ವಾಹನ ಸವಾರರಿಗೆ ಮತ್ತೆ ಶುಲ್ಕದ ಬರೆ; ಎಮಿಷನ್ ಟೆಸ್ಟ್ ದರ ಏರಿಕೆ, PUC ಪ್ರಮಾಣಪತ್ರಕ್ಕೆ ದುಪ್ಪಟ್ಟು ಹಣ!
ಬೆಂಗಳೂರು: ಇಂಧನ ದರ ಏರಿಕೆ ಹಾಗೂ ವಾಹನಗಳ ನಿರ್ವಹಣಾ ವೆಚ್ಚದಿಂದ ಕಂಗಾಲಾಗಿರುವ ವಾಹನ ಸವಾರರಿಗೆ ರಾಜ್ಯ ಸರ್ಕಾರ ಮತ್ತೊಂದು ಹೊರೆ ನೀಡಿದೆ. ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUC) ಪಡೆಯಲು ನಿಗದಿಪಡಿಸಲಾಗಿದ್ದ ಶುಲ್ಕವನ್ನು ಹೆಚ್ಚಿಸಲು ಸಾರಿಗೆ ಇಲಾಖೆ ಅನುಮತಿ ನೀಡಿದೆ. ಇದರಿಂದ ಇನ್ನು ಮುಂದೆ ಪಿಯುಸಿ ಪ್ರಮಾಣಪತ್ರ ಪಡೆಯಲು ವಾಹನ ಮಾಲೀಕರು ಹೆಚ್ಚಿನ ಹಣ ಪಾವತಿಸಬೇಕಾಗಲಿದೆ.
ಮಾಲಿನ್ಯ ಪರೀಕ್ಷಾ ಕೇಂದ್ರಗಳ ಕಾರ್ಯಾಚರಣೆ ವೆಚ್ಚ, ವಿದ್ಯುತ್ ಬಿಲ್ ಹಾಗೂ ಪರೀಕ್ಷಾ ಉಪಕರಣಗಳ ದರ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಪಿಯುಸಿ ಪ್ರಮಾಣಪತ್ರದ ಶುಲ್ಕ ಪರಿಷ್ಕರಣೆ ಮಾಡಬೇಕು ಎಂದು ಮಾಲಿನ್ಯ ಪರೀಕ್ಷಾ ಕೇಂದ್ರಗಳ ಮಾಲೀಕರ ಸಂಘ ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಿತ್ತು. ಈ ಮನವಿಯನ್ನು ಪುರಸ್ಕರಿಸಿರುವ ಸಾರಿಗೆ ಇಲಾಖೆ, ಶುಲ್ಕ ಹೆಚ್ಚಳಕ್ಕೆ ಅನುಮತಿ ನೀಡಿದೆ.
2022ರ ಏಪ್ರಿಲ್ನಲ್ಲಿ ಪಿಯುಸಿ ಪ್ರಮಾಣಪತ್ರದ ಶುಲ್ಕವನ್ನು ಈ ಹಿಂದೆ ಪರಿಷ್ಕರಿಸಲಾಗಿತ್ತು. ಇದೀಗ ನಾಲ್ಕು ವರ್ಷಗಳ ಬಳಿಕ ಮತ್ತೊಮ್ಮೆ ದರ ಹೆಚ್ಚಳಕ್ಕೆ ಅನುಮತಿ ದೊರೆತಿದ್ದು, ಇದರ ಪರಿಣಾಮ ನೇರವಾಗಿ ವಾಹನ ಸವಾರರ ಮೇಲೆ ಬೀಳಲಿದೆ.
ದರ ಹೆಚ್ಚಳಕ್ಕೆ ಅನುಮತಿ ನೀಡಿರುವ ಸಾರಿಗೆ ಇಲಾಖೆ, ಮಾಲಿನ್ಯ ಪರೀಕ್ಷಾ ಕೇಂದ್ರಗಳಿಗೆ ಹಲವು ಷರತ್ತುಗಳನ್ನು ವಿಧಿಸಿದೆ. ಪರೀಕ್ಷಾ ಕೇಂದ್ರಗಳಲ್ಲಿ ತಜ್ಞ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು. ಪರೀಕ್ಷಾ ಸಾಧನಗಳ ಮರುಮಾಪನವನ್ನು ನಿಯಮಿತವಾಗಿ ನಡೆಸಬೇಕು. ವಾಹನಗಳ ಮಾಲಿನ್ಯ ಪರೀಕ್ಷೆಗೆ ಬಳಸುವ ಗ್ಯಾಸ್ ಅನಾಲೈಸರ್ಗಳನ್ನು ಕೂಡ ನಿಯಮಿತವಾಗಿ ಪರಿಶೀಲಿಸಬೇಕು ಎಂದು ಸೂಚಿಸಲಾಗಿದೆ.
ಪರೀಕ್ಷಾ ಸಾಧನಗಳನ್ನು ಕೊನೆಯ ಬಾರಿ ಪರಿಶೀಲಿಸಿದ ದಿನಾಂಕವನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಸಾರಿಗೆ ಇಲಾಖೆ ಸೂಚಿಸಿದೆ.
ಇನ್ನು ಮುಂದೆ ಕೈಬರಹದ ಪಿಯುಸಿ ಪ್ರಮಾಣಪತ್ರ ನೀಡುವುದನ್ನು ನಿಷೇಧಿಸಲಾಗಿದ್ದು, ಪ್ರಮಾಣಪತ್ರವನ್ನು ಕಡ್ಡಾಯವಾಗಿ ಗಣಕೀಕೃತ ರೂಪದಲ್ಲೇ ನೀಡಬೇಕು ಎಂದು ಷರತ್ತು ವಿಧಿಸಲಾಗಿದೆ.
ಕೇಂದ್ರ ಮೋಟಾರು ವಾಹನ ನಿಯಮಗಳು-1989ರ ನಿಯಮ 115ರ ಪ್ರಕಾರ, ವಾಹನದ ಹೊರಸೂಸುವಿಕೆ ನಿಗದಿತ ಮಿತಿಯೊಳಗೆ ಇದ್ದರೆ ಮಾತ್ರ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ನೀಡಬೇಕು ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.
ಅದೇ ರೀತಿ, ಪರೀಕ್ಷಾ ಕೇಂದ್ರದ ಪರವಾನಗಿ ಪತ್ರವನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸುವುದು ಕಡ್ಡಾಯವಾಗಿದೆ.
BS-4 ಮತ್ತು BS-6 ವಾಹನಗಳಿಗೆ ನೀಡಲಾಗುವ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವು 12 ತಿಂಗಳವರೆಗೆ ಮಾನ್ಯವಾಗಿರಲಿದೆ ಎಂದು ತಿಳಿಸಲಾಗಿದೆ.
ವಿವಿಧ ವಸ್ತುಗಳು ಹಾಗೂ ಸೇವೆಗಳ ದರ ಏರಿಕೆಯಿಂದ ಪರೀಕ್ಷಾ ಕೇಂದ್ರಗಳ ನಿರ್ವಹಣಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪರಿಷ್ಕೃತ ದರ ಜಾರಿಗೆ ತರಲು ಅನುಮತಿ ನೀಡಲಾಗಿದೆ. ಮಾಲಿನ್ಯ ಪರೀಕ್ಷಾ ಕೇಂದ್ರಗಳ ನಿರ್ವಾಹಕರ ಸಂಘದ ಮನವಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದ್ದು, ನಾಲ್ಕು ವರ್ಷಗಳ ಬಳಿಕ ಪಿಯುಸಿ ಪ್ರಮಾಣಪತ್ರದ ಶುಲ್ಕ ಮತ್ತೊಮ್ಮೆ ಏರಿಕೆಯಾಗಿದೆ.



