ಆ್ಯಕ್ಷನ್ ಸಿನಿಮಾ ಯಾಕೆ ಮಾಡಲ್ಲ? ಟೊಮ್ಯಾಟೋ ಉದಾಹರಣೆ ಕೊಟ್ಟು ಡಾರ್ಲಿಂಗ್ ಕೃಷ್ಣ ಹೇಳಿದ್ದೇನು?

Must read

ಆ್ಯಕ್ಷನ್ ಸಿನಿಮಾ ಯಾಕೆ ಮಾಡಲ್ಲ? ಟೊಮ್ಯಾಟೋ ಉದಾಹರಣೆ ಕೊಟ್ಟು ಡಾರ್ಲಿಂಗ್ ಕೃಷ್ಣ ಹೇಳಿದ್ದೇನು?

ಸ್ಯಾಂಡಲ್ವುಡ್ ನಟ ಡಾರ್ಲಿಂಗ್ ಕೃಷ್ಣ ಅವರು ಆ್ಯಕ್ಷನ್ ಸಿನಿಮಾಗಳಿಗಿಂತ ಕೌಟುಂಬಿಕ ಕಥಾಹಂದರದ ಚಿತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದೇಕೆ ಎಂಬ ಪ್ರಶ್ನೆಗೆ ಸ್ವಾರಸ್ಯಕರ ಉತ್ತರ ನೀಡಿದ್ದಾರೆ. ‘ನಾನು ಟೊಮ್ಯಾಟೋ ಬೆಳೆಯುವವನು. ರೇಟ್ ಇರಲಿ, ಬಿಡಲಿ ಅದನ್ನೇ ಬೆಳೆಯುತ್ತೇನೆ’ ಎಂದು ಹೇಳುವ ಮೂಲಕ ತಮ್ಮ ಸಿನಿಮಾ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಡಾರ್ಲಿಂಗ್ ಕೃಷ್ಣ ಅಭಿನಯದ ‘ಫಾದರ್’ ಸಿನಿಮಾದ ‘ಗಗನದ ನೇಸರ’ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಫ್ಯಾಮಿಲಿ ಸಿನಿಮಾಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ನಾನು ಫ್ಯಾಮಿಲಿ ಸಿನಿಮಾಗಳನ್ನೇ ಮಾಡುತ್ತೇನೆ. ಆ್ಯಕ್ಷನ್ ಯಾಕೆ ಮಾಡಲ್ಲ ಎಂದು ಹಲವರು ಕೇಳುತ್ತಾರೆ. ನಾನು ಟೊಮ್ಯಾಟೋ ಬೆಳೆಯುವವನು. ಬೆಲೆ ಇರಲಿ, ಬಿಡಲಿ ಅದನ್ನೇ ಬೆಳೆಯುತ್ತೇನೆ. ಈಗ ಟೊಮ್ಯಾಟೋಗೆ ಒಳ್ಳೆಯ ರೇಟ್ ಬಂದಿದೆ. ಅದೇ ರೀತಿ ಫ್ಯಾಮಿಲಿ ಸಿನಿಮಾಗಳಿಗೂ ಒಳ್ಳೆಯ ಸಮಯ ಬಂದಿದೆ’ ಎಂದು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರು ಹೊಡಿಬಡಿ ಸಿನಿಮಾಗಳಿಂದ ಸ್ವಲ್ಪ ವಿರಾಮ ಪಡೆದು ಕೌಟುಂಬಿಕ ಕಥಾಹಂದರದ ಚಿತ್ರಗಳತ್ತ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ. ‘ಫಾದರ್’ ಸಿನಿಮಾದ ಕಥೆ ಅತ್ಯುತ್ತಮವಾಗಿದ್ದು, ಅದರ ವಿಷಯದಲ್ಲಿ ತಾಕತ್ತಿದೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದು, ನಿರ್ಮಾಪಕ ಆರ್. ಚಂದ್ರು ಅವರಿಗೆ ಒಳ್ಳೆಯ ಲಾಭ ಸಿಗಲಿ ಎಂದು ಹಾರೈಸಿದ್ದಾರೆ.
ಇನ್ನು ‘ಫಾದರ್’ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಅವರೊಂದಿಗೆ ಪ್ರಕಾಶ್ ರಾಜ್, ಅಮೃತಾ ಅಯ್ಯಂಗಾರ್ ಹಾಗೂ ನಾಗಭೂಷಣ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಾಜಮೋಹನ್ ನಿರ್ದೇಶನದ ಈ ಚಿತ್ರವನ್ನು ಆರ್. ಚಂದ್ರು ಹಾಗೂ ಯಮುನಾ ಚಂದ್ರಶೇಖರ್ ನಿರ್ಮಿಸಿದ್ದಾರೆ. ನಕುಲ್ ಅಭಯಂಕರ್ ಸಂಗೀತ ನೀಡಿದ್ದು, ‘ಗಗನದ ನೇಸರ’ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ.
ಡಿಸೆಂಬರ್ 4ರಂದು ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ‘ಫಾದರ್’ ಸಿನಿಮಾ ಬಿಡುಗಡೆಯಾಗಲು ಸಜ್ಜಾಗಿದೆ. ಕೌಟುಂಬಿಕ ಕಥಾಹಂದರದ ಈ ಸಿನಿಮಾ ಪ್ರೇಕ್ಷಕರ ಮನಗೆಲ್ಲಲಿದೆಯೇ ಎಂಬ ಕುತೂಹಲ ಮೂಡಿದೆ.

- Advertisement -spot_img

More articles

- Advertisement -spot_img

Latest article