ಆರು ತಿಂಗಳ ಬಳಿಕ ಕೆಆರ್ಎಸ್ ಡ್ಯಾಂಗೆ 1,000 ಕ್ಯೂಸೆಕ್ ನೀರು ಒಳಹರಿವು; ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಳ
ಮಂಡ್ಯ: ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ (ಕೆಆರ್ಎಸ್) ಜಲಾಶಯಕ್ಕೆ ಸುಮಾರು ಆರು ತಿಂಗಳ ಸುದೀರ್ಘ ನಿರೀಕ್ಷೆಯ ಬಳಿಕ ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬಂದಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಜಲಾಶಯದ ಒಳಹರಿವಿನಲ್ಲಿ ಅಲ್ಪ ಪ್ರಮಾಣದ ಏರಿಕೆ ದಾಖಲಾಗಿದೆ.
ಭಾನುವಾರ ಕೆಆರ್ಎಸ್ ಜಲಾಶಯಕ್ಕೆ 1,449 ಕ್ಯೂಸೆಕ್ ನೀರು ಹರಿದು ಬಂದಿದ್ದು, ಜಲಾಶಯದಿಂದ 760 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ 80.90 ಅಡಿಗೆ ತಲುಪಿದೆ.
49.452 ಟಿಎಂಸಿ ಗರಿಷ್ಠ ಸಾಮರ್ಥ್ಯದ ಕೆಆರ್ಎಸ್ ಜಲಾಶಯದಲ್ಲಿ ಸದ್ಯ 11.188 ಟಿಎಂಸಿ ನೀರು ಸಂಗ್ರಹವಿದ್ದು, ಇದರಲ್ಲಿ ಸುಮಾರು 5 ಟಿಎಂಸಿ ಡೆಡ್ ಸ್ಟೋರೇಜ್ ಆಗಿದೆ. ಹೀಗಾಗಿ ಉಪಯೋಗಕ್ಕೆ ಲಭ್ಯವಿರುವ ನೀರಿನ ಪ್ರಮಾಣ ಇನ್ನೂ ಸೀಮಿತವಾಗಿದೆ.
ಕಳೆದ ವರ್ಷದ ಇದೇ ದಿನದ ಅಂಕಿ-ಅಂಶಗಳೊಂದಿಗೆ ಹೋಲಿಸಿದರೆ ಈ ಬಾರಿಯ ಪರಿಸ್ಥಿತಿ ಆತಂಕಕಾರಿಯಾಗಿದೆ. ಕಳೆದ ವರ್ಷ ಇದೇ ದಿನ ಜಲಾಶಯಕ್ಕೆ 25,757 ಕ್ಯೂಸೆಕ್ ನೀರು ಹರಿದು ಬಂದಿತ್ತು. ಆಗ ಜಲಾಶಯ ಬಹುತೇಕ ಭರ್ತಿಯಾಗಿದ್ದು, 40 ಸಾವಿರ ಕ್ಯೂಸೆಕ್ಗೂ ಅಧಿಕ ನೀರನ್ನು ನದಿಗೆ ಹರಿಸಲಾಗುತ್ತಿತ್ತು.
ಆದರೆ ಈ ಬಾರಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಹಿನ್ನೆಲೆಯಲ್ಲಿ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ ಇನ್ನೂ ಏರಿಕೆಯಾಗಿಲ್ಲ. ಮುಂದಿನ ದಿನಗಳಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದರೆ ಮಾತ್ರ ಜಲಾಶಯದ ನೀರಿನ ಸಂಗ್ರಹದಲ್ಲಿ ಗಣನೀಯ ಏರಿಕೆ ಕಾಣುವ ಸಾಧ್ಯತೆ ಇದೆ.



