ಶಾರೂಖ್, ಅಮೀರ್ ಗೆ ಭದ್ರತೆ ಕಡಿತಗೊಳಿಸಿಲ್ಲ: ಮುಂಬೈ ಪೊಲೀಸರು
ಶಾರೂಖ್ ಖಾನ್, ಅಮೀರ್ ಖಾನ್ ಸೇರಿದಂತೆ 40 ಮಂದಿ ಬಾಲಿವುಡ್ ನಟರ ಭದ್ರತೆ ಕಡಿತಗೊಳಿಸಲಾಗಿದೆ ಎಂಬ ವರದಿಯನ್ನು ಮುಂಬೈ ಪೊಲೀಸರು ನಿರಾಕರಿಸಿದ್ದಾರೆ. ಬೆಳಗ್ಗೆಯಿಂದ ಬರುತ್ತಿರುವ ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಮುಂಬೈ ಪೊಲೀಸರು, ಅಮಿತಾಬ್ ಬಚ್ಚನ್, ದಿಲೀಪ್ ಕುಮಾರ್ ಮತ್ತು ಲತಾ ಮಂಗೇಶ್ಕರ್ ಮಾತ್ರ ತಮಗೆ ಒದಗಿಸಿದ್ದ ಭದ್ರತೆಯನ್ನು ಉಳಿಸಿಕೊಂಡಿದ್ದಾರೆ. ಇವರಿಗೆ ಇಬ್ಬರು ಸಶಸ್ತ್ರ ಪೊಲೀಸರು, ಕಾವಲು ವಾಹನ ಮತ್ತು ಒಬ್ಬ ಭದ್ರತಾಗಾರನನ್ನು ಒದಗಿಸಲಾಗಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.
ಪಾಕ್ ಗೆ ಮೋದಿ ಭೇಟಿ ತಪ್ಪಿಲ್ಲ, ನಿತೀಶ್ ಕುಮಾರ್
ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಮರ್ಥಿಸಿಕೊಂಡಿದ್ದಾರೆ. ಮೋದಿ ಪಾಕಿಸ್ತಾನಕ್ಕೆ ಭೇಟಿ ನೀದ್ದರಲ್ಲಿ ತಪ್ಪಿಲ್ಲ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ. ಆದರೆ ಪಾಕ್ ಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ್ದ ಜೆಡಿಯು ನಾಯಕ ಕೆಸಿ ತ್ಯಾಗಿ, ಪ್ರಧಾನಿ ಮೋದಿ ಅವರ ನಡೆ ಅಚ್ಚರಿ ಮೂಡಿಸಿತ್ತು ಎಂದು ಹೇಳಿದ್ದರು. ಡಿ.25 ರಂದು ಪಾಕ್ ಗೆ ಪ್ರಧಾನಿ ಮೋದಿ ದಿಢೀರ್ ಭೇಟಿ ನೀಡಿದ್ದನ್ನು ವಿರೋಧಿಸಿದ್ದ ಪಕ್ಷಗಳ ಪೈಕಿ ನಿತೀಶ್ ಕುಮಾರ್ ಅವರ ಜೆಡಿಯು ಸಹ ಗುರುತಿಸಿಕೊಂಡಿತ್ತು. ಆದರೆ ಜೆಡಿಯು ನಾಯಕ ನಿತೀಶ್ ಕುಮಾರ್ ಮಾತ್ರ ಮೋದಿಯವರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಉಗ್ರರಿಗೆ ಪಾಕ್ ನಿಂದಲೇ ನಿರ್ದೇಶನ ನೀಡಲಾಗಿತ್ತು..!
ಪಠಾಣ್ಕೋಟ್ ವಾಯುನೆಲೆಯ ಮೇಲೆ ದಾಳಿಗೈದಿದ್ದ ಪಾಕ್ ಉಗ್ರರು ದಾಳಿಯ ವೇಳೆ ಮಾಡಿರುವ ಕರೆಗಳಲ್ಲಿ ಎರಡು ಫೋನ್ ನಂಬರ್ಗಳು ಪಾಕಿಸ್ತಾನದ್ದು ಎಂದು ಭಾರತ ಪತ್ತೆ ಹಚ್ಚಿದೆ. ನಿನ್ನೆ ಭಾರತ ಪಠಾಣ್ಕೋಟ್ ದಾಳಿಯ ಮಾಸ್ಟರ್ ಮೈಂಡ್ಗಳನ್ನು ಗುರುತಿಸಿತ್ತು. ಆ ಪ್ರಕಾರ ಜೈಶ್ ಎ ಮೊಹಮ್ಮದ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಝರ್ ಹಾಗೂ ಇತರ ಮೂವರು ಮಂದಿ ಪಠಾಣ್ಕೋಟ್ ದಾಳಿಯ ಮಾಸ್ಟರ್ ಮೈಂಡ್ಗಳೆಂದು ಬಯಲು ಮಾಡಿತ್ತು. ಪಠಾಣ್ಕೋಟ್ ದಾಳಿಯ ವೇಳೆ ಉಗ್ರರು ಪಾಕಿಸ್ತಾನದ ಫೋನ್ ನಂಬರ್ಗಳಿಗೆ ಎರಡು ಕರೆಗಳನ್ನು ಮಾಡಿದ್ದು ಆ ಪೈಕಿ ಒಂದು ಕರೆಯಲ್ಲಿ ಉಗ್ರನು, ಆ ಕಡೆಯಿಂದ ಕರೆ ಸ್ವೀಕರಿಸಿದ ದಾಳಿಯ ನಿರ್ವಾಹಕ ವ್ಯಕ್ತಿಗೆ “ಉಸ್ತಾದ್’ ಎಂದು ಗೌರವಪೂರ್ವಕವಾಗಿ ಸಂಬೋಧಿಸಿರುವುದು ದಾಖಲಾಗಿದೆ.
ಪಠಾಣ್ಕೋಟ್ ದಾಳಿಗೆ ಒಳಗಿನ ವ್ಯಕ್ತಿಯಿಂದಲೇ ನೆರವು..?
ಪಠಾಣ್ ಕೋಟ್ ವಾಯು ನೆಲೆಯ ಮೇಲೆ ದಾಳಿ ನಡೆಸಲು ಬಂದಿದ್ದ ಉಗ್ರರಿಗೆ ವಾಯುನೆಲೆ ಕಟ್ಟಡ ಪ್ರವೇಶಿಸಲು ಒಳಗಿನವರೇ ಅನುಕೂಲ ಮಾಡಿಕೊಟ್ಟಿರುವ ಬಗ್ಗೆ ಈಗ ತನಿಖಾಧಿಕಾರಿಗಳಿಗೆ ಬಲವಾದ ಸಂದೇಹ ಕಾಡುತ್ತಿದೆ. ಜನವರಿ 1 ಮತ್ತು 2ರ ನಡುವಿನ ಮಧ್ಯ ರಾತ್ರಿಯ ವೇಳೆ ಪಾಕ್ ಉಗ್ರರು ವಾಯು ನೆಲೆಯ 11 ಅಡಿ ಎತ್ತರದ ಆವರಣ ಗೋಡೆಯನ್ನು ಏರಿ ಒಳಬರುವುದಕ್ಕೆ ಅನುಕೂಲವಾಗುವಂತೆ ವಾಯುನೆಲೆಯ ಮೂರು ಫ್ಲಡ್ ಲೈಟ್ಗಳನ್ನು ಮೇಲ್ಮುಖವಾಗಿ ಇರಿಸಲಾಗಿದ್ದುನ್ನು ತನಿಖಾಧಿಕಾರಿಗಳ ಪತ್ತೆ ಹಚ್ಚಿದ್ದಾರೆ.
ಡಿಡಿಸಿಎ ತನಿಖೆ ಕಾನೂನು ಬಾಹಿರ: ಎಂಎಚ್ಎ
ಕೇಂದ್ರ ಸರ್ಕಾರ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರ ನಡುವಿನ ಜಟಾಪಟಿ ಮುಂದುವರೆದಿದ್ದು, ದೆಹಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಕುರಿತ ತನಿಖೆ ಕಾನೂನು ಬಾಹಿರ ಎಂದು ಕೇಂದ್ರ ಗೃಹ ಸಚಿವಾಲಯ ಘೋಷಿಸಿದೆ. ಡಿಡಿಸಿಎ ಹಗರಣದ ಕುರಿತು ದೆಹಲಿ ಸರ್ಕಾರ ನಡೆಸುತ್ತಿರುವ ತನಿಖೆ ಕಾನೂನು ಬಾಹಿರ. ಏಕೆಂದರೆ ಡಿಡಿಸಿಎಯು ದೆಹಲಿ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.
7 ರಾಜ್ಯಗಳಲ್ಲಿ ಎತ್ತಿನ ಗಾಡಿ, ಜಲ್ಲಿಕಟ್ಟು ಆಚರಣೆಯ ನಿಷೇಧ ತೆರವು
ಕನರ್ಾಟಕ ಸೇರಿದಂತೆ ಆರು ರಾಜ್ಯಗಳಲ್ಲಿ ಜಲ್ಲಿಕಟ್ಟು ಮತ್ತು ಎತ್ತಿನ ಗಾಡಿ ಸ್ಪರ್ಧೆಗೆ ಹೇರಿರುವ ನಿಷೇಧವನ್ನು ಕೇಂದ್ರ ಸರ್ಕಾರ ತೆಗೆದುಹಾಕಿದೆ. ಕೇಂದ್ರ ಪರಿಸರ ಸಚಿವಾಲಯ ಈ ಸಂಬಂಧ ನಿನ್ನೆ ಅಧಿಸೂಚನೆ ಹೊರಡಿಸಿದ್ದು, ಪಂದ್ಯಗಳನ್ನು ಆಯೋಜಿಸುವ ಮುನ್ನ ಸಂಬಂಧಪಟ್ಟ ಜಿಲ್ಲಾಡಳಿತದಿಂದ ಪೂರ್ವಾನುಮತಿ ಪಡೆದುಕೊಂಡಿರಬೇಕು ಎಂದಿದೆ.
ಧೋನಿ ವಿರುದ್ಧ ಜಾಮೀನು ರಹಿತ ವಾರೆಂಟ್
ಧಾರ್ಮಿಕ ಭಾವನೆಗೆ ದಕ್ಕೆ ತಂದ ಆರೋಪದಲ್ಲಿ ಟೀಂ ಇಂಡಿಯಾದ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಅನಂತಪುರಂ ಜೆಎಂಎಫ್ ಸಿ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಇಂದು ಪ್ರಕರಣದ ವಿಚಾರಣೆ ನಡೆಸಿದ ಅನಂತಪುರಂ ಕೋರ್ಟ್, ಮಹೇಂದ್ರ ಸಿಂಗ್ ಧೋನಿ ಫೆಬ್ರುವರಿ 25ರಂದು ಖುದ್ದು ಕೋರ್ಟ್ ಗೆ ಹಾಜರಾಗುವಂತೆ ಸೂಚನೆ ನೀಡಿದೆ.
ತಮಿಳುನಾಡಿನಲ್ಲಿ ಭೀಕರ ಅಪಘಾತ, 10 ಸಾವು
ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿ ಶುಕ್ರವಾರ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ 10 ಮಂದಿ ಸಾವನ್ನಪ್ಪಿದ್ದಾರೆ. ಅಪಘಾತಕ್ಕೀಡಾದ ಬಸ್ಸನ್ನು ಟೂರಿಸ್ಟ್ ಬಸ್ ಎಂದು ಹೇಳಲಾಗುತ್ತಿದ್ದು, ತಮಿಳುನಾಡಿನ ಪಾಂಡಿಚೆರಿಯಿಂದ ಕೇರಳಕ್ಕೆ ತೆರಳುತ್ತಿತ್ತು. ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ತಿರುವು ತೆಗೆದುಕೊಳ್ಳಲು ಹೋದಾಗ ಬಸ್ ಚಾಲಕನ ನಿಯಂತ್ರಣ ತಪ್ಪಿ ಸ್ಥಳದಲ್ಲಿದ್ದ ಬಂಡೆಗೆ ಡಿಕ್ಕಿ ಹೊಡೆದಿದೆ.
1000 ಹಳ್ಳಿಗಳಿಗೆ ಗ್ರಾಮ ವಿಕಾಸ ಭಾಗ್ಯ: ಎಚ್.ಕೆ.ಪಾಟೀಲ್
ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ “ಗ್ರಾಮ ವಿಕಾಸ’ ಭಾಗ್ಯ ನೀಡಿರುವ ರಾಜ್ಯ ಸರ್ಕಾರ 189 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳ ಒಂದು ಸಾವಿರ ಗ್ರಾಮಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದೆ. ಪ್ರತಿ ವಿಧಾನಸಭೆ ಕ್ಷೇತ್ರದ ತಲಾ ಐದು ಗ್ರಾಮಗಳನ್ನು ಸಮಗ್ರ ಅಭಿವೃದ್ಧಿ ಪಡಿಸುವುದು ಯೋಜನೆಯ ಗುರಿ. ಒಂದೊಂದು ವಿಧಾನಸಭೆ ಕ್ಷೇತ್ರಕ್ಕೆ 3.75 ಕೋಟಿ ರೂಪಾಯಿ ಅನುದಾನ ಈ ಯೋಜನೆಯಡಿ ಲಭ್ಯವಾಗಲಿದ್ದು, ಮೊದಲ ಹಂತದಲ್ಲಿ 2015-16 ನೇ ಸಾಲಿಗೆ ತಲಾ 1 ಕೋಟಿ ರೂಪಾಯಿಯಂತೆ 189 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಮಕ್ಕಳ ಗುಲಾಮಗಿರಿಯನ್ನು ಕೊನೆಗಾಣಿಸುತ್ತೇನೆ: ಕೈಲಾಶ್ ಸತ್ಯರ್ಥಿ
ಭಾರತ ಮತ್ತು ವಿಶ್ವಾದ್ಯಂತ ಮಕ್ಕಳ ಹಕ್ಕು ಮತ್ತು ರಕ್ಷಣೆಗಾಗಿ ಹೋರಾಡುತ್ತಿರುವ 2014ರ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೈಲಾಶ್ ಸತ್ಯರ್ಥಿ, ತಮ್ಮ ಜೀವಿತಾವಧಿಯಲ್ಲಿ ಮಕ್ಕಳ ಗುಲಾಮಗಿರಿ ಪದ್ಧತಿಯನ್ನು ಹೋಗಲಾಡಿಸುವುದು ತಮ್ಮ ಅಭಿಯಾನದ ಗುರಿ ಎಂದಿದ್ದಾರೆ. ನಾವು ಮಕ್ಕಳ ಸ್ವಾತಂತ್ರ್ಯದ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ನನ್ನ ಜೀವಿತಾವಧಿಯಲ್ಲಿ ಮಕ್ಕಳ ಗುಲಾಮಗಿರಿಯನ್ನು ಹೋಗಲಾಡಿಸುವುದು ನನ್ನ ಗುರಿ, 35 ವರ್ಷ ಮಾನವ ಜನಾಂಗದ ಇತಿಹಾಸದಲ್ಲಿ ದೀರ್ಘ ವರ್ಷವೇನಲ್ಲ, 35 ವರ್ಷಗಳ ಹಿಂದೆ ನಮ್ಮ ದೇಶ ಸೇರಿದಂತೆ ವಿಶ್ವಾದ್ಯಂತ ಮಕ್ಕಳ ಗುಲಾಮಗಿರಿ ಸಮಸ್ಯೆಯೇ ಆಗಿರಲಿಲ್ಲ ಎಂದರು.
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com