3 ವರ್ಷಗಳಿಂದ ಜೆಡಿಎಸ್ನಿಂದ ಅವಮಾನ: ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ ಜಿ.ಟಿ. ದೇವೇಗೌಡ
ಮೈಸೂರು: ಕಳೆದ ಮೂರು ವರ್ಷಗಳಿಂದ ಜೆಡಿಎಸ್ನಿಂದ ತಮಗೆ ಅವಮಾನವಾಗಿದೆ ಎಂದು ಚಾಮುಂಡೇಶ್ವರಿ ಶಾಸಕ ಜಿ.ಟಿ. ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಜನರು ಆಯೋಜಿಸಿದ್ದ ರಾಜಕೀಯ ಮೆರವಣಿಗೆ ಕಾರ್ಯಕ್ರಮದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ವಿರುದ್ಧ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕಿದ್ದಾರೆ.
ನಾನು ಜೆಡಿಎಸ್ ಶಾಸಕನಾಗಿದ್ದರೂ ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಿಲ್ಲ. ಯಾವುದೇ ಜೆಡಿಎಸ್ ಸಮಾವೇಶಕ್ಕೂ ಕರೆಯದೆ ಅವಮಾನ ಮಾಡಲಾಗಿದೆ ಎಂದು ಜಿ.ಟಿ. ದೇವೇಗೌಡ ಆರೋಪಿಸಿದ್ದಾರೆ. ಈ ಅವಮಾನಕ್ಕೆ ಉತ್ತರ ನೀಡಲು ಕ್ಷೇತ್ರದ ಜನರು ಮೆರವಣಿಗೆ ನಡೆಸುತ್ತಿದ್ದಾರೆ. ಇದು ನನ್ನ ಶಕ್ತಿ ಪ್ರದರ್ಶನವಲ್ಲ, ಜನರು ನನಗೆ ತೋರಿಸುತ್ತಿರುವ ಪ್ರೀತಿಯ ಸಂಕೇತ ಎಂದು ಅವರು ಹೇಳಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷ ಮುಖ್ಯವಲ್ಲ, ಜಿ.ಟಿ. ದೇವೇಗೌಡ ಮಾತ್ರ ಮುಖ್ಯ. ಪಕ್ಷ ಯಾವುದೇ ಇರಲಿ, ಜನರಿಗೆ ಜಿ.ಟಿ. ದೇವೇಗೌಡ ಮುಖ್ಯ. ನನ್ನನ್ನು ಏಕಾಂಗಿಯಾಗಲು ಕ್ಷೇತ್ರದ ಜನರು ಬಿಡುವುದಿಲ್ಲ. ಸಾಯುವ ತನಕ ಏಕಾಂಗಿಯಾಗಿ ಈ ಜನರ ಸೇವೆ ಮಾಡುತ್ತೇನೆ ಎಂದು ಜಿಟಿಡಿ ತಿಳಿಸಿದ್ದಾರೆ.
ತಾವು ಹಿಂದೆ ಬಿಜೆಪಿಗೆ ತೆರಳಿದ್ದ ಸಂದರ್ಭದಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೂರನೇ ಸ್ಥಾನಕ್ಕೆ ಬಂದಿತ್ತು ಎಂದು ನೆನಪಿಸಿದ ಅವರು, ಇಲ್ಲಿನ ಜನರಿಗೆ ಪಕ್ಷಕ್ಕಿಂತ ಜಿ.ಟಿ. ದೇವೇಗೌಡ ಮುಖ್ಯ ಎಂದು ಹೇಳಿದ್ದಾರೆ. ನನ್ನ ವಿರುದ್ಧ ಎಂಥವರೇ ಚುನಾವಣೆಯಲ್ಲಿ ನಿಂತರೂ ಕ್ಷೇತ್ರದ ಜನರು ನನ್ನ ಕೈಬಿಟ್ಟಿಲ್ಲ ಎಂದು ಅವರು ತಿಳಿಸಿದ್ದಾರೆ.
ಮುಂದಿನ ಚುನಾವಣೆಯ ಸಂದರ್ಭದಲ್ಲಿ ಕ್ಷೇತ್ರದ ಜನರನ್ನು ಕರೆದು ಅವರ ಅಭಿಪ್ರಾಯದಂತೆ ನಡೆದುಕೊಳ್ಳುತ್ತೇನೆ ಎಂದು ಜಿ.ಟಿ. ದೇವೇಗೌಡ ಹೇಳಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಭ್ಯರ್ಥಿ ಯಾರು ಎಂಬುದನ್ನು ಜನರು ನೋಡುವುದಿಲ್ಲ, ನನ್ನ ಮುಖವನ್ನು ನೋಡುತ್ತಾರೆ ಎಂಬ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಜಿಟಿಡಿ ಈ ಮಾತುಗಳನ್ನು ಹೇಳಿದ್ದಾರೆ.
ಜೆಡಿಎಸ್ನಲ್ಲಿದ್ದರೂ ಪಕ್ಷದ ಕಾರ್ಯಕ್ರಮಗಳಿಂದ ದೂರವಿಟ್ಟಿರುವ ಬಗ್ಗೆ ಜಿ.ಟಿ. ದೇವೇಗೌಡ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವುದು ಇದೀಗ ಮೈಸೂರು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.



