ಸುಮಲತಾ ಬಿಜೆಪಿ ಸೇರಲಿದ್ದಾರೆ ಎನ್ನುವ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದಾರೆ. ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಬಳಿಕ ಸುಮಲತಾ ಅಂಬರೀಶ್ ಇದೇ ಮೊದಲ ಬಾರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಹಿರಿಯ ಬಿಜೆಪಿ ನಾಯಕ ಎಸ್ಎಂ ಕೃಷ್ಣ ಅವರನ್ನು ಭೇಟಿ ಮಾಡಿದ್ದಾರೆ.
ಈ ವೇಳೆ ಬಿಜೆಪಿ ಸೇರುವುದಿಲ್ಲ ಎನ್ನುವ ಸ್ಪಷ್ಟನೆಯನ್ನು ನೀಡಿದ ಸುಮಲತಾ, ಪಕ್ಷೇತರ ಅಭ್ಯರ್ಥಿ ಯಾವುದೇ ಪಕ್ಷ ಸೇರುವ ಅವಕಾಶ ನಮ್ಮ ಕಾನೂನಿನಲ್ಲಿ ಇಲ್ಲ. ಹಾಗಾಗಿ ನಾನು ಯಾವುದಾದರೂ ಒಂದು ಪಕ್ಷಕ್ಕೆ ಬೆಂಬಲ ನೀಡಬಹುದಷ್ಟೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ನನ್ನ ಪರ ನಿಂತಿತ್ತು. ಅವರಿಗೆ ಧನ್ಯವಾದ ಎಂದು ಹೇಳಿದ್ದಾರೆ.
ಇದೇ ವೇಳೆ ಸುಮಲತಾ ಬಿಜೆಪಿಗೆ ಧನ್ಯವಾದ ಹೇಳಿದ್ದಾರೆ. ಸುನಾಮಿ ರೀತಿ ರಾಷ್ಟ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ನಾನು ವೈಯಕ್ತಿಕವಾಗಿ ಬಿಜೆಪಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದಿದ್ದಾರೆ. ನನ್ನ ಗೆಲುವು ಒಂದು ರೀತಿ ಇತಿಹಾಸ. ಲೋಕಸಭಾ ಚುನಾವಣೆಯಲ್ಲಿ ಬೆಂಬಲ ನೀಡಿದ ಬಿಜೆಪಿಗೆ ಧನ್ಯವಾದ ಹೇಳುತ್ತಾರೋ ಅಥವಾ ಕಮಲ ಪಾಳಯ ಸೇರುವ ಬಗ್ಗೆ ಚರ್ಚೆ ನಡೆಸಲಿದ್ದಾರೋ ಎನ್ನುವ ಕುತೂಹಲ ಮೂಡಿತ್ತು.
ಮಂಡ್ಯದಲ್ಲಿ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ ನೇರವಾಗಿ ಸುಮಲತಾಗೆ ಬೆಂಬಲ ಸೂಚಿಸಿತ್ತು. ಅಷ್ಟೇ ಅಲ್ಲ, ಸುಮಲತಾ ಪರ ಪ್ರಚಾರದಲ್ಲಿ ಬಿಜೆಪಿ ಕಾರ್ಯರ್ತರು ಪಾಲ್ಗೊಂಡಿದ್ದರು. ಮಂಡ್ಯ ಭಾಗದಲ್ಲಿ ಬಿಜೆಪಿ ಪ್ರಾಬಲ್ಯವೇನು ಹೊಂದಿಲ್ಲ. ಆದರೆ, ಸುಮಲತಾ ಪರ ಒಂದಷ್ಟು ಮತಗಳು ಬೀಳಲು ಬಿಜೆಪಿ ಬೆಂಬಲ ಸಹಕಾರಿಯಾಗಿತ್ತು.