ಸಿನಿಮಾ ಇಂಡಸ್ಟ್ರಿಯಲ್ಲಿ ಒಂದು ನಂಬಿಕೆ ಇದೆ. ಅದೇನಪ್ಪಾ ಅಂದ್ರೆ, ಯಾರಾದ್ರು ಹೀರೋ ಕೃಷ್ಣನ ಜನ್ಮಸ್ಥಾನಕ್ಕೆ ಹೋಗಿ ಬಂದ್ರೆ ಯಶಸ್ಸು ಹಿಂಬಾಲಿಸುತ್ತೆ. ಕಳೆದ ಅನೇಕ ನಟರ ಬದುಕಿನಲ್ಲಿ ಇದು ನಿಜವೂ ಆಗಿದೆ. ಹೀಗಾಗಿಯೇ ದುನಿಯಾ ವಿಜಯ್ಗೂ ಇಂಥಾದ್ದೇ ಅದೃಷ್ಟ ಒಲಿದು ಬರುತ್ತಾ ಅನ್ನೋ ಪ್ರಶ್ನೆಯೊಂದು ಉದ್ಭವಿಸಿದೆ.
2011ರಲ್ಲಿ ಪತ್ನಿ ವಿಜಯಲಕ್ಷ್ಮಿಯವರ ಮೇಲೆ ಹಲ್ಲೆ ಮಾಡಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲು ಸೇರಿದ್ದರು. ಅವರು ಜೈಲಿನಲ್ಲಿ ಇರುವಾಗಲೇ ದರ್ಶನ್ ಅಭಿನಯದ ಸಾರಥಿ ಚಿತ್ರ ಬಿಡುಗಡೆಯಾಗಿತ್ತು. ಅದುವರೆಗೆ ಸಾಲು ಸಾಲು ಸೋಲನ್ನ ಕಂಡಿದ್ದ ದರ್ಶನ್ಗೆ ಸಾರಥಿ ಅದ್ಭುತ ಯಶಸ್ಸನ್ನ ತಂದುಕೊಟ್ಟಿತ್ತು.
ಇದೊಂದೇ ಅಲ್ಲ, ಬಾಲಿವುಡ್ನಲ್ಲಿ ಸಲ್ಮಾನ್ ಖಾನ್ ಕೂಡ ಜೈಲಿಗೆ ಹೋಗಿ ಬಂದಿದ್ದರು. 1998ರಲ್ಲಿ ಸಲ್ಮಾನ್ ಖಾನ್ ಜೈಲು ದರ್ಶನ ಮಾಡಿದ್ದರು. ಜೈಲಿನಿಂದ ಹೊರ ಬಂದ ಕೆಲವೇ ದಿನಗಳಲ್ಲಿ ಸಲ್ಮಾನ್ ಅವರ ಚಿತ್ರಗಳು ಯಶಸ್ಸನ್ನ ಕಂಡಿದ್ದವು.
ಇನ್ನೊಂದೆಡೆ ಮುಂಬೈ ಸ್ಫೋಟಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಸಂಜಯ್ ದತ್ ಕೇಸ್ನಲ್ಲೂ ಇದೇ ಆಗಿತ್ತು. ಸಾಲು ಸಾಲು ಸೋಲು ಕಂಡ ಸಮಯದಲ್ಲೇ ಸಂಜಯ್ ದತ್ ಕೂಡ ಜೈಲು ಸೇರಿದ್ದರು. ಜೈಲಿನಿಂದ ಹೊರ ಬಂದ ಬಳಿಕವೇ ಅವರ ಮುನ್ನಾಭಾಯಿ ಎಂಬಿಬಿಎಸ್, ಲಗೇರಹೋ ಮುನ್ನಾಭಾಯಿ ಚಿತ್ರಗಳಿಗೆ ಅದ್ಭುತ ಯಶಸ್ಸು ಸಿಕ್ಕಿದ್ದು.
ದುನಿಯಾ ವಿಜಯ್ ಕೂಡ ಸಾಲು ಸಾಲು ಸೋಲನ್ನೇ ಕಂಡಿದ್ದಾರೆ. ಈಗ ವಿಜಯ್ ಹಾಗೂ ಅವರ ಪುತ್ರ ಸಾರ್ಮಾಟ್ ಅಭಿನಯದ ಕುಸ್ತಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದುವರೆಗೆ ಚಿತ್ರರಂಗದಲ್ಲಿ ನಡೆದು ಬಂದಿರುವುದು ನಿಜವೇ ಆದಲ್ಲಿ, ಕುಸ್ತಿ ಕೂಡ ಸೂಪರ್ ಡೂಪರ್ ಹಿಟ್ ಆಗಬಹುದು.