ರಾಜ್ಯದಲ್ಲಿ ಮೈತ್ರಿ ಮುಂದುವರೆದರೆ ಕಾಂಗ್ರೆಸ್ ಪಕ್ಷದ ಬಹಳ ಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ನಾಯಕರು ಇದನ್ನು ಸರಿಪಡಿಸಬೇಕಾಗಿದೆ. ಮೈತ್ರಿಯ ಬಗ್ಗೆ ಪೂರ್ಣ ಪ್ರಮಾಣದ ಒಂದು ತೀರ್ಮಾನವನ್ನು ಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಕಷ್ಟದ ಸ್ಥಿತಿ ಎದುರಾಗದಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕರು ಇದರ ಜವಾಬ್ದಾರಿ ತೆಗೆದುಕೊಳ್ಳಬೇಕು. ನಾನು ಪಕ್ಷದ ತೀರ್ಮಾನವನ್ನು ಪ್ರಶ್ನೆ ಮಾಡಲು ಹೋಗುವುದಿಲ್ಲ. ಸದ್ಯದ ಪರಿಸ್ಥಿತಿ ನೋಡಿದರೆ ಪಕ್ಷಕ್ಕೆ ಒಳ್ಳೆಯ ಭವಿಷ್ಯ ಕಾಣಿಸುತ್ತಿಲ್ಲ. ಮೈತ್ರಿಯಿಂದಾಗಿ ಚುನಾವಣೆಯಲ್ಲಿ ಈ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದ್ದಾರೆ.
ಮೈತ್ರಿಯಿಂದಾದ ಪರಿಣಾಮದ ಬಗ್ಗೆ ಕಾಂಗ್ರೆಸ್ ಪಕ್ಷದ ಕೆಲವರಿಗೆ ಮನವರಿಕೆಯಾಗಿದೆ. ಫಲಿತಾಂಶ ಬಂದ ಬಳಿಕವೂ ಈ ಸರಕಾರಕ್ಕೆ ಬುದ್ಧಿ ಬಂದಿಲ್ಲ. ಜೆಡಿಎಸ್ ಜೊತೆಗಿದ್ದರೆ ಕಾಂಗ್ರೆಸ್ ನೋವು ಅನುಭವಿಸಬೇಕಾಗುತ್ತದೆ. ಜೆಡಿಎಸ್ ನವರಿಗೆ ರಾಜ್ಯದ ಜನರು ಬುದ್ದಿ ಕಲಿಸುತ್ತಾರೆ ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ.






