ಕರ್ನಾಟಕದಲ್ಲಿ 37 ವರ್ಷಗಳ ಬಳಿಕ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘ ಚುನಾವಣೆ: ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆ
ಬೆಂಗಳೂರು: ಕರ್ನಾಟಕದ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಭಾರಿ ಸುದೀರ್ಘ ಅಂದರೆ ಬರೋಬ್ಬರಿ 37 ವರ್ಷಗಳ ಬಳಿಕ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ಮರುಜಾರಿಗೊಳಿಸಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಇಂದು ನಡೆದ ರಾಜ್ಯ ಸಚಿವ ಸಂಪುಟ (ಕ್ಯಾಬಿನೆಟ್) ಸಭೆಯಲ್ಲಿ ವಿದ್ಯಾರ್ಥಿ ಚುನಾವಣೆಗಳನ್ನು ಪುನರಾರಂಭಿಸಲು ಅಧಿಕೃತ ಅಸ್ತು ನೀಡಲಾಗಿದೆ.
1989ರಲ್ಲಿ ನಿಷೇಧಕ್ಕೊಳಗಾಗಿದ್ದ ಚುನಾವಣೆ: ಕಾಲೇಜು ಕ್ಯಾಂಪಸ್ಗಳಲ್ಲಿ ದಿನೇ ದಿನೇ ಹೆಚ್ಚುತ್ತಿದ್ದ ಹಿಂಸಾಚಾರ, ಗೂಂಡಾಗಿರಿ ಹಾಗೂ ರಾಜಕೀಯ ಹಸ್ತಕ್ಷೇಪದ ಹಿನ್ನೆಲೆಯಲ್ಲಿ 1989ರಲ್ಲಿ ಆಗಿನ ವೀರೇಂದ್ರ ಪಾಟೀಲ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ಸಂಪೂರ್ಣವಾಗಿ ನಿಷೇಧಿಸಿತ್ತು. ಇದೀಗ 37 ವರ್ಷಗಳ ಬಳಿಕ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಈ ನಿಷೇಧವನ್ನು ತೆರವುಗೊಳಿಸಿ ಮತ್ತೆ ಚುನಾವಣೆ ನಡೆಸಲು ಮುಂದಾಗಿದೆ.
ನಾಯಕತ್ವ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳ ಬೆಳೆಸಲು ನಿರ್ಧಾರ: ಯುವ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಹೊಣೆಗಾರಿಕೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಕ್ರಿಯವಾಗಿ ಬೆಳೆಸುವ ಸಲುವಾಗಿ ಈ ಚುನಾವಣೆಗಳನ್ನು ನಡೆಸಲು ಸರ್ಕಾರ ಅನುಮತಿ ಕೊಟ್ಟಿದೆ. ಆದರೆ, ಚುನಾವಣೆ ನಡೆಸುವ ಸಂಪೂರ್ಣ ಅಧಿಕಾರವನ್ನು ಆಯಾ ಕಾಲೇಜುಗಳ ಆಡಳಿತ ಮಂಡಳಿಗೇ ಬಿಡಲಾಗಿದೆ.
ವಿದ್ಯಾರ್ಥಿ ಸಂಘದ ರಚನೆ ಹಾಗೂ ಪ್ರಮುಖ ನಿಯಮಗಳು: ಮರುಜಾರಿಯಾಗುತ್ತಿರುವ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ವಿವರ ಮತ್ತು ನಿಯಮಾವಳಿಗಳು ಹೀಗಿವೆ:
ಪದಾಧಿಕಾರಿಗಳ ಸಂಖ್ಯೆ: ವಿದ್ಯಾರ್ಥಿ ಸಂಘದಲ್ಲಿ ಓರ್ವ ಅಧ್ಯಕ್ಷ, ಓರ್ವ ಮಹಿಳೆ ಸೇರಿದಂತೆ ಇಬ್ಬರು ಉಪಾಧ್ಯಕ್ಷರು ಇರಬೇಕಾಗುತ್ತದೆ. ಇದರ ಜೊತೆಗೆ ಓರ್ವ ಕಾರ್ಯದರ್ಶಿ ಹಾಗೂ ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿ ಜಂಟಿ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಬೇಕಾಗುತ್ತದೆ.
ಮೀಸಲಾತಿ ಇಲ್ಲ: ಈ ಚುನಾವಣೆಯಲ್ಲಿ ಯಾವುದೇ ರೀತಿಯ ಮೀಸಲಾತಿ ವ್ಯವಸ್ಥೆ ಇರುವುದಿಲ್ಲ.
ವಿದ್ಯಾರ್ಥಿಗಳ ನಿರ್ಧಾರವೇ ಅಂತಿಮ: ಒಂದು ವೇಳೆ ಕಾಲೇಜಿನಲ್ಲಿ ವಿದ್ಯಾರ್ಥಿಗಳೇ ಚುನಾವಣೆ ಬೇಡ ಎಂದು ನಿರ್ಧರಿಸಿದರೆ, ಅಂತಹ ಕಾಲೇಜಿನಲ್ಲಿ ಚುನಾವಣೆ ನಡೆಯುವುದಿಲ್ಲ.
ರಾಜಕೀಯ ಸಂಘಟನೆಗಳಿಗೆ ತಡೆ: ಮುಖ್ಯವಾಗಿ, ಈ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳ ನೇರ ವಿದ್ಯಾರ್ಥಿ ಸಂಘಟನೆಗಳಿಗೆ ಭಾಗವಹಿಸಲು ಅವಕಾಶವಿರುವುದಿಲ್ಲ.
ಜೂನ್ ತಿಂಗಳಿನಲ್ಲೇ ಸುಳಿವು ನೀಡಿದ್ದ ಡಿಕೆ ಶಿವಕುಮಾರ್: ಕಳೆದ ಜೂನ್ ತಿಂಗಳಿನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕೆಪಿಸಿಸಿ (KPCC) ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ಹಸ್ತಾಂತರಿಸಿ ಮಾತನಾಡಿದ್ದ ಡಿಕೆ ಶಿವಕುಮಾರ್ ಅವರು, ರಾಜ್ಯದಲ್ಲಿ ತಡೆಹಿಡಿಯಲಾಗಿರುವ ವಿದ್ಯಾರ್ಥಿ ಚುನಾವಣೆಯನ್ನು ಈ ವರ್ಷದಿಂದಲೇ ಪುನರಾರಂಭಿಸುವುದಾಗಿ ಪ್ರಕಟಿಸಿದ್ದರು. ಅದರಂತೆ ಇದೀಗ ಸರ್ಕಾರ ಕ್ಯಾಬಿನೆಟ್ ಸಭೆಯಲ್ಲಿ ಈ ತೀರ್ಮಾನಕ್ಕೆ ಅನುಮೋದನೆ ನೀಡಿದೆ.



