No menu items!
25.8 C
Munich
Saturday, July 4, 2026

ಹೈಕೋರ್ಟ್ ಆದೇಶಕ್ಕೂ ಮಣಿಯದ ಸರ್ಕಾರ? 10 ವರ್ಷಗಳಿಂದ ನೇಮಕಾತಿಗಾಗಿ ಅಲೆದಾಡುತ್ತಿರುವ ಮೂವರು ಅಭ್ಯರ್ಥಿಗಳು

Must read

ಹೈಕೋರ್ಟ್ ಆದೇಶಕ್ಕೂ ಮಣಿಯದ ಸರ್ಕಾರ? 10 ವರ್ಷಗಳಿಂದ ನೇಮಕಾತಿಗಾಗಿ ಅಲೆದಾಡುತ್ತಿರುವ ಮೂವರು ಅಭ್ಯರ್ಥಿಗಳು

ಬೆಂಗಳೂರು: ಸರ್ಕಾರಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಂತಿಮ ಆಯ್ಕೆಗೊಂಡಿದ್ದರೂ, ಕಳೆದ ಹತ್ತು ವರ್ಷಗಳಿಂದ ನೇಮಕಾತಿ ಆದೇಶಕ್ಕಾಗಿ ಮೂವರು ಅಭ್ಯರ್ಥಿಗಳು ಕೋರ್ಟ್ ಹಾಗೂ ಸರ್ಕಾರಿ ಕಚೇರಿಗಳ ನಡುವೆ ಅಲೆದಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕರ್ನಾಟಕ ಹೈಕೋರ್ಟ್ ಅವರ ಪರವಾಗಿ ಸ್ಪಷ್ಟ ಆದೇಶ ನೀಡಿದ್ದರೂ, ಇದುವರೆಗೂ ನೇಮಕಾತಿ ಪತ್ರ ಸಿಗದಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ರಾಮನಗರ ಜಿಲ್ಲೆಯ ಹರೀಶ್ ಕುಮಾರ್ ಎಚ್.ಪಿ., ಕೊಪ್ಪಳ ಜಿಲ್ಲೆಯ ವಿಶ್ವನಾಥ್ ಹಾಗೂ ವಿಜಯಪುರ ಜಿಲ್ಲೆಯ ಹಂಪಣ್ಣ ಕೊಲಕಾರ್ ಅವರು ನಗರಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ‘ವರ್ಕ್ ಇನ್ಸ್ಪೆಕ್ಟರ್’ ಹುದ್ದೆಗೆ ಆಯ್ಕೆಯಾಗಿದ್ದರು. ಇಲಾಖೆ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದ್ದರೂ, ಆಡಳಿತಾತ್ಮಕ ಕಾರಣಗಳನ್ನು ಉಲ್ಲೇಖಿಸಿ ಅವರಿಗೆ ನೇಮಕಾತಿ ಆದೇಶ ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಮೂವರು ಅಭ್ಯರ್ಥಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಸುದೀರ್ಘ ಕಾನೂನು ಹೋರಾಟದ ಬಳಿಕ, 2026ರ ಮಾರ್ಚ್ 23ರಂದು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಅಭ್ಯರ್ಥಿಗಳ ಪರವಾಗಿ ಮಹತ್ವದ ತೀರ್ಪು ನೀಡಿತ್ತು. ಸಂಬಂಧಪಟ್ಟ ವೃಂದವನ್ನು ಸರ್ಕಾರ ತಿದ್ದುಪಡಿಗಳ ಮೂಲಕ ರದ್ದುಗೊಳಿಸಿದ್ದರೂ, ಆಯ್ಕೆಯಾದ ಅಭ್ಯರ್ಥಿಗಳಿಗೆ ಉದ್ಯೋಗ ನಿರಾಕರಿಸಲು ಸಾಧ್ಯವಿಲ್ಲ. ಅವರಿಗೆ ತತ್ಸಮಾನ ಹುದ್ದೆಗಳಲ್ಲಿ ನೇಮಕಾತಿ ನೀಡಬೇಕು ಎಂದು ಹೈಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿತ್ತು.
ಇದರ ಜೊತೆಗೆ, ಎರಡು ತಿಂಗಳೊಳಗೆ ನೇಮಕಾತಿ ಆದೇಶ ನೀಡುವಂತೆ ಸರ್ಕಾರಕ್ಕೆ ಗಡುವು ವಿಧಿಸಲಾಗಿತ್ತು. ಆದರೆ, ನ್ಯಾಯಾಲಯ ನಿಗದಿಪಡಿಸಿದ ಅವಧಿ ಮುಗಿದಿದ್ದರೂ ತಾಂತ್ರಿಕ ಕಾರಣಗಳನ್ನು ಉಲ್ಲೇಖಿಸಿ ಅಧಿಕಾರಿಗಳು ನೇಮಕಾತಿ ಪ್ರಕ್ರಿಯೆಯನ್ನು ಮುಂದೂಡುತ್ತಿದ್ದಾರೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಭ್ಯರ್ಥಿಗಳು, “ಹತ್ತು ವರ್ಷಗಳ ಕಾನೂನು ಹೋರಾಟದಲ್ಲಿ ನಮ್ಮ ವಯಸ್ಸೇ ಕಳೆದುಹೋಯಿತು. ಈ ನಡುವೆ ಇತರ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ವಯೋಮಿತಿಯನ್ನೂ ಮೀರಿದ್ದೇವೆ. ಹೀಗಾಗಿ ಬೇರೆ ಉದ್ಯೋಗಾವಕಾಶಗಳೂ ಕೈ ತಪ್ಪಿವೆ. ಹಣಕಾಸಿನ ಸಂಕಷ್ಟ ಹಾಗೂ ಕುಟುಂಬದ ಜವಾಬ್ದಾರಿಗಳ ನಡುವೆಯೇ ಬೆಂಗಳೂರಿಗೆ ಪದೇ ಪದೇ ಬಂದು ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ” ಎಂದು ಅಳಲು ತೋಡಿಕೊಂಡಿದ್ದಾರೆ.
ಸದ್ಯ ಮೂವರು ಅಭ್ಯರ್ಥಿಗಳು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದು, “ನಾವು ಈಗ ಕೇವಲ ಉದ್ಯೋಗಕ್ಕಾಗಿ ಹೋರಾಡುತ್ತಿಲ್ಲ. ನಮಗೆ ಆಗಿರುವ ಅನ್ಯಾಯದ ವಿರುದ್ಧ ನ್ಯಾಯ ಮತ್ತು ನಮ್ಮ ಘನತೆಗಾಗಿ ಹೋರಾಟ ನಡೆಸುತ್ತಿದ್ದೇವೆ” ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

- Advertisement -spot_img

More articles

- Advertisement -spot_img

Latest article