ಮೈಸೂರು ಅರಮನೆ ಸರ್ಕಾರದ ಆಸ್ತಿಯಲ್ಲ, ನಮ್ಮ ಖಾಸಗಿ ಸ್ವತ್ತು; ಅಂಬಾರಿ ವಿಚಾರವಾಗಿ ಪ್ರಮೋದಾ ದೇವಿ ಒಡೆಯರ್ ಸ್ಪಷ್ಟನೆ

Must read

ಮೈಸೂರು ಅರಮನೆ ಸರ್ಕಾರದ ಆಸ್ತಿಯಲ್ಲ, ನಮ್ಮ ಖಾಸಗಿ ಸ್ವತ್ತು; ಅಂಬಾರಿ ವಿಚಾರವಾಗಿ ಪ್ರಮೋದಾ ದೇವಿ ಒಡೆಯರ್ ಸ್ಪಷ್ಟನೆ

ಮೈಸೂರು: ಮೈಸೂರು ಅರಮನೆ ಸರ್ಕಾರದ ಆಸ್ತಿಯಲ್ಲ, ಅದು ನಮ್ಮ ಖಾಸಗಿ ಸ್ವತ್ತು. ಸರ್ಕಾರದ ಔದಾರ್ಯದಿಂದ ನಾವು ಅರಮನೆಯಲ್ಲಿ ವಾಸಿಸುತ್ತಿಲ್ಲ. ನ್ಯಾಯಾಲಯದ ನಿರ್ದೇಶನದಂತೆ ಅರಮನೆಯಲ್ಲಿ ವಾಸವಾಗಿದ್ದೇವೆ ಎಂದು ಪ್ರಮೋದಾ ದೇವಿ ಒಡೆಯರ್ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅರಮನೆಯ ಮಾಲೀಕತ್ವ, ನಿರ್ವಹಣೆ, ಅಂಬಾರಿ ಬಳಕೆ ಹಾಗೂ ದಸರಾ ಸಂದರ್ಭದಲ್ಲಿ ಉಂಟಾದ ಗೊಂದಲಗಳ ಕುರಿತು ತಮ್ಮ ನಿಲುವನ್ನು ಬಹಿರಂಗಪಡಿಸಿದರು.
ಅರಮನೆ ನಿರ್ವಹಣೆ ವಿಚಾರ ನ್ಯಾಯಾಲಯದಲ್ಲಿದೆ
ಮೈಸೂರು ಅರಮನೆಯ ನಿರ್ವಹಣೆಗಾಗಿ ಸರ್ಕಾರ ಅರಮನೆ ಆಡಳಿತ ಮಂಡಳಿಯನ್ನು ರಚಿಸಿದೆ. ಆದರೆ ಈ ನಿರ್ಧಾರವನ್ನು ನಾವು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದೇವೆ. ಸದ್ಯ ಈ ಪ್ರಕರಣ ವಿಚಾರಣೆಯ ಹಂತದಲ್ಲಿದೆ. ಸರ್ಕಾರದ ವಿಶೇಷ ಅನುಗ್ರಹದಿಂದ ನಾವು ಅರಮನೆಯಲ್ಲಿ ವಾಸಿಸುತ್ತಿಲ್ಲ. ಅರಮನೆ ನಮ್ಮ ಖಾಸಗಿ ಸ್ವತ್ತು ಎಂದು ಪ್ರಮೋದಾ ದೇವಿ ಒಡೆಯರ್ ತಿಳಿಸಿದರು.
ಅಂಬಾರಿ ಬಾಡಿಗೆಗೆ ನೀಡುತ್ತಿಲ್ಲ, ವಾಣಿಜ್ಯ ಬಳಕೆಗೆ ಹಣ ಪಡೆಯುತ್ತಿದ್ದೇವೆ!
ಅಂಬಾರಿ ವಿಚಾರವಾಗಿ ಮಾತನಾಡಿದ ಅವರು, ಅಂಬಾರಿಯನ್ನು ಸರ್ಕಾರಕ್ಕೆ ಬಾಡಿಗೆ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಅಂಬಾರಿಯನ್ನು ಇಟ್ಟುಕೊಂಡು ಟಿಕೆಟ್ ಮಾರಾಟ ಮಾಡಲಾಗುತ್ತದೆ. ಅದರ ಮೂಲಕ ಪ್ರಚಾರ ಹಾಗೂ ಆದಾಯ ಗಳಿಸಲಾಗುತ್ತದೆ. ಹೀಗಾಗಿ ಅಂಬಾರಿಯ ವಾಣಿಜ್ಯ ಬಳಕೆಗೆ ಹಣ ನೀಡಲಾಗುತ್ತಿದೆ. ಅದನ್ನು ಬಾಡಿಗೆ ಎಂದು ಕರೆಯುವುದು ಸರಿಯಲ್ಲ ಎಂದರು.
ಅಂಬಾರಿ ಮತ್ತು ಸಿಂಹಾಸನ ಎರಡೂ ನಮ್ಮ ವಶದಲ್ಲಿವೆ. ಹಿಂದೆಯೂ ನಮ್ಮ ಬಳಿಯೇ ಇದ್ದವು, ಮುಂದೆಯೂ ನಮ್ಮ ವಶದಲ್ಲೇ ಇರುತ್ತವೆ. ಅಂಬಾರಿಗೆ ಎಷ್ಟು ಗೌರವಧನ ನೀಡಲಾಗಿದೆ ಎಂಬುದನ್ನು ನಾನು ಬಹಿರಂಗಪಡಿಸುವುದಿಲ್ಲ. ಸರ್ಕಾರ ಬೇಕಾದರೆ ತಾನು ಎಷ್ಟು ಹಣ ನೀಡಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಸರ್ಕಾರಕ್ಕೆ ಸ್ವಂತ ಅಂಬಾರಿ ಮಾಡಿಸಿಕೊಳ್ಳುವ ಅವಕಾಶವಿದೆ. ಅದಕ್ಕೆ ನಮ್ಮ ಯಾವುದೇ ಅಭ್ಯಂತರವಿಲ್ಲ. ಈ ಹಿಂದೆಯೂ ಸರ್ಕಾರಕ್ಕೆ ಇದೇ ಸಲಹೆ ನೀಡಿದ್ದೆ. ಸರ್ಕಾರದ ಬಳಿ ಸಂಪನ್ಮೂಲಗಳಿದ್ದರೂ ಹೊಸ ಅಂಬಾರಿ ಮಾಡಿಸಿಕೊಳ್ಳಲಿಲ್ಲ ಎಂದು ಹೇಳಿದರು.
ಅಂಬಾರಿ ಹೊರುವ ಆನೆ ಬಗ್ಗೆ ತಿಳಿದುಕೊಳ್ಳುವುದು ನನ್ನ ಹಕ್ಕು
ಅಂಬಾರಿ ಹೊರುವ ಆನೆಯ ಆಯ್ಕೆ ವಿಚಾರವಾಗಿಯೂ ಪ್ರಮೋದಾ ದೇವಿ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದರು. ಅಂಬಾರಿಯ ಮಾಲೀಕರಾಗಿ ಅದನ್ನು ಹೊರುವ ಆನೆ ಯಾವುದು ಎಂಬುದನ್ನು ತಿಳಿದುಕೊಳ್ಳುವ ಸಂಪೂರ್ಣ ಹಕ್ಕು ನನಗಿದೆ. ಶಿಷ್ಟಾಚಾರದ ಪ್ರಕಾರ ಮಾಹಿತಿ ನೀಡಬೇಕು ಎಂದು ನಾನು ಹೇಳುತ್ತಿಲ್ಲ. ಆದರೆ ಪರಸ್ಪರ ನಂಬಿಕೆ, ಸಹಕಾರ ಮತ್ತು ತಿಳುವಳಿಕೆಯಿಂದ ಇಂತಹ ವಿಚಾರಗಳು ನಡೆಯಬೇಕು ಎಂದರು.
ಅಂಬಾರಿ ಹೊರುವ ಆನೆಯನ್ನು ಮೊದಲೇ ನಿರ್ಧರಿಸಬಹುದಿತ್ತು. ಆದರೆ ಕೇವಲ ಐದು ದಿನಗಳ ಮುಂಚಿತವಾಗಿ ಮಾಹಿತಿ ನೀಡಿದರೆ ಹೇಗೆ ಭರವಸೆ ಮೂಡಿಸಿಕೊಳ್ಳಲು ಸಾಧ್ಯ? ಯಾವ ಭರವಸೆಯ ಮೇಲೆ ಅಂಬಾರಿಯನ್ನು ನೀಡಬೇಕು ಎಂದು ಪ್ರಶ್ನಿಸಿದರು.
ದಸರಾ ಗೊಂದಲಕ್ಕೆ ಇತಿಶ್ರೀ ಹಾಡಲು ನಿರ್ಧಾರ
ದಸರಾ ಸಂದರ್ಭದಲ್ಲಿ ಭದ್ರತಾ ವ್ಯವಸ್ಥೆಯ ಹೆಸರಿನಲ್ಲಿ ಕೆಲವು ತೊಂದರೆಗಳು ಎದುರಾಗಿವೆ. ಜಟ್ಟಿ ಕಾಳಗ ನಡೆಸುವವರನ್ನು ಅರಮನೆಯೊಳಗೆ ಬಿಡದಿರುವುದು ಸಮಸ್ಯೆಯಾಯಿತು. ಆಯುಧ ಪೂಜೆ ಮತ್ತು ವಿಜಯಯಾತ್ರೆಯ ಸಂದರ್ಭದಲ್ಲಿಯೂ ಪ್ರತಿವರ್ಷ ಕೆಲವು ಅಡಚಣೆಗಳು ಎದುರಾಗುತ್ತಿವೆ ಎಂದು ತಿಳಿಸಿದರು.
ನವರಾತ್ರಿ ಆಚರಣೆಯನ್ನು ಏಳು ದಿನಕ್ಕೆ ಸೀಮಿತಗೊಳಿಸಬೇಕು ಎಂದು ನಾನು ಹೇಳಿಲ್ಲ. ಏಳು ದಿನಗಳಲ್ಲೇ ಅರ್ಧ ಕಾರ್ಯಕ್ರಮಗಳನ್ನು ಮುಗಿಸಿ, ಉಳಿದ ಕಾರ್ಯಕ್ರಮಗಳನ್ನು ನಂತರ ನಡೆಸುವಂತೆ ಸಲಹೆ ನೀಡಿದ್ದೇನೆ. ಸರ್ಕಾರಕ್ಕೆ ಯಾವುದೇ ನಿರ್ದೇಶನ ನೀಡಿಲ್ಲ. ಸರ್ಕಾರಕ್ಕೆ ಪತ್ರವನ್ನೂ ಬರೆದಿಲ್ಲ. ಮಾಧ್ಯಮಗಳ ಮೂಲಕ ಸಾರ್ವಜನಿಕರ ಸಹಕಾರ ಕೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

- Advertisement -spot_img

More articles

- Advertisement -spot_img

Latest article