ಮಲೆ ಮಹದೇಶ್ವರಕ್ಕೆ ತೆರಳುತ್ತಿದ್ದ ಕಾರು ಅಪಘಾತ; ಹನೂರು ಬಳಿ ಎರಡು ಕಾರುಗಳ ಡಿಕ್ಕಿ, 9 ಮಂದಿಗೆ ಗಂಭೀರ ಗಾಯ
ಚಾಮರಾಜನಗರ: ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಹನೂರು ಪಟ್ಟಣದ ಹೊರವಲಯದಲ್ಲಿರುವ ಮಹದೇಶ್ವರ ಐಟಿಐ ಕಾಲೇಜಿನ ಬಳಿ ನಡೆದಿದೆ.
ಅಪಘಾತದಲ್ಲಿ ಸುವರ್ಣ, ಲೋಕೇಶ್, ಶ್ರೇಯಾ, ರುಕ್ಮಿಣಿ, ಮಂಜೇಶ್, ಭಾಗ್ಯಮ್ಮ, ಮಹಾದೇವ, ಮನ್ಸೂರ್, ಮಹಮ್ಮದ್ ದೊಫಿ ಹಾಗೂ ನಿಜಾವುದ್ದಿನ್ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಾಳುಗಳ ಪೈಕಿ ಏಳು ಮಂದಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಕೆಲವರ ಕೈಕಾಲುಗಳು ಮುರಿದಿವೆ ಎಂದು ತಿಳಿದುಬಂದಿದೆ.
ಅಪಘಾತಕ್ಕೀಡಾದ ಒಂದು ಕಾರಿನಲ್ಲಿದ್ದವರು ಮಲೆ ಮಹದೇಶ್ವರ ಬೆಟ್ಟದತ್ತ ತೆರಳುತ್ತಿದ್ದರು. ಮತ್ತೊಂದು ಕಾರಿನಲ್ಲಿದ್ದವರು ಕೊಳ್ಳೇಗಾಲದತ್ತ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಹನೂರು ಪಟ್ಟಣದ ಹೊರವಲಯದಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ವಾಹನಗಳಿಗೂ ಹಾನಿಯಾಗಿದೆ.
ಘಟನೆಯ ಬಳಿಕ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಹಿತಿ ತಿಳಿದ ಕೂಡಲೇ ಹನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತಕ್ಕೆ ನಿಖರ ಕಾರಣ ಏನು ಎಂಬುದರ ಕುರಿತು ತನಿಖೆ ಕೈಗೊಂಡಿದ್ದಾರೆ.



