ನಾಳೆ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಬೇಕಿದ್ದು, ಈ ಕುರಿತು ಸಮಾಲೋಚನೆ ನಡೆಸಿರುವ ಬಿಜೆಪಿ ನಾಯಕರು ಸ್ಪೀಕರ್ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕೆಂದು ಚರ್ಚೆ ನಡೆಸಿದ್ದಾರೆ.
ಜಗದೀಶ್ ಶೆಟ್ಟರ್ ಹೆಸರು ಮುಂಚೂಣಿಯಲ್ಲಿದೆ. ಅವರು ಮುಖ್ಯಮಂತ್ರಿಯಾಗಿ, ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಶೆಟ್ಟರ್ ಮತ್ತೆ ಸಚಿವರಾಗುವುದು ಮುಜುಗರವಾಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಹಿರಿಯ ಬಿಜೆಪಿ ನಾಯಕರು ಸ್ಪೀಕರ್ ಸ್ಥಾನ ಮುಖ್ಯಮಂತ್ರಿಯಷ್ಟೇ ಗೌರವಾನ್ವಿತವಾದ ಸ್ಥಾನವಾಗಿರುವುದರಿಂದ ಶೆಟ್ಟರ್ ಅವರನ್ನು ಸ್ಪೀಕರ್ ಮಾಡುವುದು ಒಳಿತು ಎಂದು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.
ಆದರೆ, ಸ್ಪೀಕರ್ ಆಗಲು ಜಗದೀಶ್ ಶೆಟ್ಟರ್ ನಿರಾಸಕ್ತಿ ತೋರಿಸಿದ್ದಾರೆ. ಸಿಎಂ ಯಡಿಯೂರಪ್ಪ ಅವರು ಹಿರಿಯರಾಗಿದ್ದು, ಅವರ ಸಂಪುಟದಲ್ಲಿ ಮಂತ್ರಿಯಾಗಿರಲು ನನಗೆ ಮುಜುಗರವಿಲ್ಲ. ಅವರ ಸಂಪುಟದಲ್ಲಿ ಇದ್ದುಕೊಂಡು ಅವರಿಗೆ ಬಲ ತುಂಬುತ್ತೇನೆ ಎಂದು ಹಿರಿಯ ನಾಯಕರ ಬಳಿ ಜಗದೀಶ್ ಶೆಟ್ಟರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.