ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಪಂಚಭೂತಗಳಲ್ಲಿ ಲೀನ; ರಾಷ್ಟ್ರಗೌರವ, ಕುಶಾಲತೋಪು ನಮನದ ನಡುವೆ ನೆರವೇರಿದ ಅಂತ್ಯಸಂಸ್ಕಾರ
ಹಾಸನ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ಅವರು ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಪಂಚಭೂತಗಳಲ್ಲಿ ಲೀನರಾದರು. ದೇವೇಗೌಡರ ಹುಟ್ಟೂರು ಹರದನಹಳ್ಳಿ ಸಮೀಪದ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿತು. ಸಾವಿರಾರು ಜನರು, ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು ಹಾಗೂ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು.
ಅಂತ್ಯಕ್ರಿಯೆಗೆ ಮುನ್ನ ಚೆನ್ನಮ್ಮ ಅವರ ಪಾರ್ಥಿವ ಶರೀರಕ್ಕೆ ಗಣ್ಯರು ಅಂತಿಮ ಪುಷ್ಪನಮನ ಸಲ್ಲಿಸಿದರು. ಬಳಿಕ ಮೂರು ಸುತ್ತು ಕುಶಾಲತೋಪು ಸಿಡಿಸಿ, ರಾಷ್ಟ್ರಗೀತೆಯೊಂದಿಗೆ ಸರ್ಕಾರಿ ಗೌರವ ವಂದನೆ ಸಲ್ಲಿಸಲಾಯಿತು. ಎರಡು ನಿಮಿಷಗಳ ಮೌನಾಚರಣೆ ನಡೆಸಿದ ನಂತರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೇವೇಗೌಡರ ಕುಟುಂಬಕ್ಕೆ ರಾಷ್ಟ್ರಧ್ವಜ ಹಸ್ತಾಂತರಿಸಿದರು.
ಈ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಕಾಲಿಗೆ ನಮಸ್ಕರಿಸಿ ಗೌರವ ಸಲ್ಲಿಸಿದರು. ಬಳಿಕ ಪಾರ್ಥಿವ ಶರೀರಕ್ಕೆ ಶುದ್ಧೀಕರಣ ವಿಧಿವಿಧಾನಗಳು ನೆರವೇರಿದವು. ದೇವೇಗೌಡರು ಹಾಗೂ ಕುಟುಂಬ ಸದಸ್ಯರು ಅಂತಿಮ ಪೂಜೆ ಸಲ್ಲಿಸಿದ್ದು, ಅರ್ಚಕರ ತಂಡ ವೇದಮಂತ್ರ ಹಾಗೂ ಸ್ತೋತ್ರ ಪಠಣ ನಡೆಸಿತು.
ನಂತರ ಪಾರ್ಥಿವ ಶರೀರವನ್ನು ಪಲ್ಲಕ್ಕಿಯಲ್ಲಿ ಮೂರು ಸುತ್ತು ಮೆರವಣಿಗೆ ನಡೆಸಿ, ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಹಿರಿಯ ಪುತ್ರ ಎಚ್.ಡಿ. ರಮೇಶ್ ಅವರು ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನೆರವೇರಿಸಿದರು. ಗಂಗಾಜಲ ಸಿಂಪಡಿಸಿ ಸ್ಥಳವನ್ನು ಶುದ್ಧೀಕರಿಸಿದ ಬಳಿಕ ಪಾರ್ಥಿವ ಶರೀರವನ್ನು ಸಮಾಧಿಗೆ ಇಳಿಸಿ ಅಂತಿಮ ವಿಧಿವಿಧಾನ ಪೂರ್ಣಗೊಳಿಸಲಾಯಿತು.
ಅಂತಿಮ ದರ್ಶನಕ್ಕೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಎಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಶಿವರಾಜ್ ಸಿಂಗ್ ಚೌಹಾಣ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಇಂಧನ ಸಚಿವ ಕೆ.ಜೆ. ಜಾರ್ಜ್, ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಬಿ.ವೈ. ರಾಘವೇಂದ್ರ, ಡಾ. ನಿರ್ಮಲಾನಂದ ಸ್ವಾಮೀಜಿ, ನಂಜಾವಧೂತ ಶ್ರೀ, ರಂಭಾಪುರಿ ಶ್ರೀ ಸೇರಿದಂತೆ ಹಲವು ಸಚಿವರು, ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿ ಪುಷ್ಪನಮನ ಸಲ್ಲಿಸಿದರು.
ಚೆನ್ನಮ್ಮ ಅವರ ನಿಧನದಿಂದ ದೇವೇಗೌಡರ ಕುಟುಂಬ ಮಾತ್ರವಲ್ಲದೆ ರಾಜ್ಯ ರಾಜಕೀಯ ವಲಯ ಹಾಗೂ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಸಾವಿರಾರು ಜನರು ಭಾವುಕರಾಗಿ ಅಂತಿಮ ವಿದಾಯ ಹೇಳಿದರು.



