ಇವರು ಸಾಮಾನ್ಯರಲ್ಲ. ಇವರ ಬಗ್ಗೆ ತಿಳಿದವರೆಲ್ಲಾ ಹುಬ್ಬೇರಿಸಿ ಮಾತನಾಡುತ್ತಾರೆ. ಈ ಅಸಾಮಾನ್ಯರ ಬಗ್ಗೆ ಅಚ್ಚರಿಯಿಂದ ಮೆಚ್ಚುಗೆಯ ನುಡಿಗಳನ್ನು ಆಡದಿರುವವರೇ ಇಲ್ಲ…! ತನ್ನೆಲ್ಲಾ ಚೌಕಟ್ಟು, ದೈಹಿಕ ಹಾಗು ಮಾನಸಿಕ ಗೋಡೆಗಳನ್ನು ಒಡೆದು ಹೆಮ್ಮರವಾಗಿ ಬೆಳೆದವರಿವರು…!
ಹೊಲಿಗೆ, ಬ್ಯೂಟಿಷಿಯನ್, ನಾಟಕ ಹಾಗೂ ನೃತ್ಯ ಹೀಗೆ ನಾನಾ ಕಲೆಗಳನ್ನು ಬಲ್ಲವರು. ಒಂದರ್ಥದಲ್ಲಿ ಸಕಲ ಕಲಾ ವಲಭೆ.
ಈಗ ನಾನು ಹೇಳಲು ಹೊರಟಿರುವುದು ನಮ್ಮವರೇ ಆದ, ಆದರೂ ನಮ್ಮವರಲ್ಲವೆಂದು ಹೇಳುವ ಸಮಾಜದ ನಡುವೆ ನಿಂತು ಎತ್ತರಕ್ಕೆ ಬೆಳೆಯುತ್ತಿರುವ ತೃತೀಯ ಲಿಂಗಿ ಸ್ವಾಭಿಮಾನಿಯ ಬಗ್ಗೆ.
ಈಕೆಯ ಹೆಸರು ಕಾಜಲ್ ಬ್ರಹ್ಮಾವರ. ಮೂಲತಃ ಮಂಡ್ಯದವರು. ಆದರೆ ಬದುಕು ಕಟ್ಟಿಕೊಂಡದ್ದು, ತಮ್ಮೊಳ್ಳಗಿನ ಕಲೆಗೆ ರೂಪ ಕೊಟ್ಟಿದ್ದು ಮಾತ್ರ ಉಡುಪಿಯ ಬ್ರಹ್ಮಾವರದಲ್ಲಿ. ಆಕೆಯ ದನಿಯಲ್ಲಿ ಜೀವನೋತ್ಸಾವಿದೆ. ಮಾತಿನಲ್ಲಿ ಗಾಢ ಅರ್ಥಗಳು ತುಂಬಿವೆ. ಕಣ್ಣಲ್ಲಿ ಸಾಧಿಸುವ ಕಿಚ್ಚಿದೆ. ಈಕೆಯ ಮಾತುಗಳನ್ನು ಕೇಳಿದವರ ಹುಬ್ಬೇರುತ್ತದೆ. ಯಾವುದೇ ವ್ಯಕ್ತಿ ಛಲವಿದ್ದರೆ ಯಾವ ಎತ್ತರಕ್ಕೆ ಬೇಕಾದರು ಏರಬಹುದು ಎಂಬುದಕ್ಕೆ ಈಕೆ ಸೂಕ್ತ ಉದಾಹರಣೆ.
ಹುಟ್ಟಿದ್ದು ಗಂಡಾಗಿ ಆದರೆ ಕ್ರಮೇಣ ಜೀವನಶೈಲಿಗೆ ಅಳವಡಿಸಿಕೊಂಡಿದ್ದು ಸ್ತ್ರೀತನವನ್ನು. ತನಗೆ ಜನ್ಮಕೊಟ್ಟ ಸಮಾಜದಿಂದ ಬಹಿಷ್ಕರಿಸಲ್ಪಟ್ಟರು ತಂದೆ, ತಾಯಿಯರ ಕಾಳಜಿ ಮಮತೆ ದೊರೆತದ್ದು ಮಾತ್ರ ಅಷ್ಟೇ ಸತ್ಯ. ಊರೂರು ಅಲೆಯುತ್ತಿದ್ದಾಗ ತಮ್ಮ ಸಮುದಾಯಕ್ಕೆ ಸೇರಿಸಿಕೊಂಡು ವಾತ್ಸಲ್ಯ ತುಂಬಿ ಪೋಷಿಸಿದವರು ಹೀನಾ ಮಮ್ಮಿ. ಈ ಹೀನಾ ಮಮ್ಮಿ 90ರ ದಶಕದ ಲಿಂಗತ್ವ ಅಲ್ಪಸಂಖ್ಯಾತರ ಪೈಕಿಯ ವಿಶ್ವಸುಂದರಿ. ಕಾಜಲ್ ರ ಕನಸಿನ ಸಸಿಗೆ ನೀರೆರೆದು ಪೋಷಿಸಿದವರು. ಈಕೆಗೆ ಜನ್ಮ ನೀಡಿದ ಪೋಷಕರು ದ್ವಿತೀಯ ಪಿ.ಯು.ಸಿವರೆಗು ಇವರಿಗೆ ವಿದ್ಯಾಭ್ಯಾಸ ನಿಡಿರುವುದು ಹಾಗು ಕಾಜಲ್ ಶೇ.85ರಷ್ಟು ಅಂಕಗಳಿಸಿ ಉತ್ತೀರ್ಣವಾಗಿರುವುದು ವಿಶೇಷ.
ಆದರೆ, ನಂತರದ ಪ್ರತಿಯೊದು ಹೆಜ್ಜೆಯಲ್ಲೂ ಪ್ರೋತ್ಸಾಹಿಸಿದವರು ಹಿನಾ ಮಮ್ಮಿ ಹಾಗು ಅವರ ಸಮುದಾಯದ ಇತರರು. ನೃತ್ಯ ಕಲಿಯಬೇಕೆಂದಾಗ ಭರತನಾಟ್ಯ ಶಾಲೆಗೆ ಹೋದರು. ಅಲ್ಲಿ ಯಾರು ಕೂಡ ಹಿಂಜರಿಯದೆ ತುಂಬು ಮನಸ್ಸಿನಿಂದ ಪ್ರೋತ್ಸಾಹಿಸಿದರಂತೆ.
ವಿಶೇಷವಾಗಿ ಉಡುಪಿ ಎಂ.ಜಿ.ಎಂ ಕಾಲೇಜಿನ ಮಂಜುನಾಥ್ ಕಾಮತ್ ಇವರ ಗುರು ಮತ್ತು ಮಾರ್ಗದಶಿರ್ಯಾಗಿ ಪ್ರೋತ್ಸಾಹಿಸಿದ್ದಾರೆ. ಮುಂದೆ ಹಲವರ ಸಹಾಯದಿಂದ ರಂಗಭೂಮಿಯಲ್ಲಿ ಅವಕಾಶ ದೊರೆತದ್ದರಿಂದ ಬಣ್ಣದ ಲೋಕಕ್ಕೂ ಕಾಲಿರಿಸಿ ಹಲವಾರು ಊರುಗಳಲ್ಲಿ ಪ್ರದರ್ಶನ ನೀಡಿದ್ದಾರೆ.
ಈಕೆಯನ್ನು ನಿಮ್ಮ ಸಮುದಾಯದವರೆಲ್ಲಾ ಸೇರಿ ಏಕೆ ರಾಜಕೀಯ ಪಕ್ಷವೊಂದನ್ನು ಕಟ್ಟಬಾರದು ಎಂದರೆ ,” ನಮ್ಮ ಸಮುದಾಯದವರಿಗೆ ಕೆಲಸವೇ ಕೊಡಲ್ಲ, ಪಿಂಚಣಿ ಕೊಡಲ್ಲ ಇನ್ನು ಅಧಿಕಾರ ಎಲ್ಲಿ ಕೊಡ್ತಾರೆ”? ಎಂದು ಮುಗಳ್ನಗುವ ಈ ದಿಟ್ಟೆ ಹಠಕ್ಕೆ ಬಿದ್ದು ತನಗೆಂದು ಚುನಾವಣಾ ಗುರುತಿನ ಚೀಟಿಯನ್ನು ಮಾಡಿಸಿಕೊಂಡಿದ್ದಾಳೆ.
ಪ್ರಸ್ತುತ ಈಕೆ ಮಂಗಳೂರಿನ ರೇಡಿಯೋ ಸಾರಂಗದಲ್ಲಿ ರೇಡಿಯೋ ಜಾಕಿಯಾಗಿ ಹಾಗು ಸ್ಪಂದನ ಎಂಬ ಪ್ರಾದೇಶಿಕ ಚಾನಲ್‍ನಲ್ಲಿ ನಿರೂಪಕಿಯಾಗಿ ವೃತ್ತಿ ಪ್ರಾರಂಭಿಸಿದ್ದು ಲಿಂಗತ್ವ ಅಲ್ಪಸಂಖ್ಯಾತರ ಪೈಕಿಯ ಮೊದಲ ನಿರೂಪಕಿಯು ಹೌದು…!
ತಮ್ಮ ಸಮುದಾಯದ ಧ್ವನಿಯಾಗಿ ಹಲವಾರು ರ್ಯಾಲಿಗಳಲ್ಲೂ ಭಾಗವಹಿಸಿರುವ ಇವರು ತನ್ನ ಬದುಕಿನ ಅತ್ಯಂತ ದುಃಖರ ಕ್ಷಣ ತನ್ನ ತಂದೆ-ತಾಯಿಯನ್ನು ಕಳೆದುಕೊಂಡದ್ದು ಎನ್ನುತ್ತಾರೆ.
ಈಕೆಗೆ ಮತ್ತೊಂದು ಸುಂದರ ಕನಸೂ ಇದೆ. ಅದು ತಾನು ಐ.ಎ.ಎಸ್. ಅಧಿಕಾರಿಯಾಗಬೇಕು, ದೇಶ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕೆಂಬುದು. ಇನ್ನೊಂದು ಅಚ್ಚರಿಯ ಸಂಗತಿ ಈಕೆಯ ಮೂಲ ಕುಟುಂಬದವರು ಇವಳೊಂದಿಗೆ ಇನ್ನೂ ಸಂಪರ್ಕದಲ್ಲಿದ್ದಾರೆ.
ಈಕೆಯದು ನಿಷ್ಕಲ್ಮಶ ಹೃದಯ. ತನ್ನೆಲ್ಲಾ ಮಿತಿಗಳನ್ನು ಮೀರಿ ಸಮಾಜದ ಮುಖ್ಯಭೂಮಿಕೆಗೆ ಬರಬೇಕೆಂಬ ಛಲ. ತಾನಷ್ಟೆ ಅಲ್ಲದೆ ತನ್ನವರನ್ನು ಬೆಳೆಸಬೇಕೆಂಬ ಹಠ ಮತ್ತು ಮೃದುತ್ವ. ತನ್ನ ಸಮುದಾಯದವರಿಗೂ ಸಮಾಜದಲ್ಲಿ ಕನಿಷ್ಠ ಗೌರವ ಸ್ಥಾನ ಕೊಡಿಸಬೇಕೆಂಬ ಕಿಚ್ಚು. ಇತರರಂತೆ ತನಗೂ ಬದುಕುವ ಅರ್ಹತೆ ಇದೆ ಎಂದು ಹೇಳುವ ತನ್ನ ಸಮುದಾಯದ ದನಿ. ಈಕೆ ತನ್ನ ಇಡೀ ಸಮುದಾಯಕ್ಕೆ ಸುಂದರ ಶಿಲೆಯ ರೂಪ ಕೊಡಲು ಹೊರಟ್ಟಿದ್ದಾಳೆ. ತೃತೀಯ ಲಿಂಗಗಳು ಹೇಗೆ ಬದುಕು ಸಾಧಿಸಬಹುದು ಎಂಬುದಕ್ಕೆ ಮಾದರಿಯಾಗಿದ್ದಾಳೆ.
-ಪ್ರಗತಿ. ಎಂ, ಎಸ್.ಡಿ.ಎಂ ಕಾಲೇಜು, ಉಜಿರೆ