ರಿಯಾಲಿಟಿ ಶೋ ಲೋಕದ ಸುಲ್ತಾನ್ ‘ಬಿಗ್ ಬಾಸ್’ ಈ ಬಾರಿ ಭಾರತೀಯ ಕಿರುತೆರೆಯಲ್ಲಿ ಮುಂಚೂಣಿಯ ಸದ್ದು ಮಾಡಲು ಸಜ್ಜಾಗಿದೆ. ಜಿಯೋಸ್ಟಾರ್ ನೆಟ್‌ವರ್ಕ್ ಮುಂಬರುವ ಸೆಪ್ಟೆಂಬರ್ 2026ರ ಹಬ್ಬದ ಸೀಸನ್‌ನಿಂದ ಭಾರತದಾದ್ಯಂತ ಏಕಕಾಲಕ್ಕೆ ಬರೋಬ್ಬರಿ 6 ಭಾಷೆಗಳಲ್ಲಿ ‘ಬಿಗ್ ಬಾಸ್’ ಮೆಗಾ ಲಾಂಚ್ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ಈ ಮೆಗಾ ಸಂಭ್ರಮದ ಮೆರಗು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಅಭಿಮಾನಿಗಳ ನೆಚ್ಚಿನ ‘ದಾದಾ’ ಸೌರವ್ ಗಂಗೂಲಿ ಅವರಿಂದ ಇನ್ನೂ ಹೆಚ್ಚಾಗಿದೆ.
ಬಿಗ್ ಬಾಸ್ ಬಾಂಗ್ಲಾ ಕಂಬ್ಯಾಕ್, ಸಾರಥಿಯಾದ ಸೌರವ್ ಗಂಗೂಲಿ!
ದೀರ್ಘಾವಧಿಯ ವಿರಾಮದ ನಂತರ ಕಂಬ್ಯಾಕ್ ಮಾಡುತ್ತಿರುವ ‘ಬಿಗ್ ಬಾಸ್ ಬಾಂಗ್ಲಾ’ ಆವೃತ್ತಿಗೆ ಸೌರವ್ ಗಂಗೂಲಿ ನಿರೂಪಕರಾಗಿ ಆಯ್ಕೆಯಾಗಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ತಮ್ಮ ಆಕ್ರಮಣಕಾರಿ ನಾಯಕತ್ವ ಹಾಗೂ ಬಂಗಾಳಿ ಕಿರುತೆರೆಯಲ್ಲಿ ಯಶಸ್ವಿ ಕ್ವಿಜ್ ಶೋಗಳ ಮೂಲಕ ವೀಕ್ಷಕರ ಮನಗೆದ್ದಿದ್ದ ದಾದಾ, ಇದೀಗ ‘ಬಿಗ್ ಬಾಸ್ ಬಾಂಗ್ಲಾ’ವನ್ನು ಹೇಗೆ ನಡೆಸಿಕೊಡಲಿದ್ದಾರೆ ಎಂಬ ತೀವ್ರ ಕುತೂಹಲ ಮೂಡಿದೆ. ಈಗಾಗಲೇ ‘ಸ್ಟಾರ್ ಜಲ್ಸಾ’ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ‘ಬಿಗ್ ಬಾಸ್ ಬಾಂಗ್ಲಾ’ದ ಸಣ್ಣ ಝಲಕ್ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
6 ಭಾಷೆಗಳಲ್ಲಿ ಸೂಪರ್‌ಸ್ಟಾರ್‌ಗಳ ಅಬ್ಬರ: ಸುದೀಪ್, ಸಲ್ಮಾನ್ ಜೊತೆ ಗಂಗೂಲಿ!
ಈ ಬಾರಿ ಜಿಯೋಸ್ಟಾರ್ ನೆಟ್‌ವರ್ಕ್‌ನಲ್ಲಿ ಸೆಪ್ಟೆಂಬರ್‌ನಿಂದ ಭಾರತದಾದ್ಯಂತ ಆರಂಭವಾಗಲಿರುವ 6 ಭಾಷೆಗಳ ‘ಬಿಗ್ ಬಾಸ್’ ಆವೃತ್ತಿಗಳನ್ನು ಆಯಾ ಭಾಷೆಯ ಮಹಾನಾಯಕರು ಮುನ್ನಡೆಸಲಿದ್ದಾರೆ. ‘ಬಿಗ್ ಬಾಸ್’ ಕನ್ನಡ ಆವೃತ್ತಿಯನ್ನು ಎಂದಿನಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆಸಿಕೊಡಲಿದ್ದು, ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್, ತಮಿಳಿನಲ್ಲಿ ವಿಜಯ್ ಸೇತುಪತಿ, ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ ಹಾಗೂ ಮಲಯಾಳಂನಲ್ಲಿ ನಟ ಮೋಹನ್ ಲಾಲ್ ನಿಸ್ಸಂಶಯವಾಗಿ ನಿರೂಪಕರಾಗಿ ಮೋಡಿ ಮಾಡಲಿದ್ದಾರೆ. ಈ ಎಲ್ಲಾ ಆವೃತ್ತಿಗಳು ಟಿವಿಯಲ್ಲಿ ಸ್ಟಾರ್ ನೆಟ್‌ವರ್ಕ್ ಹಾಗೂ ಡಿಜಿಟಲ್‌ನಲ್ಲಿ ‘ಜಿಯೋಹಾಟ್‌ಸ್ಟಾರ್’ ಆ್ಯಪ್‌ನಲ್ಲಿ ಲೈವ್ ಪ್ರಸಾರವಾಗಲಿವೆ.
ಕ್ರಿಕೆಟ್‌ನಿಂದ ರಿಯಾಲಿಟಿ ಶೋವರೆಗೆ ‘ದಾದಾ’ ವರ್ಣರಂಜಿತ ಜರ್ನಿ
ಪ್ರಸ್ತುತ ‘ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್’ ಅಧ್ಯಕ್ಷರಾಗಿ ಹಾಗೂ ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿ ಸಕ್ರಿಯರಾಗಿರುವ ಸೌರವ್ ಗಂಗೂಲಿ ಅವರಿಗೆ ‘ಬಿಗ್ ಬಾಸ್’ ಸಂಪೂರ್ಣ ವಿಭಿನ್ನ ವೇದಿಕೆಯಾಗಲಿದೆ. ಈ ಹಿಂದೆ ಬಿಸಿಸಿಐ ಅಧ್ಯಕ್ಷರಾಗಿಯೂ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದ ಗಂಗೂಲಿ, ಈಗ ಮೈದಾನದಿಂದ ಕಿರುತೆರೆಯ ಅತ್ಯಂತ ದೊಡ್ಡ ರಿಯಾಲಿಟಿ ಶೋ ಅಂಗಳಕ್ಕೆ ಧುಮುಕಿರುವುದು ಅವರ ಅಭಿಮಾನಿಗಳಲ್ಲಿ ಹೊಸ ಚೈತನ್ಯ ಮೂಡಿಸಿದೆ.
‘ಇಂಡಿಯಾಸ್ ಬಿಗ್ ರಿಯಾಲಿಟಿ’: ಐತಿಹಾಸಿಕ ಕಾಫಿ ಟೇಬಲ್ ಬುಕ್ ಬಿಡುಗಡೆ
ಈ ಐತಿಹಾಸಿಕ ಲಾಂಚ್ ಸಂಭ್ರಮಿಸಲು ಜಿಯೋಸ್ಟಾರ್ ಸಂಸ್ಥೆಯು ‘ಇಂಡಿಯಾಸ್ ಬಿಗ್ ರಿಯಾಲಿಟಿ’ ಎಂಬ ವಿಶೇಷ ಕಾಫಿ ಟೇಬಲ್ ಬುಕ್ ಅನ್ನು ಅನಾವರಣಗೊಳಿಸಿದೆ. ಕಳೆದ ಎರಡು ದಶಕಗಳಲ್ಲಿ ‘ಬಿಗ್ ಬಾಸ್’ ಶೋ ವಿವಿಧ ಭಾಷೆಗಳಲ್ಲಿ ಹೇಗೆ ಬೆಳೆದುಬಂತು, ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೇಗೆ ಸಂಪಾದಿಸಿತು ಮತ್ತು ಬ್ರ್ಯಾಂಡ್‌ಗಳ ಜೊತೆಗಿನ ಯಶಸ್ವಿ ಪಯಣ ಹೇಗಿತ್ತು ಎಂಬುದರ ಸಂಪೂರ್ಣ ಚಿತ್ರಣವನ್ನು ಈ ಪುಸ್ತಕ ಒಳಗೊಂಡಿದೆ.
500 ಮಿಲಿಯನ್ ವೀಕ್ಷಕರು, 438 ಬಿಲಿಯನ್ ನಿಮಿಷಗಳ ವೀಕ್ಷಣೆ, ಸಾರ್ವಕಾಲಿಕ ದಾಖಲೆ
ಜಿಯೋಸ್ಟಾರ್ ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಕಿರುತೆರೆ ಜಗತ್ತನ್ನೇ ಬೆರಗುಗೊಳಿಸಿವೆ. 2025ರ ಸೀಸನ್‌ನಲ್ಲಿ ಭಾರತದಾದ್ಯಂತ ಎಲ್ಲಾ ಭಾಷೆಗಳಿಂದ ಬರೋಬ್ಬರಿ 500 ಮಿಲಿಯನ್‌ಗೂ ಅಧಿಕ ವೀಕ್ಷಕರನ್ನು ‘ಬಿಗ್ ಬಾಸ್’ ತಲುಪಿದೆ. ವಿಶೇಷ ಅಂದರೆ 438 ಬಿಲಿಯನ್‌ಗೂ ಹೆಚ್ಚಿನ ನಿಮಿಷಗಳ ವೀಕ್ಷಣೆಯನ್ನು ಪಡೆದಿದೆ. ಈ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ. ಈ ಶೋ ಜೊತೆ 46 ವಿಭಿನ್ನ ರಂಗಗಳ 625 ಬ್ರ್ಯಾಂಡ್‌ಗಳು ಜಾಹೀರಾತುದಾರರಾಗಿ ಕೈಜೋಡಿಸಿದ್ದು, ಇದರಲ್ಲಿ 49 ಹೊಸ ಬ್ರ್ಯಾಂಡ್‌ಗಳು ಮೊದಲ ಬಾರಿಗೆ ಲಗ್ಗೆಯಿಟ್ಟಿವೆ.
9.32 ಬಿಲಿಯನ್ ವೋಟ್ಸ್, 30 ಮಿಲಿಯನ್ ಮೀಮ್ಸ್: ಸೋಶಿಯಲ್ ಮೀಡಿಯಾದಲ್ಲಿ ಹೊಸ ಅಲೆಯಲ್ಲಿ ಬಿಗ್ ಬಾಸ್
24×7 ಲೈವ್ ಸ್ಟ್ರೀಮಿಂಗ್, ವೀಕ್ಷಕರ ವೋಟಿಂಗ್ ಹಾಗೂ ಲೈವ್ ಚಾಟ್ ಮೂಲಕ ಅಭಿಮಾನಿಗಳು ‘ಬಿಗ್ ಬಾಸ್’ ಶೋ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಕಳೆದ ಸೀಸನ್‌ನಲ್ಲಿ ಜಿಯೋಹಾಟ್‌ಸ್ಟಾರ್ ಆ್ಯಪ್‌ನಲ್ಲಿ ವೀಕ್ಷಕರಿಂದ ಬರೋಬ್ಬರಿ 9.32 ಬಿಲಿಯನ್‌ಗೂ ಅಧಿಕ ಮತಗಳು ಚಲಾವಣೆಯಾಗಿದ್ದು, 43 ಮಿಲಿಯನ್ ಲೈವ್ ಚಾಟ್‌ಗಳು ನಡೆದಿವೆ. ಅಷ್ಟೇ ಅಲ್ಲದೆ, ಸೋಶಿಯಲ್ ಮೀಡಿಯಾದಲ್ಲೂ 1.7 ಬಿಲಿಯನ್ ಎಂಗೇಜ್‌ಮೆಂಟ್ ಪಡೆದಿರುವ ‘ಬಿಗ್ ಬಾಸ್’, 2025ರಲ್ಲೊಂದೇ 30 ಮಿಲಿಯನ್‌ಗೂ ಹೆಚ್ಚು ವೈರಲ್ ಮೀಮ್ಸ್‌ಗಳಿಗೆ ವಸ್ತುವಾಗಿದೆ.
ಸೆಪ್ಟೆಂಬರ್‌ನಿಂದ ಭಾರತದಾದ್ಯಂತ ರಿಯಾಲಿಟಿ ಹಬ್ಬ!
ಸೆಪ್ಟೆಂಬರ್‌ನಲ್ಲಿ ಆರಂಭವಾಗಲಿರುವ ಈ 6 ಭಾಷೆಗಳ ‘ಬಿಗ್ ಬಾಸ್’ ಮಹಾಸಂಗಮವು ಭಾರತೀಯ ಪ್ರೇಕ್ಷಕರಿಗೆ ಅಸಲಿ ಎಂಟರ್‌ಟೈನ್‌ಮೆಂಟ್ ನೀಡಲು ಸಜ್ಜಾಗಿದೆ. ಒಂದು ಕಡೆ ದಾದಾ ಸೌರವ್ ಗಂಗೂಲಿಯ ಹೊಸ ಇನಿಂಗ್ಸ್, ಇನ್ನೊಂದೆಡೆ ಸುದೀಪ್ ಹಾಗೂ ಸಲ್ಮಾನ್ ಖಾನ್ ಅವರ ಹಳೆಯ ಗತ್ತು – ಇವೆಲ್ಲದರಿಂದ ಮುಂಬರುವ ಹಬ್ಬದ ಸೀಸನ್‌ನಲ್ಲಿ ‘ಬಿಗ್ ಬಾಸ್’ ವೇದಿಕೆ ಇನ್ನೂ ಹೆಚ್ಚು ಧಗಧಗಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.



