ರಾಜಣ್ಣಗೆ ಕೈತಪ್ಪಿದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಾದಿ; ಡಿಕೆಶಿ ಆಪ್ತ ಎಂಎಲ್ಸಿ ರವಿಗೆ ಒಲಿದ ಮಹತ್ವದ ಹುದ್ದೆ
ಬೆಂಗಳೂರು: ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ನ ಅಧ್ಯಕ್ಷ ಸ್ಥಾನಕ್ಕೆ ಕೊನೆಗೂ ವಿಧಾನ ಪರಿಷತ್ ಸದಸ್ಯ ರವಿ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಬಂಧಿ ಹಾಗೂ ಆಪ್ತರಾಗಿರುವ ರವಿ ಅವರಿಗೆ ಅಧ್ಯಕ್ಷ ಸ್ಥಾನ ಒಲಿದಿದ್ದು, ಶರಣಗೌಡ ಬಯ್ಯಾಪುರ ಅವರನ್ನು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಅಪೆಕ್ಸ್ ಬ್ಯಾಂಕ್ಗೆ ಸುಮಾರು ನಾಲ್ಕು ತಿಂಗಳ ಹಿಂದೆಯೇ ಚುನಾವಣೆ ನಡೆಯಬೇಕಿತ್ತು. ಆದರೆ ಅಧ್ಯಕ್ಷ ಸ್ಥಾನಕ್ಕೆ ಹಲವು ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದರಿಂದ ಚುನಾವಣೆ ಮುಂದೂಡಿಕೆಯಾಗಿತ್ತು. ಅಂತಿಮವಾಗಿ ಎಂಎಲ್ಸಿ ರವಿ ಮತ್ತು ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ನಡುವೆ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ತೀವ್ರಗೊಂಡಿತ್ತು.
ಬುಧವಾರ ಸಹಕಾರ ಸಚಿವ ಲಕ್ಷ್ಮಣ ಸವದಿ ಅವರ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಪೆಕ್ಸ್ ಬ್ಯಾಂಕ್ನ 19 ನಿರ್ದೇಶಕರೊಂದಿಗೆ ಸಭೆ ನಡೆಸಿದ್ದರು. ಬಳಿಕ ಸಂಜೆ ನಿರ್ದೇಶಕರು, ಸಚಿವ ಲಕ್ಷ್ಮಣ ಸವದಿ ಹಾಗೂ ಕೆ.ಎನ್. ರಾಜಣ್ಣ ಅವರು ಖಾಸಗಿ ಹೋಟೆಲ್ನಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದರು.
ಸಭೆಯಲ್ಲಿ ಬಹುತೇಕ ನಿರ್ದೇಶಕರು ರವಿ ಅವರ ಪರವಾಗಿ ಒಲವು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಚುನಾವಣೆ ನಡೆಸುವ ಬದಲು ಅವಿರೋಧವಾಗಿ ಆಯ್ಕೆ ಮಾಡುವ ನಿರ್ಧಾರ ಕೈಗೊಳ್ಳಲಾಯಿತು. ಇದರೊಂದಿಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದ ಹಲವು ತಿಂಗಳ ಕುತೂಹಲಕ್ಕೆ ತೆರೆ ಬಿದ್ದಿದೆ.
ಅಪೆಕ್ಸ್ ಬ್ಯಾಂಕ್ ಚುನಾವಣಾ ಪ್ರಕ್ರಿಯೆ ಕುರಿತು ಸಹಕಾರ ಸಚಿವ ಲಕ್ಷ್ಮಣ ಸವದಿ ಬೆಂಗಳೂರಿನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಮೊದಲ ಎರಡೂವರೆ ವರ್ಷಗಳ ಅವಧಿಗೆ ಎಂಎಲ್ಸಿ ರವಿ ಅವರನ್ನು ಅಧ್ಯಕ್ಷರಾಗಿ ಹಾಗೂ ಶರಣಗೌಡ ಬಯ್ಯಾಪುರ ಅವರನ್ನು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ನಾಮಪತ್ರ ಸಲ್ಲಿಕೆಯ ಬಳಿಕ ಇಬ್ಬರ ಆಯ್ಕೆ ಅಂತಿಮಗೊಂಡಿದ್ದು, ಮುಂದಿನ ಎರಡೂವರೆ ವರ್ಷಗಳ ಅಧಿಕಾರಾವಧಿ ಕುರಿತು ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇತ್ತ, ಮಾಜಿ ಸಚಿವ ಹಾಗೂ ಸಿದ್ದರಾಮಯ್ಯ ಅವರ ಬೆಂಬಲಿಗರಾಗಿರುವ ಕೆ.ಎನ್. ರಾಜಣ್ಣ ಅವರಿಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಕೈತಪ್ಪಿರುವುದು ರಾಜಕೀಯವಾಗಿ ಹಿನ್ನಡೆಯಾಗಿ ಪರಿಣಮಿಸಿದೆ. ಸಂಪುಟ ಪುನಾರಚನೆ ವೇಳೆ ಸಚಿವ ಸ್ಥಾನದಿಂದ ವಂಚಿತರಾಗಿದ್ದ ರಾಜಣ್ಣ ಅವರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನವನ್ನು ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಅಂತಿಮವಾಗಿ ರವಿ ಅವರಿಗೆ ಅಧ್ಯಕ್ಷ ಸ್ಥಾನ ಒಲಿದಿದೆ.
ಈ ಬೆಳವಣಿಗೆಯ ಬೆನ್ನಲ್ಲೇ ಕಾಂಗ್ರೆಸ್ನ ಆಂತರಿಕ ರಾಜಕೀಯದಲ್ಲೂ ಚರ್ಚೆ ಜೋರಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಾರ್ಯವೈಖರಿಯನ್ನು ಬಹಿರಂಗವಾಗಿ ಪ್ರಶ್ನಿಸುತ್ತಿದ್ದ ನಾಯಕರಿಗೆ ಪ್ರಮುಖ ಹುದ್ದೆಗಳು ಕೈತಪ್ಪುತ್ತಿವೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ.
ಮಾಜಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಮತ್ತು ಕೆ.ಎನ್. ರಾಜಣ್ಣ ಅವರು ಡಿ.ಕೆ. ಶಿವಕುಮಾರ್ ವಿರುದ್ಧ ಬಹಿರಂಗವಾಗಿ ಧ್ವನಿ ಎತ್ತಿದ್ದ ನಾಯಕರಾಗಿದ್ದು, ಇಬ್ಬರೂ ಪ್ರಮುಖ ಅಧಿಕಾರದಿಂದ ದೂರ ಉಳಿದಿರುವುದು ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಮತ್ತೊಂದೆಡೆ, ರಾಜಕೀಯ ಸನ್ನಿವೇಶಕ್ಕೆ ಅನುಗುಣವಾಗಿ ಹೆಜ್ಜೆ ಇಟ್ಟಿರುವ ಜಮೀರ್ ಅಹ್ಮದ್ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ.



