ಮಹೇಶ್ ಬಾಬು ‘ವಾರಣಾಸಿ’ಗಾಗಿ ರಾಜಮೌಳಿ ಬಿಗ್ ಪ್ಲ್ಯಾನ್..! ಸಿನಿಮಾ ರಿಲೀಸ್ʼಗಿಂತ ಪ್ರಶಸ್ತಿ ಪ್ರಚಾರಕ್ಕೇ 5 ಪಟ್ಟು ಹೆಚ್ಚು ಬಜೆಟ್!
ರಾಜಮೌಳಿ ನಿರ್ದೇಶನದ ಸಿನಿಮಾ ಅಂದಮೇಲೆ ನಿರೀಕ್ಷೆಗಳು ಹೇಗಿರುತ್ತವೆ ಅನ್ನೋದು ಗೊತ್ತೇ ಇದೆ. ಇದೀಗ ಆ ನಿರೀಕ್ಷೆಗಳನ್ನೂ ಮೀರಿಸುವ ರೀತಿಯಲ್ಲಿ ಸದ್ದು ಮಾಡ್ತಿರೋ ಸಿನಿಮಾ ‘ವಾರಣಾಸಿ’. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ಭಾರತೀಯ ಚಿತ್ರರಂಗ ಮಾತ್ರವಲ್ಲ, ಜಾಗತಿಕ ಸಿನಿಮಾ ಪ್ರೇಕ್ಷಕರಲ್ಲೂ ಭಾರಿ ಕುತೂಹಲ ಮೂಡಿಸಿದೆ.
ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಸಿನಿಮಾಗಳಲ್ಲಿ ಒಂದಾಗಿ ಗುರುತಿಸಿಕೊಳ್ಳುತ್ತಿರುವ ‘ವಾರಣಾಸಿ’ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ ಎನ್ನಲಾಗುತ್ತಿದೆ. ಸಿನಿಮಾ ಬಿಡುಗಡೆಗೆ ಮುನ್ನವೇ ಪ್ರಚಾರದ ಪ್ಲ್ಯಾನ್ ಕೂಡ ಸಿದ್ಧವಾಗಿದ್ದು, ಈ ಬಾರಿ ರಾಜಮೌಳಿ ಕೇವಲ ಭಾರತೀಯ ಮಾರುಕಟ್ಟೆಯನ್ನಷ್ಟೇ ಗುರಿಯಾಗಿಸಿಕೊಂಡಿಲ್ಲ. ವಿದೇಶಿ ಪ್ರೇಕ್ಷಕರನ್ನೂ ದೊಡ್ಡ ಮಟ್ಟದಲ್ಲಿ ತಲುಪಿಸುವ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.
ಅಮೆರಿಕ ಸೇರಿದಂತೆ ಹಲವು ಪ್ರಮುಖ ರಾಷ್ಟ್ರಗಳಲ್ಲಿ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮಗಳು, ಸಂದರ್ಶನಗಳು, ಪತ್ರಿಕಾಗೋಷ್ಠಿಗಳು ಸೇರಿದಂತೆ ಹಲವು ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ ಎನ್ನಲಾಗುತ್ತಿದೆ. ಅಂದರೆ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಜಾಗತಿಕ ಮಟ್ಟದಲ್ಲಿ ‘ವಾರಣಾಸಿ’ಯ ಹವಾ ಸೃಷ್ಟಿಸುವ ಪ್ರಯತ್ನ ನಡೆಯಲಿದೆ.
ಇನ್ನು ಭಾರತದಲ್ಲೂ ಪ್ರಚಾರಕ್ಕೆ ಭರ್ಜರಿ ಪ್ಲ್ಯಾನ್ ಮಾಡಲಾಗಿದೆ. ದೇಶದ ಎರಡು ಪ್ರಮುಖ ನಗರಗಳಲ್ಲಿ ಬೃಹತ್ ಮಟ್ಟದ ಪ್ರೀ-ರಿಲೀಸ್ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಯೋಜನೆ ರೂಪಿಸಲಾಗಿದೆ ಎನ್ನಲಾಗುತ್ತಿದೆ. ಈ ಕಾರ್ಯಕ್ರಮಗಳಿಗೆ ದೇಶದ ಅತ್ಯಂತ ಗಣ್ಯ ವ್ಯಕ್ತಿಯೊಬ್ಬರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸುವ ಚಿಂತನೆಯೂ ಇದೆ ಎಂಬ ಮಾಹಿತಿ ಹರಿದಾಡುತ್ತಿದೆ.
ಆದರೆ ‘ವಾರಣಾಸಿ’ ಚಿತ್ರದ ಪ್ರಚಾರದ ವಿಚಾರದಲ್ಲಿ ಅತಿ ದೊಡ್ಡ ಚರ್ಚೆಯಾಗುತ್ತಿರುವುದು ಬಜೆಟ್. ವರದಿಗಳ ಪ್ರಕಾರ, ಸಿನಿಮಾ ಬಿಡುಗಡೆಗೂ ಮುನ್ನ ನಡೆಸುವ ಪ್ರಚಾರಕ್ಕಾಗಿ ಬರೋಬ್ಬರಿ ₹200 ಕೋಟಿ ಮೀಸಲಿಡಲಾಗಿದೆ ಎನ್ನಲಾಗುತ್ತಿದೆ.
ಇಷ್ಟಕ್ಕೇ ಮುಗಿಯುವುದಿಲ್ಲ. ಸಿನಿಮಾ ಬಿಡುಗಡೆಯಾದ ಬಳಿಕ ಅಂತರರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳಿಗಾಗಿ ಪ್ರತ್ಯೇಕ ಪ್ರಚಾರ ತಂತ್ರ ರೂಪಿಸಲಾಗಿದೆ ಎನ್ನಲಾಗಿದೆ. ಆಸ್ಕರ್, ಗೋಲ್ಡನ್ ಗ್ಲೋಬ್, ಬಾಫ್ಟಾ ಸೇರಿದಂತೆ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಸಿನಿಮಾವನ್ನು ಪ್ರಚಾರ ಮಾಡಲು ಮೂಲ ಪ್ರಚಾರ ಬಜೆಟ್ಗಿಂತ ಹಲವು ಪಟ್ಟು ಹೆಚ್ಚಿನ ಮೊತ್ತವನ್ನು ಮೀಸಲಿಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ವರದಿಗಳ ಪ್ರಕಾರ, ಅವಾರ್ಡ್ ಕ್ಯಾಂಪೇನ್ಗಾಗಿ ಸುಮಾರು ₹1000 ಕೋಟಿ ಬಜೆಟ್ ಮೀಸಲಿಡಲಾಗಿದೆ ಎನ್ನಲಾಗುತ್ತಿದೆ. ಅಂದರೆ ಥಿಯೇಟ್ರಿಕಲ್ ರಿಲೀಸ್ಗಿಂತಲೂ ಸಿನಿಮಾ ಜಾಗತಿಕ ಪ್ರಶಸ್ತಿ ವೇದಿಕೆಗಳಲ್ಲಿ ತಲುಪುವಂತೆ ಮಾಡಲು ದೊಡ್ಡ ಮಟ್ಟದ ಯೋಜನೆ ರೂಪಿಸಲಾಗಿದೆ ಎಂಬ ಚರ್ಚೆ ನಡೆಯುತ್ತಿದೆ.
ಈ ಹಿಂದೆ ‘ಆರ್ಆರ್ಆರ್’ ಸಿನಿಮಾದ ‘ನಾಟು ನಾಟು’ ಹಾಡು ಆಸ್ಕರ್ ಪ್ರಶಸ್ತಿ ಗೆಲ್ಲುವಲ್ಲಿ ರಾಜಮೌಳಿ ತಂಡ ಪ್ರಮುಖ ಪಾತ್ರ ವಹಿಸಿತ್ತು. ಇದೀಗ ‘ವಾರಣಾಸಿ’ ಮೂಲಕ ಇನ್ನಷ್ಟು ವಿಭಾಗಗಳಲ್ಲಿ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಒಟ್ಟಿನಲ್ಲಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಕಾಂಬಿನೇಷನ್, ರಾಜಮೌಳಿಯ ನಿರ್ದೇಶನ, ಭಾರೀ ಬಜೆಟ್ ಹಾಗೂ ಈಗ ಕೇಳಿಬರುತ್ತಿರುವ ಬೃಹತ್ ಪ್ರಮಾಣದ ಪ್ರಚಾರ ಯೋಜನೆ… ಇವೆಲ್ಲವೂ ಸೇರಿ ‘ವಾರಣಾಸಿ’ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಕುತೂಹಲ ಸೃಷ್ಟಿಸಿದೆ.
ಸದ್ಯ ಈ ಬೃಹತ್ ಪ್ರಚಾರ ಬಜೆಟ್ಗೆ ಸಂಬಂಧಿಸಿದ ವರದಿಗಳ ಬಗ್ಗೆ ಚಿತ್ರತಂಡದಿಂದ ಅಧಿಕೃತ ಸ್ಪಷ್ಟನೆ ಹೊರಬಂದಿಲ್ಲ. ಹೀಗಾಗಿ ₹1000 ಕೋಟಿ ಅವಾರ್ಡ್ ಕ್ಯಾಂಪೇನ್ ಸೇರಿದಂತೆ ಬಜೆಟ್ ಕುರಿತ ಅಂಕಿಅಂಶಗಳನ್ನು ವರದಿಗಳ ಆಧಾರದ ಮೇಲಿನ ಮಾಹಿತಿಯಾಗಿ ಪರಿಗಣಿಸಬೇಕಾಗಿದೆ.



