೆಲ್ಲರಿ ಅಂಗಡಿ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಡಾ. ರಾಮ್ ಅರಸಿದ್ದಿ, ಪ್ರಾಥಮಿಕ ತನಿಖೆಯಲ್ಲಿ ಸಾಲಬಾಧೆಯೇ ಆತ್ಮಹತ್ಯೆಗೆ ಪ್ರಮುಖ ಕಾರಣ ಎಂಬುದು ಗೊತ್ತಾಗಿದೆ ಎಂದು ತಿಳಿಸಿದ್ದಾರೆ.
ಅವರ ಮಾಹಿತಿ ಪ್ರಕಾರ, ಪ್ರಕಾಶ್ ರಾಯ್ಕರ್ ಅವರು ಮಾನ್ವಿ ಪಟ್ಟಣ ಬ್ಯಾಂಕ್ನಲ್ಲಿ ಸಾಲ ಪಡೆದಿದ್ದರು. ಸಾಲ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಮನೆಯನ್ನು ಬ್ಯಾಂಕ್ ಫೆಬ್ರವರಿ ತಿಂಗಳಲ್ಲಿ ಸೀಜ್ ಮಾಡಿತ್ತು. ಬಳಿಕ ಕುಟುಂಬವು ಮನೆಯ ಹಿಂಬದಿಯ ಬಾಗಿಲಿನಿಂದ ಒಳ ಪ್ರವೇಶಿಸಿ ಅಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಪ್ರಕಾಶ್ ರಾಯ್ಕರ್ ಅವರು 2021ರಲ್ಲಿ ಸಾಲದ ಕಾರಣದಿಂದ ತಮ್ಮ ಮನೆಯನ್ನು ನಾಗರಾಜ್ ಎಂಬವರಿಗೆ ಮಾರಾಟ ಮಾಡಿದ್ದರು. ಆದರೆ ಫೆಬ್ರವರಿ ತಿಂಗಳವರೆಗೂ ಅದೇ ಮನೆಯಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ.
ಮನೆ ಖರೀದಿಸಿದ್ದ ನಾಗರಾಜ್ ಕೂಡ ಮಾನ್ವಿ ಪಟ್ಟಣ ಬ್ಯಾಂಕ್ನಲ್ಲಿ ಸಾಲ ಪಡೆದಿದ್ದು, ಸಾಲ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಮನೆಯನ್ನು ಸೀಜ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕಾಶ್ ರಾಯ್ಕರ್ ಅವರಿಗೆ ಕೋಟ್ಯಂತರ ರೂಪಾಯಿ ಸಾಲವಿತ್ತು ಎನ್ನುವ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ವಿವಿಧ ಕಡೆ ಆಸ್ತಿ ಖರೀದಿ ಮತ್ತು ಮಾರಾಟ ವ್ಯವಹಾರಗಳನ್ನು ನಡೆಸುತ್ತಿದ್ದರು ಎನ್ನುವ ಮಾಹಿತಿಯೂ ಪೊಲೀಸರಿಗೆ ಲಭ್ಯವಾಗಿದೆ. ಆದರೆ ಅವರು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸಕ್ರಿಯರಾಗಿದ್ದಾರೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ ಎಂದು ಎಸ್ಪಿ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಪ್ರಕಾಶ್ ರಾಯ್ಕರ್ ಅವರ ಸಹೋದರರು ದೂರು ನೀಡಲಿದ್ದು, ಅದರ ಆಧಾರದ ಮೇಲೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಕಾರಣವಾದ ಎಲ್ಲಾ ಆಯಾಮಗಳ ಕುರಿತು ತನಿಖೆ ಮುಂದುವರಿದಿದೆ.

- Advertisement -spot_img

More articles

- Advertisement -spot_img

Latest article