ಅಕ್ರಮ ಹಣ ವರ್ಗಾವಣೆ ಪ್ರಕರಣ: ಅಟ್ಟಿಕಾ ಗೋಲ್ಡ್ ಸಂಸ್ಥೆಯ ಮೇಲಿನ ಇಡಿ ದಾಳಿ; ಆಸ್ತಿ ದಾಖಲೆಗಳು ವಶ, ಮಾಲೀಕ ಬಾಬು ಎಸ್ಕೇಪ್!
ಬೆಂಗಳೂರು: ಭಾರತದ ನಂಬರ್ 1 ಚಿನ್ನದ ಕಂಪನಿ ಎಂದು ಬಣ್ಣಬಣ್ಣದ ಜಾಹೀರಾತು ನೀಡಿ ಸಾವಿರಾರು ಜನರಿಗೆ ವಂಚಿಸಿದ ಹಾಗೂ ಬರೋಬ್ಬರಿ ₹1000 ಕೋಟಿ ಅಕ್ರಮ ಹಣ ವರ್ಗಾವಣೆ (Money Laundering) ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ‘ಅಟ್ಟಿಕಾ ಗೋಲ್ಡ್’ (Attica Gold) ಕಂಪನಿಯ ಮಾಲೀಕ ಅಟ್ಟಿಕಾ ಬಾಬುಗೆ ಜಾರಿ ನಿರ್ದೇಶನಾಲಯ (ED) ಬಿಗ್ ಶಾಕ್ ನೀಡಿದೆ.
ಬೆಂಗಳೂರು, ಆಂಧ್ರಪ್ರದೇಶ ಹಾಗೂ ತೆಲಂಗಾಣ ಸೇರಿದಂತೆ ವಿವಿಧೆಡೆ ಇರುವ ಅಟ್ಟಿಕಾ ಗೋಲ್ಡ್ ಕಂಪನಿಯ ಕಚೇರಿಗಳು ಹಾಗೂ ಮಾಲೀಕನಿಗೆ ಸಂಬಂಧಿಸಿದ ಪ್ರಮುಖ ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ಮೆಗಾ ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಕೆಲವು ಸೂಕ್ಷ್ಮ ಸ್ಥಳಗಳಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಸಿಬ್ಬಂದಿಯ ಬಿಗಿ ಭದ್ರತೆಯೊಂದಿಗೆ ಪರಿಶೀಲನೆ ಮುಂದುವರಿದಿದೆ.
ಹೂಡಿಕೆಯ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸಿರುವ ಆರೋಪ ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬಾಬು ವಿರುದ್ಧ ಕೇಳಿಬಂದಿದೆ. ಇದರ ಜೊತೆಗೆ ಅಕ್ರಮ ಹಣಕಾಸು ವಹಿವಾಟು ಹಾಗೂ ಕದ್ದ ಚಿನ್ನದ ಖರೀದಿಗೆ ಸಂಬಂಧಿಸಿದ ಗಂಭೀರ ಆರೋಪಗಳ ಕುರಿತೂ ತನಿಖೆ ನಡೆಸಲಾಗುತ್ತಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯ ವೇಳೆ ಕಂಪನಿಗೆ ಸಂಬಂಧಿಸಿದ ಪ್ರಮುಖ ಬ್ಯಾಂಕ್ ಖಾತೆಗಳು, ಆಸ್ತಿ ದಾಖಲೆಗಳು ಹಾಗೂ ಹಣಕಾಸಿನ ವಹಿವಾಟಿನ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಇಡಿ ಅಧಿಕಾರಿಗಳ ದಿಢೀರ್ ದಾಳಿಯ ಬೆನ್ನಲ್ಲೇ ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬಾಬು ತಲೆಮರೆಸಿಕೊಂಡಿದ್ದಾನೆ. ಶೀಘ್ರವೇ ನಡೆಯಲಿರುವ ಹಿರಿಯೂರು ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅಟ್ಟಿಕಾ ಬಾಬು ಭರ್ಜರಿ ತಯಾರಿ ನಡೆಸಿದ್ದ. ಸ್ಥಳೀಯವಾಗಿ ಪ್ರಚಾರವನ್ನೂ ಆರಂಭಿಸಿ ವಿಧಾನಸೌಧಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದ ಆತನ ರಾಜಕೀಯ ಆಸೆಗೆ ಇಡಿ ದಾಳಿ ಭಾರಿ ಆಘಾತ ನೀಡಿದೆ.



