ಹೂವು ಕೊಡಲು ಹೋಗಿದ್ದ ಯುವಕನ ಬದುಕಲ್ಲೇ ಬಿರುಗಾಳಿ! ಬಲವಂತದ ಶಸ್ತ್ರಚಿಕಿತ್ಸೆ, ಚಿತ್ರಹಿಂಸೆ ಆರೋಪದಲ್ಲಿ ಇಬ್ಬರು ಅರೆಸ್ಟ್!
ಚಿತ್ರದುರ್ಗ: ಹೂವಿನ ವ್ಯಾಪಾರದ ಮೂಲಕ ಪರಿಚಯವಾದ ಇಬ್ಬರು ಮಂಗಳಮುಖಿಯರು ಯುವಕನೊಬ್ಬನ ಇಚ್ಛೆಗೆ ವಿರುದ್ಧವಾಗಿ ಗುಪ್ತಾಂಗದ ಶಸ್ತ್ರಚಿಕಿತ್ಸೆ ಮಾಡಿಸಿ, ದೈಹಿಕ ಹಿಂಸೆ ನೀಡಿದ್ದಾರೆ ಎಂಬ ಗಂಭೀರ ಆರೋಪ ಚಿತ್ರದುರ್ಗದಲ್ಲಿ ಕೇಳಿಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಚಿತ್ರದುರ್ಗದ ಬುದ್ಧನಗರದ ಅನುಷ್ಕಾ ಮತ್ತು ನಳಿನಾ ಬಂಧಿತ ಆರೋಪಿಗಳು. ಚಳ್ಳಕೆರೆ ಗೇಟ್ ಬಳಿ ಇಬ್ಬರೂ ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಹೂವಿನ ವ್ಯಾಪಾರದ ವೇಳೆ ಬೆಳೆದ ಪರಿಚಯ!
25 ವರ್ಷದ ಯುವಕ ಚಿತ್ರದುರ್ಗದಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಈ ವೇಳೆ ಹೂವು ನೀಡುವ ಸಂದರ್ಭದಲ್ಲಿ ಅನುಷ್ಕಾ ಮತ್ತು ನಳಿನಾ ಎಂಬುವವರ ಪರಿಚಯವಾಗಿತ್ತು. ಕ್ರಮೇಣ ಯುವಕನೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದ ಆರೋಪಿಗಳು, ಆತನ ವಿಶ್ವಾಸವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸೆಪ್ಟೆಂಬರ್ 1ರಂದು ನಡೆದಿದ್ದೇನು?
ಯುವಕನ ಒಪ್ಪಿಗೆಯಿಲ್ಲದೆ ಸೆಪ್ಟೆಂಬರ್ 1ರಂದು ಆತನ ಗುಪ್ತಾಂಗಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಶಸ್ತ್ರಚಿಕಿತ್ಸೆಯ ಬಳಿಕವೂ ಯುವಕನಿಗೆ ದೈಹಿಕ ಹಿಂಸೆ ನೀಡಲಾಗಿದ್ದು, ತೊಡೆಗಳ ಮೇಲೆ ಬಿಸಿನೀರು ಹಾಗೂ ಕೆಂಡದಿಂದ ಸುಟ್ಟು ಗಾಯಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ.
ಘಟನೆಯ ಬಳಿಕ ಯುವಕ ತನ್ನ ಸ್ವಗ್ರಾಮಕ್ಕೆ ತೆರಳಿ ನೆಲೆಸಿದ್ದಾನೆ ಎನ್ನಲಾಗಿದೆ.
ತಂದೆಯ ದೂರಿನ ಬಳಿಕ ಇಬ್ಬರ ಬಂಧನ
ಯುವಕನಿಗೆ ಸಂಭವಿಸಿದ ಘಟನೆ ಕುರಿತು ಆತನ ತಂದೆ ಅಕ್ಟೋಬರ್ 9ರಂದು ಪರಶುರಾಂಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ವ್ಯಾಪ್ತಿಯನ್ನು ಪರಿಗಣಿಸಿ ಚಿತ್ರದುರ್ಗ ನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.
ಪ್ರಕರಣದ ತನಿಖೆ ಆರಂಭಿಸಿದ ಚಿತ್ರದುರ್ಗ ನಗರ ಠಾಣೆ ಪೊಲೀಸರು ಅನುಷ್ಕಾ ಮತ್ತು ನಳಿನಾ ಅವರನ್ನು ಬಂಧಿಸಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಿದ ಸ್ಥಳ, ಅದರಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಹಾಗೂ ಘಟನೆಯ ಹಿಂದಿನ ಕಾರಣಗಳ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಯುವಕನ ಇಚ್ಛೆಗೆ ವಿರುದ್ಧವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂಬ ಆರೋಪದ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.



