No menu items!
18.7 C
Munich
Saturday, August 1, 2026

30 ದಿನ ಸಕ್ಕರೆ ತಿನ್ನುವುದನ್ನು ನಿಲ್ಲಿಸಿದರೆ ದೇಹದಲ್ಲಿ ಏನೆಲ್ಲ ಬದಲಾವಣೆ ಆಗುತ್ತವೆ? ಇಲ್ಲಿದೆ ಮಾಹಿತಿ

Must read

30 ದಿನ ಸಕ್ಕರೆ ತಿನ್ನುವುದನ್ನು ನಿಲ್ಲಿಸಿದರೆ ದೇಹದಲ್ಲಿ ಏನೆಲ್ಲ ಬದಲಾವಣೆ ಆಗುತ್ತವೆ? ಇಲ್ಲಿದೆ ಮಾಹಿತಿ

ಸಕ್ಕರೆಯ ಅತಿಯಾದ ಸೇವನೆಯು ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು, ಸ್ಥೂಲಕಾಯ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬುದು ಈಗಾಗಲೇ ಹಲವು ಅಧ್ಯಯನಗಳಿಂದ ದೃಢಪಟ್ಟಿದೆ. ಆದ್ದರಿಂದ ಆರೋಗ್ಯ ತಜ್ಞರು ಸಂಸ್ಕರಿಸಿದ (Refined) ಸಕ್ಕರೆಯ ಬಳಕೆಯನ್ನು ಮಿತಿಗೊಳಿಸಲು ಸಲಹೆ ನೀಡುತ್ತಾರೆ. ಒಂದು ತಿಂಗಳ ಕಾಲ ಕೃತಕ ಸಕ್ಕರೆಯಿಂದ ದೂರವಿದ್ದರೆ ದೇಹದಲ್ಲಿ ಹಲವು ಸಕಾರಾತ್ಮಕ ಬದಲಾವಣೆಗಳು ಕಾಣಿಸಿಕೊಳ್ಳಬಹುದು ಎಂದು ಕೆಲವು ವೈದ್ಯಕೀಯ ಅಧ್ಯಯನಗಳು ಸೂಚಿಸಿವೆ.
ಹಣ್ಣು, ಹಾಲು ಮತ್ತು ತರಕಾರಿಗಳಲ್ಲಿ ನೈಸರ್ಗಿಕವಾಗಿ ಇರುವ ಸಕ್ಕರೆಗಿಂತ, ಸಿಹಿತಿಂಡಿಗಳು, ಬಿಸ್ಕತ್, ಚಾಕೊಲೇಟ್, ಐಸ್ಕ್ರೀಮ್ ಹಾಗೂ ಸಕ್ಕರೆ ಮಿಶ್ರಿತ ಪಾನೀಯಗಳಲ್ಲಿರುವ ಸಂಸ್ಕರಿಸಿದ ಸಕ್ಕರೆಯೇ ಆರೋಗ್ಯದ ಮೇಲೆ ಹೆಚ್ಚು ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಒಂದು ತಿಂಗಳು ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿದರೆ ಯಾವ ರೀತಿಯ ಬದಲಾವಣೆಗಳು ಕಾಣಿಸಿಕೊಳ್ಳಬಹುದು ಎಂಬುದನ್ನು ನೋಡೋಣ.
ಮೊದಲ ವಾರ: ಸಕ್ಕರೆ ತಿನ್ನುವ ಬಯಕೆ ಹೆಚ್ಚಾಗಬಹುದು
ಸಕ್ಕರೆಯ ಆಹಾರಗಳನ್ನು ಏಕಾಏಕಿ ನಿಲ್ಲಿಸಿದ ಆರಂಭಿಕ ದಿನಗಳಲ್ಲಿ ಮೂಡ್ ಸ್ವಿಂಗ್, ಹಸಿವು ಮತ್ತು ಸಿಹಿ ತಿನ್ನುವ ಬಯಕೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದರೆ ಈ ಹಂತ ತಾತ್ಕಾಲಿಕವಾಗಿದ್ದು, ಕೆಲವೇ ದಿನಗಳಲ್ಲಿ ನಾಲಿಗೆ ಹೊಸ ರುಚಿಗೆ ಹೊಂದಿಕೊಳ್ಳಲು ಆರಂಭಿಸುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.
ಎರಡನೇ ವಾರ: ಶಕ್ತಿ ಹೆಚ್ಚಾಗಲು ಆರಂಭ
ಎರಡನೇ ವಾರದಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟ ಸ್ಥಿರವಾಗಲು ಆರಂಭಿಸುತ್ತದೆ. ಇದರಿಂದ ದಿನವಿಡೀ ಶಕ್ತಿಯ ಮಟ್ಟ ಉತ್ತಮವಾಗುವುದರ ಜೊತೆಗೆ ಆಗಾಗ್ಗೆ ಹಸಿವಾಗುವ ಸಮಸ್ಯೆಯೂ ಕಡಿಮೆಯಾಗಬಹುದು.
ಮೂರನೇ ವಾರ: ಉತ್ತಮ ನಿದ್ರೆ, ಕಡಿಮೆ ಆಯಾಸ
ಸಕ್ಕರೆ ಸೇವನೆ ಕಡಿಮೆಯಾದಂತೆ ನಿದ್ರೆಯ ಗುಣಮಟ್ಟ ಸುಧಾರಿಸುವ ಸಾಧ್ಯತೆ ಇದೆ. ವಿಶೇಷವಾಗಿ ಮಧ್ಯಾಹ್ನದ ವೇಳೆಯಲ್ಲಿ ಕಾಣಿಸಿಕೊಳ್ಳುವ ಆಯಾಸ ಕಡಿಮೆಯಾಗಬಹುದು. ಉತ್ತಮ ನಿದ್ರೆ ದೇಹ ಮತ್ತು ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.
ನಾಲ್ಕನೇ ವಾರ: ತೂಕ ಇಳಿಕೆಗೆ ನೆರವು
ಸಂಸ್ಕರಿಸಿದ ಸಕ್ಕರೆ ಮತ್ತು ಸಕ್ಕರೆ ಮಿಶ್ರಿತ ಪಾನೀಯಗಳ ಸೇವನೆಯನ್ನು ಕಡಿಮೆ ಮಾಡುವುದರಿಂದ ದೇಹದ ತೂಕ ಹಾಗೂ ಸೊಂಟದ ಸುತ್ತಳತೆ ಇಳಿಕೆಯಾಗಲು ಸಹಾಯವಾಗಬಹುದು. ಆರೋಗ್ಯಕರ ಆಹಾರ ಮತ್ತು ವ್ಯಾಯಾಮದೊಂದಿಗೆ ಈ ಬದಲಾವಣೆ ಇನ್ನಷ್ಟು ಪರಿಣಾಮಕಾರಿಯಾಗಬಹುದು.
ಚರ್ಮದ ಆರೋಗ್ಯಕ್ಕೂ ಪ್ರಯೋಜನ
ಸಕ್ಕರೆ ಸೇವನೆ ಕಡಿಮೆ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚಾಗಲು ಸಹಾಯವಾಗಬಹುದು. ಅತಿಯಾದ ಸಕ್ಕರೆ ಸೇವನೆಯು ಚರ್ಮದಲ್ಲಿನ ಕಾಲಜನ್ ಮತ್ತು ಇಲಾಸ್ಟಿನ್ ಮೇಲೆ ಪರಿಣಾಮ ಬೀರಬಹುದಾದ್ದರಿಂದ, ಸಕ್ಕರೆಯನ್ನು ನಿಯಂತ್ರಿಸುವುದರಿಂದ ಚರ್ಮದ ಆರೋಗ್ಯ ಉತ್ತಮವಾಗಿರಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸಿವೆ.
ಆರೋಗ್ಯ ತಜ್ಞರ ಪ್ರಕಾರ, ಸಂಸ್ಕರಿಸಿದ ಸಕ್ಕರೆಯನ್ನು ಸಂಪೂರ್ಣವಾಗಿ ತ್ಯಜಿಸುವ ಅಗತ್ಯವಿಲ್ಲ. ಆದರೆ ಅದರ ಪ್ರಮಾಣವನ್ನು ಮಿತಿಗೊಳಿಸಿ, ಹಣ್ಣು, ತರಕಾರಿ, ಧಾನ್ಯಗಳು ಹಾಗೂ ನೈಸರ್ಗಿಕ ಆಹಾರಗಳಿಗೆ ಆದ್ಯತೆ ನೀಡುವುದು ಆರೋಗ್ಯಕರ ಜೀವನಶೈಲಿಗೆ ಸಹಕಾರಿಯಾಗುತ್ತದೆ.

- Advertisement -spot_img

More articles

- Advertisement -spot_img

Latest article