ಸಿದ್ದರಾಮಯ್ಯ ಅವರನ್ನು ಇಬ್ಬರು ಶಾಸಕರು ಸಂಪರ್ಕಿಸಿದ್ದಾರೆ ಎಂದು ಎಂ.ಬಿ. ಪಾಟೀಲ್ ಹೇಳಿದ್ದು, ಶಾಸಕರು ಕರೆ ಮಾಡಿದ್ರು. ನಾನೇ ಕರೆ ಸ್ವೀಕರಿಸಿರಲಿಲ್ಲ ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಅತೃಪ್ತ ಶಾಸಕರು, ಅವರೆಲ್ಲಾ ಸುಳ್ಳು ಹೇಳಿದ್ದಾರೆ. ನಾವು ಯಾರನ್ನೂ ಸಂಪರ್ಕಿಸಿಲ್ಲ. ಸೋಮವಾರ ಸದನಕ್ಕೆ ನಾವು ಬರುವುದಿಲ್ಲ. ಅವರು ಏನೇ ಮಾಡಿದರೂ ನಾವು ವಾಪಸ್ ಬರುವುದಿಲ್ಲ. ರಾಜೀನಾಮೆ ಕೊಟ್ಟಿದ್ದೇವೆ. ವಾಪಸ್ ಪಡೆಯುವುದಿಲ್ಲ ಎಂದು ಪ್ರತಾಪ್ ಗೌಡ ಪಾಟೀಲ್ ಹೇಳಿದ್ದಾರೆ.ಈಗಾಗಲೇ ಮೂವರು ಶಾಸಕರನ್ನು ಅನರ್ಹತೆ ಮಾಡಿದ್ದಾರೆ. ನಮ್ಮನ್ನು ಅನರ್ಹ ಮಾಡಿದರೂ, ನಾವು ಹೆದರುವುದಿಲ್ಲ. ಕೋರ್ಟಿಗೆ ಹೋಗುತ್ತೇನೆ ಎಂದು ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಕೋರ್ಟಿಗೆ ಹೋಗುತ್ತೇನೆ. ಎಲ್ಲವನ್ನು ಎದುರಿಸುತ್ತೇವೆ. ಈಗ ಎದೆ ಬಗೆದರೆ ದೇವರು ಕಾಣುತ್ತೇನೆ ಎಂದು ಎಂಟಿಬಿ ಹೇಳಿದ್ದಾರೆ. ಈ ಹಿಂದೆ ಎದೆ ಬಗೆದರೆ ಸಿದ್ದರಾಮಣ್ಣ ಕಾಣುತ್ತಾರೆ ಎಂದು ಹೇಳಿದ್ದ ಅವರು, ಈಗ ದೇವರು ಕಾಣುವುದಾಗಿ ತಿಳಿಸಿದ್ದಾರೆ.
ನನ್ನ ರಾಜೀನಾಮೆಯ ಬಗ್ಗೆ ನಾಯಕರಿಗೆ ಮೊದಲೇ ಹೇಳಿದ್ದೆ. ಯಾರನ್ನು ಸಂಪರ್ಕ ಮಾಡುವ ಪ್ರಯತ್ನ ನಡೆಸಿಲ್ಲ ಎಂದು ಮುನಿರತ್ನ ತಿಳಿಸಿದ್ದಾರೆ. ಬಿ.ಸಿ. ಪಾಟೀಲ್ ಮಾತನಾಡಿ, ನಾವು ಯಾರನ್ನು ಸಂಪರ್ಕಿಸುವ ಪ್ರಯತ್ನ ಮಾಡಿಲ್ಲ. ಅವಶ್ಯಕತೆಯೂ ಇಲ್ಲ. ಸುಳ್ಳನ್ನು ಜನ ಬಹಳ ಬೇಗ ನಂಬಿಬಿಡುತ್ತಾರೆ. ಹಾಗಾಗಿ ಅವರು ಸುಳ್ಳು ಹೇಳುತ್ತಿದ್ದಾರೆ. ರಾಜಿನಾಮೆ ಕೊಟ್ಟು ಬಂದಮೇಲೆ ಸಂಪರ್ಕಿಸುವ ಅವಶ್ಯಕತೆ ಏನಿದೆ. ಯಾರೂ ಸಣ್ಣ ಮಕ್ಕಳಲ್ಲ. ಎಲ್ಲರೂ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಸುಮ್ಮನೆ ಕತೆ ಕಟ್ಟಿ ಹೇಳುವುದು ಸರಿಯಲ್ಲ. ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.