No menu items!
21.2 C
Munich
Wednesday, July 8, 2026

ಬೆಂಗಳೂರಿನ ಮಾದರಿಯ ನಗರಗಳನ್ನು ರಾಜ್ಯದ ಇತರ ಭಾಗಗಳಲ್ಲೂ ನಿರ್ಮಿಸುತ್ತೇವೆ: ಸಿಎಂ ಡಿ.ಕೆ. ಶಿವಕುಮಾರ್

Must read

ಬೆಂಗಳೂರಿನ ಮಾದರಿಯ ನಗರಗಳನ್ನು ರಾಜ್ಯದ ಇತರ ಭಾಗಗಳಲ್ಲೂ ನಿರ್ಮಿಸುತ್ತೇವೆ: ಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ರಾಜ್ಯದ ಎರಡನೇ ಹಾಗೂ ಮೂರನೇ ಹಂತದ ನಗರಗಳನ್ನೂ ಬೆಂಗಳೂರಿನ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷಿ ಯೋಜನೆಯೊಂದಿಗೆ ಸರ್ಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಬುಧವಾರ ನಡೆದ ‘ಟಾರ್ಗೆಟ್ ಇಂಡಿಯಾ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಲಭ್ಯವಿರುವ ಮೂಲಸೌಕರ್ಯ ಮತ್ತು ಉದ್ಯಮ ಸ್ನೇಹಿ ವಾತಾವರಣವನ್ನು ರಾಜ್ಯದ ಇತರ ನಗರಗಳಿಗೂ ವಿಸ್ತರಿಸುವುದು ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಕಚೇರಿ ಸ್ಥಳದ ಬಾಡಿಗೆ ಪ್ರತಿ ಚದರ ಅಡಿಗೆ 1 ರಿಂದ 1.5 ಡಾಲರ್ವರೆಗೆ ಇದ್ದರೆ, ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ಅದು ಅರ್ಧ ಡಾಲರ್ಗೆ ಲಭ್ಯವಿದೆ. ಹೀಗಾಗಿ ಆ ನಗರಗಳಲ್ಲಿ ಡಬಲ್ ಎಫ್ಎಆರ್ (Floor Area Ratio) ನೀಡುವ ಮೂಲಕ ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಉತ್ತೇಜನ ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಹೂಡಿಕೆಗೆ ಅನುಕೂಲಕರ ವಾತಾವರಣವಿದ್ದು, ಉದ್ಯಮಿಗಳ ಸಲಹೆಗಳಿಗೆ ಸರ್ಕಾರ ಮುಕ್ತವಾಗಿದೆ. “ನೀವು ಬಲಿಷ್ಠರಾದರೆ ರಾಜ್ಯವೂ ಬಲಿಷ್ಠವಾಗುತ್ತದೆ. ಕರ್ನಾಟಕದ ಅಭಿವೃದ್ಧಿಗೆ ನೀವೆಲ್ಲರೂ ಪಾಲುದಾರರು ಹಾಗೂ ರಾಯಭಾರಿಗಳು. ನಾವೆಲ್ಲರೂ ‘ಟೀಮ್ ಕರ್ನಾಟಕ’ವಾಗಿ ಒಟ್ಟಾಗಿ ಕೆಲಸ ಮಾಡೋಣ” ಎಂದು ಸಿಎಂ ಕರೆ ನೀಡಿದರು.
ಬೆಂಗಳೂರು ನಗರದಲ್ಲಿ ಪ್ರತಿ ತಿಂಗಳು ಸುಮಾರು 30 ಸಾವಿರ ಹೊಸ ವಾಹನಗಳು ನೋಂದಣಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಸರ್ಕಾರ ವಿಶೇಷ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ತಿಳಿಸಿದರು.
ಈಗಾಗಲೇ 350 ಕಿಲೋಮೀಟರ್ ಮೆಟ್ರೋ ಜಾಲಕ್ಕೆ ಯೋಜನೆ ರೂಪಿಸಲಾಗಿದ್ದು, ಮುಂದಿನ ವರ್ಷದ ವೇಳೆಗೆ ಅದನ್ನು 500 ಕಿಲೋಮೀಟರ್ಗೆ ವಿಸ್ತರಿಸುವ ಗುರಿ ಹೊಂದಲಾಗಿದೆ. ಹೆಬ್ಬಾಳ ಸಂಚಾರ ದಟ್ಟಣೆ ನಿವಾರಣೆಗೆ ಸಣ್ಣ ಟನಲ್ ರಸ್ತೆ ಕಾಮಗಾರಿ ಆರಂಭವಾಗಿದ್ದು, ನಗರದಲ್ಲಿ ಒಟ್ಟು 40 ಕಿಲೋಮೀಟರ್ ಉದ್ದದ ಟನಲ್ ರಸ್ತೆ ನಿರ್ಮಾಣಕ್ಕೂ ಸರ್ಕಾರ ಮುಂದಾಗಿದೆ ಎಂದು ಹೇಳಿದರು.
ಇದರ ಜೊತೆಗೆ 44 ಕಿಲೋಮೀಟರ್ ಉದ್ದದ ಡಬಲ್ ಡೆಕ್ಕರ್ ರಸ್ತೆ, 133 ಕಿಲೋಮೀಟರ್ ಉದ್ದದ ಮೇಲ್ಸೇತುವೆಗಳು ಹಾಗೂ 123 ಕಿಲೋಮೀಟರ್ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ ನಿರ್ಮಾಣ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಬಿಸಿನೆಸ್ ಕಾರಿಡಾರ್ ಮೊದಲ ಹಂತಕ್ಕೆ ಸುಮಾರು ₹26 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಒಟ್ಟಾರೆ ಬೆಂಗಳೂರು ನಗರದ ಅಭಿವೃದ್ಧಿಗೆ ₹1.5 ಲಕ್ಷ ಕೋಟಿ ಹೂಡಿಕೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

- Advertisement -spot_img

More articles

- Advertisement -spot_img

Latest article