ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಹಾರಿದ ಯುವತಿ; ಸಿಬ್ಬಂದಿಯ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ
ಬೆಂಗಳೂರು: ರಾಜಧಾನಿಯ ರಾಜಾಜಿನಗರ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಯುವತಿಯೊಬ್ಬಳು ಮೆಟ್ರೋ ಹಳಿಗೆ ಹಾರಿದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದ ಘಟನೆ ಮಧ್ಯಾಹ್ನ ನಡೆದಿದೆ.
ಹಸಿರು ಮಾರ್ಗದ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಮಧ್ಯಾಹ್ನ ಸುಮಾರು 12:25 ಗಂಟೆಗೆ ಯುವತಿಯೊಬ್ಬಳು ಏಕಾಏಕಿ ಮೆಟ್ರೋ ಹಳಿಗೆ ಜಿಗಿದಿದ್ದಾಳೆ. ಈ ದೃಶ್ಯ ಕಂಡ ತಕ್ಷಣ ನಿಲ್ದಾಣ ನಿಯಂತ್ರಕರು ಹಾಗೂ ಭದ್ರತಾ ಸಿಬ್ಬಂದಿ ತುರ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿದರು.
ಹಳಿಯಲ್ಲಿದ್ದ ಯುವತಿಯನ್ನು ಯಾವುದೇ ಗಾಯಗಳಾಗದಂತೆ ಸುರಕ್ಷಿತವಾಗಿ ಮೇಲಕ್ಕೆ ಎತ್ತಿ ರಕ್ಷಿಸಲಾಯಿತು. ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ದುರಂತ ತಪ್ಪಿದಂತಾಯಿತು.
ಈ ಘಟನೆಯ ಪರಿಣಾಮವಾಗಿ ಹಸಿರು ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಸುಮಾರು 10 ನಿಮಿಷಗಳ ಕಾಲ ವಿಳಂಬವಾಯಿತು. ಬಳಿಕ ಸಿಬ್ಬಂದಿ ಹಳಿ ಪ್ರದೇಶವನ್ನು ಸಂಪೂರ್ಣವಾಗಿ ಪರಿಶೀಲಿಸಿ ಸುರಕ್ಷತಾ ಕ್ರಮಗಳನ್ನು ಪೂರ್ಣಗೊಳಿಸಿದ ನಂತರ ಮಧ್ಯಾಹ್ನ 12:34 ಗಂಟೆಗೆ ಮೆಟ್ರೋ ಸಂಚಾರವನ್ನು ಎಂದಿನಂತೆ ಪುನರಾರಂಭಿಸಿದರು.
ಪ್ರಸ್ತುತ ಯುವತಿ ಸುರಕ್ಷಿತವಾಗಿದ್ದು, ಆಕೆ ಹಳಿಗೆ ಜಿಗಿಯಲು ಕಾರಣವೇನು ಎಂಬುದರ ಕುರಿತು ಬಿಎಂಆರ್ಸಿಎಲ್ ಅಧಿಕಾರಿಗಳು ಹಾಗೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗಮನಾರ್ಹವಾಗಿ, ನಮ್ಮ ಮೆಟ್ರೋದಲ್ಲಿ ಈ ರೀತಿಯ ಘಟನೆಗಳು ಇದೇ ಮೊದಲಲ್ಲ. ಈ ಹಿಂದೆ ಮೆಜೆಸ್ಟಿಕ್ನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದ ಹಸಿರು ಮಾರ್ಗದಲ್ಲಿಯೂ ಡಿ-ಗ್ರೂಪ್ ನೌಕರರೊಬ್ಬರು ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಆಗಲೂ ಮೆಟ್ರೋ ಸಿಬ್ಬಂದಿ ತಕ್ಷಣ ರಕ್ಷಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಇಂತಹ ಘಟನೆಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.



