ದರ್ಶನ್ʼಗೆ ಮತ್ತಷ್ಟು ಸಂಕಷ್ಟ; ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆಗೆ ಕೋರ್ಟ್ ಮುಹೂರ್ತ ಫಿಕ್ಸ್
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ಪ್ರಕರಣದ 14ನೇ ಆರೋಪಿಯಾಗಿರುವ ಪ್ರದೋಷ್ ಅವರು ಮಾಫಿ ಸಾಕ್ಷಿ (ಅಪ್ರೂವರ್) ಆಗಲು ಕೋರ್ಟ್ ಈಗಾಗಲೇ ಅನುಮತಿ ನೀಡಿದ್ದು, ಇದೀಗ ಸಾಕ್ಷ್ಯ ದಾಖಲಿಸಲು ನ್ಯಾಯಾಲಯ ದಿನಾಂಕ ನಿಗದಿಪಡಿಸಿದೆ.
ಪ್ರದೋಷ್ ಅವರಿಗೆ ಸಾಕ್ಷ್ಯ ನೀಡುವಂತೆ ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯ ವಿಟ್ನೆಸ್ ಸಮನ್ಸ್ ಜಾರಿಗೊಳಿಸಿದೆ. ಪ್ರಕರಣದ ವಿಚಾರಣೆ ವೇಳೆ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಅವರು ಪ್ರದೋಷ್ ಅವರನ್ನು ಸಾಕ್ಷಿಯಾಗಿ ವಿಚಾರಣೆ ನಡೆಸಲು ಸಮನ್ಸ್ ಜಾರಿಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಮನವಿಯನ್ನು ಪರಿಗಣಿಸಿದ ನ್ಯಾಯಾಲಯ, ಪ್ರದೋಷ್ ಅವರಿಗೆ ಸಮನ್ಸ್ ಜಾರಿಗೊಳಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದೆ. 59ನೇ ಸಿಸಿಹೆಚ್ ನ್ಯಾಯಾಧೀಶೆ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಈ ಆದೇಶ ನೀಡಿದ್ದಾರೆ.
ಇತ್ತೀಚೆಗಷ್ಟೇ ಪ್ರದೋಷ್ ಅವರ ಮಾಫಿ ಸಾಕ್ಷಿ ಅರ್ಜಿಯನ್ನು ನ್ಯಾಯಾಲಯ ಅಂಗೀಕರಿಸಿತ್ತು. ಸಿಸಿಹೆಚ್ 42ನೇ ನ್ಯಾಯಾಲಯ ಪ್ರದೋಷ್ ಅವರಿಗೆ ಅಪ್ರೂವರ್ ಆಗಲು ಅನುಮತಿ ನೀಡಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ತಿಳಿದಿರುವ ಸಂಪೂರ್ಣ ಸತ್ಯವನ್ನು ನ್ಯಾಯಾಲಯದ ಮುಂದೆ ಹೇಳಬೇಕಾಗಿದೆ.
ಮಾಫಿ ಸಾಕ್ಷಿಯಾಗಿ ಹೇಳಿಕೆ ನೀಡುವ ಸಂದರ್ಭದಲ್ಲಿ ಪ್ರದೋಷ್ ಸುಳ್ಳು ಹೇಳಿದರೆ ಅಥವಾ ಪ್ರಾಸಿಕ್ಯೂಷನ್ಗೆ ಸಹಕರಿಸದಿದ್ದರೆ, ಅವರ ವಿರುದ್ಧ ಕ್ರಮ ಕೈಗೊಳ್ಳುವ ಅವಕಾಶವೂ ಇದೆ.
ಪ್ರದೋಷ್ ಅಪ್ರೂವರ್ ಆಗಿ ದರ್ಶನ್ ಸೇರಿದಂತೆ ಇತರ ಆರೋಪಿಗಳ ವಿರುದ್ಧ ಸಾಕ್ಷ್ಯ ನೀಡಲಿರುವ ಹಿನ್ನೆಲೆಯಲ್ಲಿ ಪ್ರಕರಣದ ಉಳಿದ 16 ಆರೋಪಿಗಳಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಪ್ರಕರಣದ ಘಟನೆ, ಆರೋಪಿಗಳ ಪಾತ್ರ ಹಾಗೂ ಹತ್ಯೆಯ ನಂತರ ನಡೆದ ಬೆಳವಣಿಗೆಗಳ ಕುರಿತು ಪ್ರದೋಷ್ ಅವರ ಹೇಳಿಕೆ ಮಹತ್ವ ಪಡೆದುಕೊಳ್ಳಲಿದೆ.



