ನವೆಂಬರ್ 13ಕ್ಕೆ ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆ: ಪ್ರಧಾನಿ ಮೋದಿ ಬೆಂಗಳೂರಿಗೆ ಭೇಟಿ
ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಬಹುನಿರೀಕ್ಷಿತ ಪಿಂಕ್ ಲೈನ್ ಮೆಟ್ರೋ ಮಾರ್ಗವನ್ನು ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.
ಈ ಕುರಿತು ಸಂಸದ ತೇಜಸ್ವಿ ಸೂರ್ಯ ಅವರು ತಮ್ಮ ಎಕ್ಸ್ (X) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರು ಅಂದು ತಾವರೆಕೆರೆ ನಿಲ್ದಾಣದಿಂದ ಐಐಎಂಬಿ-ಬೈಲೇಕಹಳ್ಳಿ (IIMB-Bilekahalli) ನಿಲ್ದಾಣದವರೆಗೆ ಮೆಟ್ರೋದಲ್ಲಿ ಪ್ರಯಾಣಿಸುವ ಮೂಲಕ ಪಿಂಕ್ ಲೈನ್ ಸೇವೆಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಪಿಂಕ್ ಲೈನ್ ಉದ್ಘಾಟನೆಯೊಂದಿಗೆ ಬೆಂಗಳೂರು ಮೆಟ್ರೋ ಜಾಲದ ಒಟ್ಟು ಉದ್ದ 103.6 ಕಿ.ಮೀ.ಗೆ ವಿಸ್ತರಣೆಯಾಗಲಿದೆ. ಈ ಮೂಲಕ ದೆಹಲಿಯ ಬಳಿಕ ದೇಶದ ಎರಡನೇ ಅತಿದೊಡ್ಡ ಮೆಟ್ರೋ ಜಾಲ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಲಿದೆ.
2014ರಲ್ಲಿ ಬೆಂಗಳೂರಿನಲ್ಲಿ ಕೇವಲ 7 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಕಳೆದ ವರ್ಷಗಳಲ್ಲಿ ಮೆಟ್ರೋ ಜಾಲ ಗಣನೀಯವಾಗಿ ವಿಸ್ತರಣೆಯಾಗಿದ್ದು, 2014ರಿಂದ ಈವರೆಗೆ 96 ಕಿ.ಮೀ.ಗೂ ಹೆಚ್ಚು ಹೊಸ ಮಾರ್ಗಗಳು ಸೇರ್ಪಡೆಯಾಗಿವೆ ಎಂದು ತೇಜಸ್ವಿ ಸೂರ್ಯ ತಮ್ಮ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
ಬೆಂಗಳೂರಿನ ಮೂಲಸೌಕರ್ಯ ಮತ್ತು ಸಂಪರ್ಕ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಇದು ಮಹತ್ವದ ಮೈಲಿಗಲ್ಲಾಗಿದೆ. ಮೆಟ್ರೋ ವಿಸ್ತರಣೆಯಿಂದ ಸಂಚಾರ ದಟ್ಟಣೆ ಕಡಿಮೆ ಮಾಡುವುದರ ಜೊತೆಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಮತ್ತಷ್ಟು ಉತ್ತೇಜನ ದೊರೆಯಲಿದೆ. ಬೆಂಗಳೂರಿನ ಅಭಿವೃದ್ಧಿ ಪಯಣದಲ್ಲಿ ಇದು ಪ್ರಮುಖ ಹೆಜ್ಜೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮೈಲಿಗಲ್ಲುಗಳನ್ನು ಸಾಧಿಸುವ ವಿಶ್ವಾಸವಿದೆ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ.



