No menu items!
23.1 C
Munich
Sunday, September 27, 2026

ಸಂಬಳದ ಹಣ ನೀಡಲಿಲ್ಲ ಎಂದು ಪತ್ನಿಯ ಕೊಲೆ; ಮೃತದೇಹವನ್ನು ಮೂಟೆ ಕಟ್ಟಿ ಗಿಡಗಂಟಿಯಲ್ಲಿ ಎಸೆದು ಪರಾರಿ, ತಿಂಗಳ ಬಳಿಕ ಪತಿ ಅರೆಸ್ಟ್

Must read

ಸಂಬಳದ ಹಣ ನೀಡಲಿಲ್ಲ ಎಂದು ಪತ್ನಿಯ ಕೊಲೆ; ಮೃತದೇಹವನ್ನು ಮೂಟೆ ಕಟ್ಟಿ ಗಿಡಗಂಟಿಯಲ್ಲಿ ಎಸೆದು ಪರಾರಿ, ತಿಂಗಳ ಬಳಿಕ ಪತಿ ಅರೆಸ್ಟ್

ಬೆಂಗಳೂರು: ಸಂಬಳದ ಹಣ ನೀಡಲಿಲ್ಲ ಎಂಬ ವಿಚಾರಕ್ಕೆ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಮೃತದೇಹವನ್ನು ಮೂಟೆ ಕಟ್ಟಿ ನಿರ್ಜನ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದ ಆರೋಪಿಯನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುಮಾರು ಒಂದು ತಿಂಗಳ ಬಳಿಕ ಪ್ರಕರಣದ ತನಿಖೆಗೆ ಮಹತ್ವದ ತಿರುವು ಸಿಕ್ಕಿದ್ದು, ಕೊಲೆಯಾದ ಮಹಿಳೆಯ ಗುರುತನ್ನೂ ಪೊಲೀಸರು ಪತ್ತೆಹಚ್ಚಿದ್ದಾರೆ.
ಒಡಿಶಾ ಮೂಲದ ಸಾಗರ್ಚಂದ್ರ ರಾವತ್ (32) ಬಂಧಿತ ಆರೋಪಿ. ತನ್ನ ಪತ್ನಿ ಅನಸೂಯ ಬೆಹ್ರಾ (28) ಅವರನ್ನು ಆಗಸ್ಟ್ 10ರಂದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 10ರಂದು ಪತ್ನಿಯನ್ನು ಕೊಲೆ ಮಾಡಿದ ಬಳಿಕ ಸಾಗರ್ಚಂದ್ರ ಮೃತದೇಹವನ್ನು ಕೆಲವು ದಿನಗಳ ಕಾಲ ಮನೆಯಲ್ಲೇ ಇರಿಸಿಕೊಂಡಿದ್ದ. ಬಳಿಕ ಬೆಡ್ಶೀಟ್ನಲ್ಲಿ ಸುತ್ತಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಎನ್.ಎಸ್. ಅಗ್ರಹಾರ ಲೇಔಟ್ನ ನಿರ್ಜನ ಪ್ರದೇಶದಲ್ಲಿದ್ದ ಗಿಡಗಂಟಿಗಳ ನಡುವೆ ಎಸೆದಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಸೆಪ್ಟೆಂಬರ್ 2ರಂದು ಸ್ಥಳದ ಮಾಲೀಕರು ಗಿಡಗಂಟಿಗಳನ್ನು ತೆರವುಗೊಳಿಸಲು ತೆರಳಿದ್ದಾಗ ಅಸ್ಥಿಪಂಜರ ಪತ್ತೆಯಾಗಿತ್ತು. ಮಹಿಳೆಯ ಮುಖ ಹಾಗೂ ದೇಹ ಸಂಪೂರ್ಣವಾಗಿ ಕೊಳೆತು ಹೋಗಿದ್ದರಿಂದ ಆರಂಭದಲ್ಲಿ ಮೃತರ ಗುರುತು ಪತ್ತೆಹಚ್ಚುವುದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು.
ಈ ಸಂಬಂಧ ಸಂಪಿಗೆಹಳ್ಳಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸುತ್ತಮುತ್ತಲಿನ ರೆಸ್ಟೋರೆಂಟ್ಗಳು, ಪಿಜಿಗಳು ಹಾಗೂ ಬಾಡಿಗೆ ಮನೆಗಳಲ್ಲಿ ಮಾಹಿತಿ ಸಂಗ್ರಹಿಸಲು ಆರಂಭಿಸಿದ್ದರು. ಅನುಮಾನಾಸ್ಪದವಾಗಿ ಯಾರಾದರೂ ಮನೆ ಅಥವಾ ಪಿಜಿ ಖಾಲಿ ಮಾಡಿದ್ದರೆ ಮಾಹಿತಿ ನೀಡುವಂತೆ ಸೂಚಿಸಿದ್ದರು.
ಮೃತ ಮಹಿಳೆಯ ಗುರುತು ಪತ್ತೆಹಚ್ಚಲು ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಈ ವೇಳೆ ಮೃತದೇಹದಲ್ಲಿದ್ದ ಒಳ ಉಡುಪನ್ನು ಪೊಲೀಸರು ಜಪ್ತಿ ಮಾಡಿ ಅದರ ಮೇಲಿದ್ದ ಬಾರ್ಕೋಡ್ ಸ್ಕ್ಯಾನ್ ಮಾಡಿಸಿದ್ದರು.
ಬಾರ್ಕೋಡ್ನಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಆ ಉಡುಪನ್ನು ಒಡಿಶಾದ ಭುವನೇಶ್ವರದ ಮಳಿಗೆಯೊಂದರಲ್ಲಿ ಖರೀದಿಸಲಾಗಿತ್ತು ಎಂಬ ಸುಳಿವು ಸಿಕ್ಕಿತು. ಇದರ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ಒಡಿಶಾ ಮೂಲದ ವ್ಯಕ್ತಿಗಳತ್ತ ವಿಸ್ತರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೆಪ್ಟೆಂಬರ್ 9ರಂದು ಸಂಪಿಗೆಹಳ್ಳಿ ಮುಖ್ಯರಸ್ತೆಯಲ್ಲಿರುವ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನ ವರ್ತನೆ ಅನುಮಾನಾಸ್ಪದವಾಗಿದೆ ಎಂಬ ಮಾಹಿತಿ ಪೊಲೀಸರಿಗೆ ದೊರೆತಿತ್ತು. ಇದರ ಆಧಾರದ ಮೇಲೆ ವಿಶೇಷ ತಂಡ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಸಾಗರ್ಚಂದ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು.
ವಿಚಾರಣೆ ವೇಳೆ ಆತ ಪತ್ನಿ ಅನಸೂಯ ಅವರನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಸಾಗರ್ಚಂದ್ರ ಮತ್ತು ಅನಸೂಯ ಇಬ್ಬರೂ ಪ್ರತ್ಯೇಕ ಹೋಟೆಲ್ಗಳಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರು 2021ರಲ್ಲಿ ಬೆಂಗಳೂರಿನಲ್ಲಿ ಪರಿಚಯವಾಗಿ ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ 2024ರಲ್ಲಿ ಮದುವೆಯಾಗಿದ್ದರು. ಎನ್.ಎಸ್. ಅಗ್ರಹಾರ ಲೇಔಟ್ನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಆಗಸ್ಟ್ 10ರಂದು ಇಬ್ಬರಿಗೂ ಸಂಬಳ ಬಂದಿತ್ತು. ಈ ವೇಳೆ ತನಗೆ ಸ್ವಲ್ಪ ಹೆಚ್ಚಿನ ಹಣ ನೀಡುವಂತೆ ಸಾಗರ್ಚಂದ್ರ ಪತ್ನಿಯನ್ನು ಕೇಳಿದ್ದಾನೆ. ಆದರೆ ತನ್ನ ಹೆತ್ತವರಿಗೂ ಹಣ ಕಳುಹಿಸಬೇಕಿದೆ ಎಂದು ಅನಸೂಯ ಹಣ ನೀಡಲು ನಿರಾಕರಿಸಿದ್ದಾಳೆ ಎನ್ನಲಾಗಿದೆ.
ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದ್ದು, ಜಗಳ ವಿಕೋಪಕ್ಕೆ ತಿರುಗಿದಾಗ ಸಾಗರ್ಚಂದ್ರ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಮಾಡಿದ ಬಳಿಕ ಸುಮಾರು ನಾಲ್ಕು ದಿನಗಳ ಕಾಲ ಸಾಗರ್ಚಂದ್ರ ಮೃತದೇಹವನ್ನು ಮನೆಯಲ್ಲೇ ಇರಿಸಿಕೊಂಡಿದ್ದಾನೆ ಎನ್ನಲಾಗಿದೆ. ಮೃತದೇಹದಿಂದ ವಾಸನೆ ಬರಲು ಆರಂಭಿಸಿದ ನಂತರ ಆಗಸ್ಟ್ 15ರ ರಾತ್ರಿ ಬೆಡ್ಶೀಟ್ನಲ್ಲಿ ಸುತ್ತಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದಾನೆ.
ನಂತರ ಮುಂಜಾನೆ ಮೃತದೇಹವನ್ನು ಗಿಡಗಂಟಿಗಳ ನಡುವೆ ಎಸೆದು, ಆಗಸ್ಟ್ 16ರಂದು ಮನೆ ಸ್ವಚ್ಛಗೊಳಿಸಿ ಖಾಲಿ ಮಾಡಿದ್ದಾನೆ. ಬಳಿಕ ಪಿಜಿಯಲ್ಲಿ ಉಳಿದುಕೊಂಡು ಎಂದಿನಂತೆ ಹೋಟೆಲ್ಗೆ ಕೆಲಸಕ್ಕೆ ತೆರಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಪ್ರಕರಣ ಬಯಲಾಗದಂತೆ ಮಾಡಲು ಸಾಗರ್ಚಂದ್ರ ಹಲವು ಪ್ರಯತ್ನಗಳನ್ನು ನಡೆಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಕೊಲೆಯಾದ ಮಾರನೇ ದಿನವೇ ಪತ್ನಿಯ ಮೊಬೈಲ್ನಲ್ಲಿದ್ದ ಸಿಮ್ ಕಾರ್ಡ್ ಅನ್ನು ತನ್ನ ಮೊಬೈಲ್ಗೆ ಹಾಕಿಕೊಂಡಿದ್ದಾನೆ ಎನ್ನಲಾಗಿದೆ.
ಅಲ್ಲದೆ, ಪತ್ನಿಯ ಸಂಬಂಧಿಯೊಬ್ಬರಿಗೆ ಸಂದೇಶ ಕಳುಹಿಸಿ ತನಗೆ ತುರ್ತಾಗಿ ಹಣದ ಅಗತ್ಯವಿದೆ ಎಂದು ತಿಳಿಸಿದ್ದಾನೆ. ಇದನ್ನು ನಂಬಿದ ಸಂಬಂಧಿಕರು ₹1,000 ಹಣವನ್ನು ವರ್ಗಾಯಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದಿನಗಳು ಕಳೆದರೂ ಅನಸೂಯ ತನ್ನ ಕುಟುಂಬದವರ ಕರೆಗಳನ್ನು ಸ್ವೀಕರಿಸದ ಹಿನ್ನೆಲೆಯಲ್ಲಿ ಸಂಬಂಧಿಕರಿಗೆ ಅನುಮಾನ ಮೂಡಿತ್ತು. ಬಳಿಕ ಅವರು ಅನಸೂಯ ಸ್ನೇಹಿತೆಯೊಬ್ಬರನ್ನು ಸಂಪರ್ಕಿಸಿ ವಿಚಾರ ತಿಳಿಸಿದ್ದಾರೆ.
ಸ್ನೇಹಿತೆಯೂ ಅನಸೂಯಗೆ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ ಸಾಗರ್ಚಂದ್ರ ಕೆಲಸ ಮಾಡುತ್ತಿದ್ದ ಹೋಟೆಲ್ನ ಮ್ಯಾನೇಜರ್ಗೆ ಕರೆ ಮಾಡಿ ವಿಚಾರಿಸುವಂತೆ ಮನವಿ ಮಾಡಿದ್ದರು.
ಮ್ಯಾನೇಜರ್ ಸಾಗರ್ಚಂದ್ರನನ್ನು ಈ ಕುರಿತು ಪ್ರಶ್ನಿಸಿದಾಗ ಆತ ತಡಬಡಿಸಿದ್ದಾನೆ ಎನ್ನಲಾಗಿದೆ. ಇದರಿಂದ ಅನುಮಾನಗೊಂಡ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಸುಳಿವಿನ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಾಗರ್ಚಂದ್ರ ಮತ್ತು ಅನಸೂಯ ಇಬ್ಬರೂ ಒಡಿಶಾದ ಪುರಿ ಜಿಲ್ಲೆಯ ವಿವಿಧ ಗ್ರಾಮಗಳ ನಿವಾಸಿಗಳು. 2021ರಲ್ಲಿ ಬೆಂಗಳೂರಿನಲ್ಲಿ ಪರಿಚಯವಾಗಿ ಪ್ರೀತಿಸುತ್ತಿದ್ದರು. 2024ರಲ್ಲಿ ಸಾಗರ್ಚಂದ್ರ ಅನಸೂಯ ಅವರನ್ನು ತನ್ನ ಊರಿಗೆ ಕರೆದೊಯ್ದು ಮದುವೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಅನಸೂಯ ತನ್ನ ಮದುವೆಯ ವಿಚಾರವನ್ನು ಪೋಷಕರು ಹಾಗೂ ಸಂಬಂಧಿಕರಿಗೆ ತಿಳಿಸಿರಲಿಲ್ಲ ಎನ್ನಲಾಗಿದೆ. ಕಳೆದ ಎರಡು ವರ್ಷಗಳಿಂದ ತಾನು ಮದುವೆಯಾಗಿಲ್ಲ ಎಂದೇ ಕುಟುಂಬದವರ ಬಳಿ ಹೇಳಿಕೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಪ್ರಕರಣ ಬೆಳಕಿಗೆ ಬಂದ ಬಳಿಕವೇ ಅನಸೂಯ ಮದುವೆಯಾಗಿರುವ ವಿಚಾರ ಆಕೆಯ ಪೋಷಕರಿಗೆ ತಿಳಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರಕರಣದ ಕುರಿತು ಸಂಪಿಗೆಹಳ್ಳಿ ಠಾಣೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

- Advertisement -spot_img

More articles

- Advertisement -spot_img

Latest article