ಬಿಟ್ ಕಾಯಿನ್ ಹಗರಣ: ಹ್ಯಾಕರ್ ಶ್ರೀಕಿ, ರಾಬಿನ್ ಖಂಡೇವಾಲ ಜಾಮೀನು ಅರ್ಜಿ ವಜಾ
ಬೆಂಗಳೂರು: ಬಿಟ್ಕಾಯಿನ್ ಹಗರಣ ಪ್ರಕರಣದಲ್ಲಿ ಆರೋಪಿಗಳಾಗಿರುವ ಹ್ಯಾಕರ್ ಶ್ರೀಕಿ ಹಾಗೂ ರಾಬಿನ್ ಖಂಡೇವಾಲ ಅವರಿಗೆ ಮತ್ತೆ ಹಿನ್ನಡೆಯಾಗಿದೆ. ಇಬ್ಬರೂ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಇ.ಡಿ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.
ಬಿಟ್ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡು ಹಲವು ಆರೋಪಿಗಳ ನಿವಾಸಗಳ ಮೇಲೆ ದಾಳಿ ನಡೆಸಿದ್ದರು. ತನಿಖೆಯ ಭಾಗವಾಗಿ ಹ್ಯಾಕರ್ ಶ್ರೀಕಿ, ರಾಬಿನ್ ಖಂಡೇವಾಲ ಹಾಗೂ ಸುಖೇಶ್ ಹೆಗ್ಡೆ ಅವರನ್ನು ಇ.ಡಿ. ಅಧಿಕಾರಿಗಳು ಬಂಧಿಸಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಯುವ ನಾಯಕ ಮೊಹಮ್ಮದ್ ನಲಪಾಡ್, ಶ್ರೀಕಿ, ರಾಬಿನ್ ಖಂಡೇವಾಲ ಹಾಗೂ ಸುಖೇಶ್ ಹೆಗ್ಡೆ ಅವರ ನಿವಾಸಗಳ ಮೇಲೂ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದರು. ತನಿಖೆ ಪೂರ್ಣಗೊಳಿಸಿದ ಬಳಿಕ ಮೊಹಮ್ಮದ್ ನಲಪಾಡ್ ಸೇರಿದಂತೆ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಾಗಿತ್ತು.
ಚಾರ್ಜ್ಶೀಟ್ ಸಲ್ಲಿಕೆಯಾದ ಕೆಲ ದಿನಗಳ ಬಳಿಕ ಶ್ರೀಕಿ ಹಾಗೂ ರಾಬಿನ್ ಖಂಡೇವಾಲ ಅವರು ಪ್ರತ್ಯೇಕವಾಗಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳಿಗೆ ಇ.ಡಿ. ಪರ ವಿಶೇಷ ಸರ್ಕಾರಿ ಅಭಿಯೋಜಕ ಮಧು ಆರ್. ರಾವ್ ಆಕ್ಷೇಪಣೆ ಸಲ್ಲಿಸಿದ್ದರು.
ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಇ.ಡಿ. ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಉಭಯ ಪಕ್ಷಗಳ ವಾದ-ಪ್ರತಿವಾದ ಆಲಿಸಿದ ಬಳಿಕ ಇ.ಡಿ. ವಿಶೇಷ ನ್ಯಾಯಾಲಯವು ಶ್ರೀಕಿ ಹಾಗೂ ರಾಬಿನ್ ಖಂಡೇವಾಲ ಅವರ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದೆ.
ಹೀಗಾಗಿ ಬಿಟ್ಕಾಯಿನ್ ಹಗರಣ ಪ್ರಕರಣದಲ್ಲಿ ಇಬ್ಬರಿಗೂ ಸದ್ಯಕ್ಕೆ ಜಾಮೀನು ದೊರೆಯದಂತಾಗಿದೆ.



