ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚಿದ ಅರ್ಚಕರು; 11 ದಿನಗಳ ಜಾತ್ರೆಗೆ ತೆರೆ, ₹25.36 ಕೋಟಿ ಆದಾಯ!
ಹಾಸನ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ಕರುಣಿಸುವ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲನ್ನು ಇಂದು (ನವೆಂಬರ್ 11) ಮಧ್ಯಾಹ್ನ ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಮುಚ್ಚಲಾಯಿತು. ಈ ಮೂಲಕ 11 ದಿನಗಳ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿದೆ.
ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಹಾಗೂ ಗಣ್ಯರಿಗೆ ದೇವಿಯ ಅಂತಿಮ ದರ್ಶನಕ್ಕೆ ಅವಕಾಶ ನೀಡಿದ ಬಳಿಕ ಅರ್ಚಕರು ಗರ್ಭಗುಡಿಯಲ್ಲಿದ್ದ ದೇವಿಯ ಅಲಂಕಾರವನ್ನು ತೆರವುಗೊಳಿಸಿದರು. ದೇವಿಗೆ ಸಮರ್ಪಿಸಲಾಗಿದ್ದ ಒಡವೆಗಳನ್ನು ತೆಗೆದು ಅಲಂಕಾರ ವಿಸರ್ಜನೆ ಪೂಜೆ ನೆರವೇರಿಸಲಾಯಿತು. ಬಳಿಕ ದೀಪಕ್ಕೆ ಎಣ್ಣೆ ಹಾಕಿ, ಸಂಪ್ರದಾಯದಂತೆ ಗರ್ಭಗುಡಿ ಬಾಗಿಲನ್ನು ಮುಚ್ಚಿ ಸೀಲ್ ಮಾಡಲಾಯಿತು.
ಪ್ರಧಾನ ಅರ್ಚಕ ನಾಗರಾಜ್ ನೇತೃತ್ವದ ಅರ್ಚಕರ ತಂಡವು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಶಾಸಕರು, ಸಂಸದರು ಹಾಗೂ ಗಣ್ಯರ ಸಮ್ಮುಖದಲ್ಲಿ ಈ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿತು.
ಈ ಬಾರಿಯ ಹಾಸನಾಂಬೆ ಜಾತ್ರಾ ಮಹೋತ್ಸವ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಅಕ್ಟೋಬರ್ 30ರಿಂದ ನವೆಂಬರ್ 11ರ ಬೆಳಗ್ಗೆ 6 ಗಂಟೆಯವರೆಗೆ 30 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ.
₹1,000 ಮತ್ತು ₹300ರ ವಿಶೇಷ ದರ್ಶನದ ಟಿಕೆಟ್ ಮಾರಾಟ ಹಾಗೂ ಲಾಡು ಮಾರಾಟದಿಂದ ಒಟ್ಟು ₹25.36 ಕೋಟಿ ಆದಾಯ ಸಂಗ್ರಹವಾಗಿದೆ.ಜಾತ್ರೆ ಯಾವುದೇ ಗೊಂದಲ, ನೂಕುನುಗ್ಗಲು ಇಲ್ಲದೆ ಯಶಸ್ವಿಯಾಗಿ ನಡೆದರೆ ಈಡುಗಾಯಿ ಒಡೆಯುವುದಾಗಿ ಶಾಂತಿಗ್ರಾಮ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಚಂದ್ರಶೇಖರ್ ಹರಕೆ ಕಟ್ಟಿಕೊಂಡಿದ್ದರು. ಅದರಂತೆ ಜಾತ್ರೆ ಯಶಸ್ವಿಯಾಗಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಎಸ್ಪಿ ಶುಭನ್ವಿತಾ ಅವರೊಂದಿಗೆ ಡಿವೈಎಸ್ಪಿ, ಸಿಪಿಐ ಹಾಗೂ ಪಿಎಸ್ಐಗಳು ದೇವಾಲಯದ ಎದುರು ಈಡುಗಾಯಿ ಒಡೆದು ಹರಕೆ ತೀರಿಸಿದರು.
ಈ ಸಂದರ್ಭದಲ್ಲಿ ಎಸ್ಪಿ ಶುಭನ್ವಿತಾ ಅವರು ಹಾಸನಾಂಬೆ ಜಾತ್ರೆ ಯಶಸ್ವಿಯಾಗಲು ಶ್ರಮಿಸಿದ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಹಕರಿಸಿದವರಿಗೆ ಧನ್ಯವಾದ ತಿಳಿಸಿದರು.
ಮುಂದಿನ ವರ್ಷ ಹಾಸನಾಂಬೆ ದೇವಿಯ ಜಾತ್ರಾ ಮಹೋತ್ಸವ ಅಕ್ಟೋಬರ್ 21ರಿಂದ ಅಕ್ಟೋಬರ್ 31ರವರೆಗೆ ನಡೆಯಲಿದೆ ಎಂದು ತಿಳಿಸಲಾಗಿದೆ.



