2028ಕ್ಕೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಫಿಕ್ಸ್; ಇನ್ನೊಂದು ಮುಖ ತೋರಿಸುತ್ತೇನೆ ಎಂದ ಹೆಚ್ಡಿಕೆ!

Must read

2028ಕ್ಕೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಫಿಕ್ಸ್; ಇನ್ನೊಂದು ಮುಖ ತೋರಿಸುತ್ತೇನೆ ಎಂದ ಹೆಚ್ಡಿಕೆ!

ಹಾಸನ: ಕರ್ನಾಟಕ ರಾಜಕೀಯದಲ್ಲಿ 2028ರ ವಿಧಾನಸಭೆ ಚುನಾವಣೆ ಹಾಗೂ ಸ್ಟಿಂಗ್ ಆಪರೇಷನ್ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡುವಿನ ವಾಕ್ಸಮರ ತೀವ್ರಗೊಂಡಿದೆ. 2028ರಲ್ಲಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗುವುದು ಖಚಿತ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಹಾಸನದಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಬಹಳ ಹಿಂದೆಯೇ ದುರ್ಬಲವಾಗುತ್ತಿತ್ತು ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರೊಂದಿಗೆ ತಾವು ರಾಜಕೀಯವಾಗಿ ದೊಡ್ಡ ಹೋರಾಟ ನಡೆಸಿದ್ದೇನೆ ಎಂದ ಅವರು, ಈಗ ಅವರನ್ನು ರಾಜಕೀಯವಾಗಿ ಮುಗಿಸಲು ಏನೆಲ್ಲ ಪ್ರಯತ್ನಗಳು ನಡೆಯುತ್ತಿವೆ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.
‘ಒಂದು ವರ್ಷ ಕಳೆಯಲಿ, ಏನಾಗುತ್ತೆ ನೋಡ್ತೀರಿ!’
ರಾಜ್ಯದಲ್ಲಿ ಯಾವಾಗಲೂ ತಾವೇ ಅಧಿಕಾರದಲ್ಲಿರುತ್ತೇವೆ ಎಂದು ಭಾವಿಸಬಾರದು ಎಂದು ಕಾಂಗ್ರೆಸ್ ನಾಯಕರಿಗೆ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಒಂದು ವರ್ಷ ಕಳೆಯಲಿ, ಆಗ ಏನಾಗಲಿದೆ ಎಂಬುದು ಗೊತ್ತಾಗುತ್ತದೆ. 2028ಕ್ಕೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆಗ ನನ್ನ ಇನ್ನೊಂದು ಮುಖವನ್ನು ತೋರಿಸುತ್ತೇನೆ ಎಂದು ಹೇಳಿದ್ದಾರೆ.
ಹಾಸನಾಂಬೆ ದೇವಾಲಯದ ಬಾಗಿಲು ತೆರೆಯುವ ವಿಚಾರ ಪ್ರಸ್ತಾಪಿಸಿದ ಅವರು, ದೇವಾಲಯದಲ್ಲಿ ಕುಳಿತು ಈ ಬಗ್ಗೆ ಮಾತನಾಡುವುದಾಗಿಯೂ ತಿಳಿಸಿದ್ದಾರೆ. ಸಿದ್ದರಾಮಯ್ಯ ಈ ವಿಚಾರದಲ್ಲಿ ಮೌನವಾಗಿರುವುದೇಕೆ ಎಂಬುದು ತಮಗೆ ಆಶ್ಚರ್ಯ ಮೂಡಿಸಿದೆ ಎಂದು ಹೇಳಿದ್ದಾರೆ.
ಸ್ಟಿಂಗ್ ಆಪರೇಷನ್ ಬಗ್ಗೆ ಹೆಚ್ಡಿಕೆ ಸ್ಫೋಟಕ ಆರೋಪ!
ಸ್ಟಿಂಗ್ ಆಪರೇಷನ್ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಈ ಕಾರ್ಯಾಚರಣೆಯನ್ನು ತಾನೇ ಮಾಡಿರುವುದಾಗಿ ಸಂಬಂಧಪಟ್ಟ ವ್ಯಕ್ತಿಯೇ ಹೇಳಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ. ಹಾಗಿದ್ದರೆ ತನಿಖೆ ನಡೆಸಲು ಇನ್ನೇನು ದಾಖಲೆಗಳು ಬೇಕು ಎಂದು ಪ್ರಶ್ನಿಸಿದ್ದಾರೆ.
ಪಕ್ಷದ ಕಾರ್ಯಕರ್ತೆಯೊಬ್ಬರನ್ನು ಕೂರಿಸಿಕೊಂಡು ಸಿದ್ದರಾಮಯ್ಯ ಅವರ ಹೆಸರನ್ನು ಹೇಳುವಂತೆ ಒತ್ತಡ ಹೇರಲಾಗಿದೆ ಎಂಬ ಆರೋಪವನ್ನೂ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಉಪಸ್ಥಿತಿ ಹಾಗೂ ದೇಹದ ಗುರುತುಗಳ ಕುರಿತು ಆ ಕಾರ್ಯಕರ್ತೆಯನ್ನು ಪ್ರಶ್ನಿಸಿರುವುದಾಗಿ ಹೇಳಿದ್ದಾರೆ. ಅಲ್ಲದೆ, ಆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲವೇಕೆ ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ, ಹಲವು ಪೊಲೀಸ್ ಅಧಿಕಾರಿಗಳ ಸ್ಟಿಂಗ್ ಆಪರೇಷನ್ ಕೂಡ ನಡೆದಿವೆ ಎಂದು ಆರೋಪಿಸಿದ್ದಾರೆ.
ಹಲವು ನಾಯಕರ ಸ್ಟಿಂಗ್ ಆಪರೇಷನ್ ನಡೆದಿರುವ ಬಗ್ಗೆ ಕಾಂಗ್ರೆಸ್ ಹಿರಿಯ ಶಾಸಕ ರಾಜಣ್ಣ ಅವರೇ ಹೇಳಿಕೆ ನೀಡಿದ್ದಾರೆ ಎಂದು ಉಲ್ಲೇಖಿಸಿದ ಕುಮಾರಸ್ವಾಮಿ, ಈ ವಿಚಾರದಲ್ಲಿ ಕಾಂಗ್ರೆಸ್ ಹಿರಿಯ ಶಾಸಕರ ಬಾಯಿ ಮುಚ್ಚಿಸಲಾಗಿದೆ ಎಂದು ದೂರಿದ್ದಾರೆ. ಮಾಜಿ ಪ್ರಧಾನಿಯೊಬ್ಬರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

- Advertisement -spot_img

More articles

- Advertisement -spot_img

Latest article