ಜೈಲಿನಲ್ಲಿ ನಟ ದರ್ಶನ್ ಗೆ ಮತ್ತೆ ಬೆನ್ನು ನೋವು: ಕೋರ್ಟ್ ಮುಂದೆ ಖುದ್ದಾಗಿ ಫಿಸಿಯೋಥೆರಪಿಗೆ ಮನವಿ!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ ಅವರಿಗೆ ಮತ್ತೆ ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಂಡಿದೆ. ಚಳಿಯ ವಾತಾವರಣ ಹೆಚ್ಚಾಗಿರುವುದರಿಂದ ಬೆನ್ನು ನೋವು ಉಲ್ಬಣಗೊಂಡಿದ್ದು, ತಮಗೆ ಸೂಕ್ತ ಫಿಸಿಯೋಥೆರಪಿ ಚಿಕಿತ್ಸೆ ಕೊಡಿಸುವಂತೆ ದರ್ಶನ್ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದ ವೇಳೆ, ದರ್ಶನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು. ಈ ವೇಳೆ ತಮ್ಮ ಆರೋಗ್ಯ ಸಮಸ್ಯೆಯನ್ನು ಖುದ್ದಾಗಿ ನ್ಯಾಯಾಧೀಶರ ಮುಂದೆ ವಿವರಿಸಿದ ದರ್ಶನ್, “ಜೈಲಿನಲ್ಲಿ ವಿಪರೀತ ಚಳಿ ಇರುವುದರಿಂದ ಬೆನ್ನು ನೋವು ಮತ್ತೆ ಹೆಚ್ಚಾಗಿದೆ. ನೋವು ತೀವ್ರವಾಗಿರುವುದರಿಂದ ಸೂಕ್ತ ಫಿಸಿಯೋಥೆರಪಿ ಚಿಕಿತ್ಸೆ ಪಡೆಯಲು ಅವಕಾಶ ಮಾಡಿಕೊಡಿ” ಎಂದು ಮನವಿ ಮಾಡಿದರು.
ದರ್ಶನ್ ಅವರ ಕೋರಿಕೆಯನ್ನು ಆಲಿಸಿದ ನ್ಯಾಯಾಲಯ, ಫಿಸಿಯೋಥೆರಪಿ ಚಿಕಿತ್ಸೆ ಒದಗಿಸುವ ಕುರಿತು ಜೈಲು ನಿಯಮಗಳ ಪ್ರಕಾರ ಸೂಕ್ತ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದೆ.
ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಶೀಟರ್ಗಳೊಂದಿಗೆ ರಾಜಾತಿಥ್ಯ ಪಡೆದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಗಿತ್ತು. ಅಲ್ಲೂ ಬೆನ್ನು ನೋವಿನಿಂದ ಬಳಲುತ್ತಿದ್ದ ದರ್ಶನ್, ಶಸ್ತ್ರಚಿಕಿತ್ಸೆ ಪಡೆಯಬೇಕು ಎಂಬ ಕಾರಣ ನೀಡಿ ಹೈಕೋರ್ಟ್ನಿಂದ 6 ವಾರಗಳ ಕಾಲ ಮಧ್ಯಂತರ ಜಾಮೀನು ಪಡೆದುಕೊಂಡಿದ್ದರು. ಆದರೆ, ಜಾಮೀನು ಅವಧಿಯಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿರಲಿಲ್ಲ.
ಮಧ್ಯಂತರ ಜಾಮೀನು ಅವಧಿ ಮುಗಿದ ನಂತರ ಮತ್ತೆ ಜೈಲು ಸೇರಿದ ದರ್ಶನ್, ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಜೈಲಿನಲ್ಲಿ ಚಳಿಯ ಕಾರಣಕ್ಕೆ ಮತ್ತೆ ಬೆನ್ನು ನೋವು ಮರುಕಳಿಸಿದ್ದು, ಈಗ ಫಿಸಿಯೋಥೆರಪಿಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ದರ್ಶನ್ಗೆ ಫಿಸಿಯೋಥೆರಪಿ ಪಡೆಯಲು ಅವಕಾಶ ಸಿಗುತ್ತಾ? ಅಥವಾ ನೋವು ಹೆಚ್ಚಾದರೆ ಅನಾರೋಗ್ಯದ ಕಾರಣ ನೀಡಿ ಮತ್ತೆ ಜಾಮೀನಿಗೆ ಅರ್ಜಿ ಸಲ್ಲಿಸುತ್ತಾರಾ ಎಂಬ ಕುತೂಹಲ ಮೂಡಿದೆ.



