ರಾಮ್ ಮಾಧವ್ ವಿರುದ್ಧದ ಹೇಳಿಕೆಗೆ ಹರಿಪ್ರಸಾದ್ ಗೆ ಲೀಗಲ್ ನೋಟಿಸ್; ಕ್ಷಮೆ ಕೇಳುವಂತೆ ಆಗ್ರಹ
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ನಾಯಕ ರಾಮ್ ಮಾಧವ್ ವಿರುದ್ಧ ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಗೌಪ್ಯ ಸಭೆ ನಡೆಸಿದ್ದಾರೆ ಎಂದು ಆರೋಪಿಸಿದ್ದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರಿಗೆ ಕಾನೂನು ನೋಟಿಸ್ ಜಾರಿಯಾಗಿದೆ. ಸುಳ್ಳು ಮತ್ತು ಮಾನಹಾನಿಕರ ಹೇಳಿಕೆಗಳ ಮೂಲಕ ರಾಮ್ ಮಾಧವ್ ಅವರ ವ್ಯಕ್ತಿತ್ವ ಹಾಗೂ ಸಾರ್ವಜನಿಕ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಲಾಗಿದೆ ಎಂದು ಆರೋಪಿಸಿ ನೋಟಿಸ್ ನೀಡಲಾಗಿದೆ.
ಬಿಎನ್ಎಸ್ನ ಸೆಕ್ಷನ್ 356ರ ಅಡಿಯಲ್ಲಿ ಜಾರಿಗೊಂಡಿರುವ ನೋಟಿಸ್ನಲ್ಲಿ, ರಾಮ್ ಮಾಧವ್ ವಿರುದ್ಧ ಮಾಡಿರುವ ಆರೋಪಗಳಿಗೆ ಬಿ.ಕೆ. ಹರಿಪ್ರಸಾದ್ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಲಾಗಿದೆ.
ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಹರಿಪ್ರಸಾದ್, ಬಿಜೆಪಿ ಜಿಬಿಎ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿರುವ ರಾಮ್ ಮಾಧವ್ ಅವರು ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಕೊಲಂಬೊ ಹಾಗೂ ಲಂಡನ್ನಲ್ಲಿ ನಾಲ್ಕು ರಹಸ್ಯ ಸಭೆಗಳನ್ನು ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.
ಲಂಡನ್ನ ಹಿಲ್ಟನ್ ಹೋಟೆಲ್ನಲ್ಲಿ ಪಾಕಿಸ್ತಾನದ ಐಎಸ್ಐನ ಮಾಜಿ ಮೇಜರ್ ಜನರಲ್ ಸೇರಿದಂತೆ ಕೆಲ ಅಧಿಕಾರಿಗಳೊಂದಿಗೆ ರಾಮ್ ಮಾಧವ್ ಸಭೆ ನಡೆಸಿದ್ದು, ಆ ಸಭೆಯಲ್ಲಿ ಏನು ಚರ್ಚೆಯಾಯಿತು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯಿಸಿದ್ದರು. ಜೊತೆಗೆ, ಈ ರೀತಿಯ ಸಭೆ ನಡೆಸಲು ಅವರಿಗೆ ಅಧಿಕಾರ ನೀಡಿದವರು ಯಾರು ಎಂಬ ಪ್ರಶ್ನೆಯನ್ನೂ ಎತ್ತಿದ್ದರು.
“ಆಪರೇಷನ್ ಸಿಂಧೂರ್ ನಡೆದ ಕೆಲವೇ ತಿಂಗಳಲ್ಲೇ ರಾಮ್ ಮಾಧವ್ ಲಂಡನ್ಗೆ ತೆರಳಿ ನಾಲ್ಕು ಸಭೆಗಳನ್ನು ನಡೆಸಿದ್ದಾರೆ. ಅವರು ವಿದೇಶಾಂಗ ಸಚಿವರಲ್ಲ, ಸಂಸದರೂ ಅಲ್ಲ, ಶಾಸಕರೂ ಅಲ್ಲ. ಕೇವಲ ಆರ್ಎಸ್ಎಸ್ ಪ್ರಚಾರಕರಾಗಿರುವ ಅವರಿಗೆ ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಯಾರು ಅನುಮತಿ ನೀಡಿದರು ಎಂಬುದನ್ನು ಸ್ಪಷ್ಟಪಡಿಸಬೇಕು” ಎಂದು ಹರಿಪ್ರಸಾದ್ ಹೇಳಿದ್ದರು.
ಇದಲ್ಲದೆ, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವ ಕುರಿತು ಸೂಚನೆ ನೀಡಿದ್ದಾರೆ ಎಂಬ ಆರೋಪವನ್ನೂ ಹರಿಪ್ರಸಾದ್ ಮಾಡಿದ್ದರು.
ಈ ಹೇಳಿಕೆಗಳ ಬೆನ್ನಲ್ಲೇ ರಾಮ್ ಮಾಧವ್ ಪರವಾಗಿ ಕಾನೂನು ನೋಟಿಸ್ ಜಾರಿಯಾಗಿದ್ದು, ಆರೋಪಗಳಿಗೆ ಸಾಕ್ಷ್ಯ ಒದಗಿಸುವಂತೆ ಅಥವಾ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಸೂಚಿಸಲಾಗಿದೆ. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.



