ಕರ್ನಾಟಕದ ನಂಬರ್ ಒನ್ ನ್ಯೂಸ್ ಚಾನಲ್ ಆಗಿರುವಂತಾ ಟಿವಿ9 ಕೊನೆಗೂ ಮಾರಾಟವಾಗಿದೆ. ಕಳೆದ ಹಲವಾರು ವರ್ಷಗಳಿಂದ ಮಾರಾಟಕ್ಕಿದ್ದ ಟಿವಿ9 ನೆಟ್ವರ್ಕ್ನ್ನ ಆಂಧ್ರಪ್ರದೇಶದ ಮೇಘಾ ಇಂಜಿನಿಯರಿಂಗ್ ಹಾಗೂ ಮೈ ಹೋಮ್ ಸಿಮೆಂಟ್ ಸಂಸ್ಥೆಗಳು ಖರೀದಿ ಮಾಡಿವೆ. ಅಸೋಸಿಯೇಟೆಡ್ ಬ್ರಾಡ್ಕಾಸ್ಟಿಂಗ್ ಕಂಪನಿ ಲಿಮಿಟೆಡ್ (ABCL) ನೇತೃತ್ವದ ಟಿವಿ9 ಕನ್ನಡ, ತೆಲುಗು, ಗುಜರಾತಿ, ಮರಾಠಿ ಹಾಗೂ ಇಂಗ್ಲಿಷ್ ಸೇರಿದಂತೆ ಒಟ್ಟು 5 ನ್ಯೂಸ್ ಚಾನಲ್ಗಳನ್ನ ಹೊಂದಿತ್ತು. ಈ 5 ನ್ಯೂಸ್ ಚಾನಲ್ಗಳು ಒಟ್ಟು 450 ಕೋಟಿ ರೂಪಾಯಿಗೆ ಮಾರಾಟವಾಗಿವೆ.
2004ರಲ್ಲಿ ಆಂಧ್ರಪ್ರದೇಶದ ಉದ್ಯಮಿ ಶ್ರೀನಿರಾಜು ಅವರು ತೆಲುಗು ನ್ಯೂಸ್ ಚಾಲನ್ ಮೂಲಕ ಟಿವಿ9 ವಾಹಿನಿಯನ್ನ ಆರಂಭಿಸಿದ್ದರು. ಆಂಧ್ರದಲ್ಲಿ ಸಿಕ್ಕಂತಾ ಅದ್ಭುತ ಯಶಸ್ಸಿನಿಂದ ಕನ್ನಡ, ಮರಾಠಿ, ತೆಲುಗು ಹಾಗೂ ನ್ಯೂಸ್9 ಎನ್ನುವ ಇಂಗ್ಲಿಷ್ ವಾಹಿನಿಯನ್ನ ಆರಂಭಿಸಿದ್ದರು. ಟಿವಿ9 ಆರಂಭವಾದ ಎಲ್ಲಾ ರಾಜ್ಯಗಳಲ್ಲೂ ಅದ್ಭುತ ಯಶಸ್ಸನ್ನ ಕಂಡಿತ್ತು. ಅದರಲ್ಲೂ ಟಿವಿ9 ಕನ್ನಡ ರಾಷ್ಟ್ರೀಯ ಮಟ್ಟದಲ್ಲಿ ನಂಬರ್ ಒನ್ ಸ್ಥಾನ ಪಡೆದು ದಾಖಲೆ ನಿರ್ಮಿಸಿತ್ತು.
ಟಿವಿ9 ಸಂಸ್ಥೆಯ 80ರಷ್ಟು ಷೇರುಗಳನ್ನು ಖರೀದಿ ಮಾಡಿರುವ ಮೇಘಾ ಇಂಜಿನಿಯರಿಂಗ್ ಹಾಗೂ ಮೈ ಹೋಮ್ ಸಿಮೆಂಟ್ ಸಂಸ್ಥೆಗಳು, ಸದ್ಯಕ್ಕೆ ಯಾವುದೇ ಬದಲವಾಣೆ ಮಾಡದಿರಲು ನಿರ್ಧರಿಸಿವೆ. ಟಿವಿ9 ಮಾರಾಟವಾದ ದಿನದಿಂದ ತೆಲುಗು ವಾಹಿನಿಯ ಮುಖ್ಯಸ್ಥರಾಗಿದ್ದ ರವಿ ಪ್ರಕಾಶ್ ಅವರು ಇಡೀ ಸಂಸ್ಥೆಯ ಜವಾಬ್ದಾರಿಯನ್ನ ವಹಿಸಿಕೊಂಡಿದ್ದಾರೆ.