ಕುಂದಗೋಳದ ಸವಾಯಿ ಗಂಧರ್ವ ಭವನದಲ್ಲಿ ಸಚಿವ ಡಿ.ಕೆ. ಶಿವಕುಮಾರ್ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಸಭೆಯಲ್ಲಿ ಸೂಕ್ತ ಮಾಹಿತಿ ನೀಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಭೆಯಲ್ಲಿ ವಿವಿಧ ಯೋಜನೆಗಳಡಿ ಸರ್ಕಾರದಿಂದ ಬಡವರಿಗೆ ನಿರ್ಮಿಸುತ್ತಿರುವ ಮನೆಗಳ ಮತ್ತು ಫಲಾನುಭವಿಗಳ ಮಾಹಿತಿ ಕೇಳಿದ್ದಾರೆ. ಅಲ್ಲದೆ, ಮನೆ ನಿರ್ಮಾಣಕ್ಕೆ ಅಧಿಕಾರಿಗಳು ಕಮಿಷನ್ ಪಡೆಯುತ್ತಾರೆಯೇ ಎಂದು ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ. ಅವರ ಪ್ರಶ್ನೆಗೆ ಅಧಿಕಾರಿ ತಬ್ಬಿಬ್ಬಾಗಿ ಹೌದು ಎಂದು ಉತ್ತರಿಸಿದ್ದಾರೆ.
ನೀವು ಎಷ್ಟು ಕಮಿಷನ್ ಪಡೆಯುತ್ತೀರಿ ಎಂಬ ಮಾಹಿತಿ ನನ್ನ ಬಳಿ ಇದೆ ಎಂದು ಸಚಿವರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಸಕರಾದ ಕುಸುಮಾ ಶಿವಳ್ಳಿಯವರು ಹಸು ಇದ್ದಂತೆ.ಆದರೆ ನಾನು ಆ ರೀತಿ ಇಲ್ಲ. ನನಗೆ ಎಲ್ಲ ಮಾಹಿತಿಗಳನ್ನು ಕೊಡಬೇಕು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಭೆಗೆ ಸರಿಯಾದ ಮಾಹಿತಿಯೊಂದಿಗೆ ಬರಬೇಕು. ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಎಲ್ಲಾ ಇಲಾಖೆಗಳ ಬಗ್ಗೆ ನನಗೆ ಮಾಹಿತಿ ಇದೆ. ಅಧಿಕಾರಿಗಳು ಸ್ಪಷ್ಟ ಮಾಹಿತಿಯೊಂದಿಗೆ ಸಭೆಗೆ ಬಂದು ಮಾಹಿತಿ ನೀಡಬೇಕು ಎಂದು ವಾರ್ನಿಂಗ್ ಮಾಡಿದ್ದಾರೆ.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರಾದ ಯು.ಟಿ. ಖಾದರ್, ಎಂ.ಟಿ.ಬಿ. ನಾಗರಾಜ್, ಜಯಮಾಲಾ ಹಾಗೂ ಶಾಸಕಿ ಕುಸುಮಾ ಶಿವಳ್ಳಿ ಸೇರಿದಂತೆ ಹಲವರು ಭಾಗಿಯಾಗಿದ್ದರು