ಇಪ್ಪತ್ತೊಂಬತ್ತು ಹೆಣದ ರಾಶಿ ಮೇಲೆ ಯುಪಿ ಸರ್ಕಾರ..! ಒಂದು ರೂಪಾಯಿಗೆ 40 ಲೀಟರ್ ಪೆಟ್ರೋಲ್..!!

Date:

 

raaa

ಒಂದಲ್ಲ, ಎರಡಲ್ಲ- ಬರೋಬ್ಬರಿ ಇಪ್ಪತ್ತೇಳು ತಿಂಗಳುಗಳ ಕಾಲ ರಾಮ್‍ವೃಕ್ಷ್ ಯಾದವ್ ನೇತೃತ್ವದ ಸ್ವಾಧಿಕ್ ಭಾರತ್ ವಿಧಿಕ್ ಸತ್ಯಾಗ್ರಹಿ ಸಂಘಟನೆ ಜವಾಹರ್ ಭಾಗ್‍ನ 260 ಎಕರೆ ಭೂಪ್ರದೇಶವನ್ನು ಒತ್ತುವರಿ ಮಾಡಿಕೊಂಡಿತ್ತು. ಮೂರು ಸಾವಿರಕ್ಕಿಂತ ಹೆಚ್ಚಮಂದಿಯಿದ್ದ ಸುಭಾಷ್ ಸೇನೆಯ ಬಳಿ ಇವಿಷ್ಟು ಕಾಲಾವಕಾಶದಲ್ಲಿ ಸಂಗ್ರಹವಾಗಿದ್ದು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು. ಸಂಘಟನೆಗಳಿಗೆ ಈ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಬಂದಿದ್ದು ಹೇಗೆ..? ಇಷ್ಟು ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಅವರು ಶೇಖರಿಸಿಟ್ಟುಕೊಂಡಿದ್ದು ಯಾಕೆ..!? ಅದೆಲ್ಲಾ ಹೋಗ್ಲಿ- ಈ ಬಗ್ಗೆ ಅಖಿಲೇಶ್ ಸರ್ಕಾರಕ್ಕೆ ಜಿಲ್ಲಾಡಳಿತ, ಗುಪ್ತಚರ ದಳಗಳು ಮಾಹಿತಿಕೊಟ್ಟರೂ, ಸರ್ಕಾರ ಸುಮ್ಮನಾಗಿದ್ದು ಯಾಕೆ..? ಇಂಥ ಹಲವು ಪ್ರಶ್ನೆಗಳಿಗೆ ಸಿಕ್ಕಿರುವ ಉತ್ತರ ಇಬ್ಬರು ಪೊಲೀಸರು ಸೇರಿದಂತೆ ಇಪ್ಪತ್ತೊಂಬತ್ತು ಸಾವುಗಳು.

260 ಎಕರೆ ಪ್ರದೇಶದಲ್ಲಿ ಅರವತ್ತು ಎಕರೆಯಲ್ಲಿ ಸಾಮ್ರಾಜ್ಯ ಕಟ್ಟಿಕೊಂಡಿದ್ದರು. 1500 ಮನೆಗಳು ನಿರ್ಮಾಣವಾಗಿತ್ತು. ಶಾಲೆಗಳಿದ್ದವು. ಲ್ಯಾಂಡ್ ರೋವರ್ ಸೇರಿದಂತೆ ಅವರ ಬಳಿ 12 ಐಷಾರಾಮಿ ಕಾರುಗಳಿದ್ದವು. ನಿತ್ಯ ಮೂರು ಸಾವಿರ ಜನರಿಗೆ ಊಟೋಪಚಾರವಾಗುತ್ತಿತ್ತು. ಬರೀ ಊಟೋಪಚಾರದ ತಿಂಗಳ ವೆಚ್ಚವೇ ಬರೋಬ್ಬರಿ ಇಪ್ಪತ್ತೈದು ಲಕ್ಷವಾಗುತ್ತಿತ್ತು. ತಿಂಗಳಿಗೆ ಅವರ ಒಟ್ಟಾರೆ ಖರ್ಚು ಹತ್ತಿರತ್ತಿರ ಒಂದು ಕೋಟಿಯನ್ನು ಮುಟ್ಟುತ್ತಿತ್ತು. ಇವುಗಳ ಜೊತೆ ಶಸ್ತ್ರಾಸ್ತ್ರಗಳ ಸಂಗ್ರಹಣೆ ಮಾಡುತ್ತಿದ್ದರು. ಸರ್ಕಾರದ ಕಣ್ತಪ್ಪಿಸಿ ಇವೆಲ್ಲಾ ನಡೆಯಲು ಸಾಧ್ಯಾನಾ..!?

ಸರ್ಕಾರಕ್ಕೆ ಹತ್ತಿರತ್ತಿರ ಎರಡೂವರೆ ವರ್ಷಗಳ ಕಾಲ ರಾಮ್‍ವೃಕ್ಷ್ ಯಾದವ್ ನೇತೃತ್ವದ ಸತ್ಯಾಗ್ರಹಿಗಳನ್ನು ಜವಾಹರ್‍ಬಾಗ್‍ನಲ್ಲಿ ನೆಲೆಸಲು ಅವಕಾಶ ಕೊಟ್ಟಿತ್ತು. ಆರಂಭದಲ್ಲೇ ಅವರನ್ನು ಅಲ್ಲಿಂದ ಓಡಿಸುವ ಪ್ರಯತ್ನವಾಗಲಿಲ್ಲ. ಹಾಗಾಗಿಯೇ ಇಷ್ಟು ಅವಧಿಯಲ್ಲಿ ಅವರ ಸಂಖ್ಯೆ ಮೂರು ಸಹಸ್ರವನ್ನು ದಾಟಿತ್ತು. ಇನ್ನು ಇವರನ್ನು ಕಡಿವಾಣ ಹಾಕುವುದು ಕಷ್ಟ ಅಂತ ಕೋರ್ಟ್ ಆದೇಶದ ಅನುಸಾರ ಒಂದಿಷ್ಟು ಪೊಲೀಸರನ್ನು ಬಿಟ್ಟು ಅವರನ್ನು ಒದ್ದೋಡಿಸುವುದಕ್ಕೆ ಸರ್ಕಾರ ಮುಂದಾಗಿತ್ತು. ಸಾವಿರಾರು ಸಂಖ್ಯೆಯಲ್ಲಿರುವ ಸತ್ಯಾಗ್ರಹಿಗಳನ್ನು ಜಾಗ ಬಿಡಿಸಲು ಹೆಚ್ಚುವರಿ ಪೊಲೀಸರು ಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದರೂ ಸರ್ಕಾರಕ್ಕೆ ಅಸಲಿಯತ್ತು ಅರ್ಥವಾಗಲಿಲ್ಲ. ಎಲ್ಲಾ ಮುಗಿದ ಮೇಲೆ ಅರೆಸೇನಾ ಪಡೆ ಕಳುಹಿಸಿರುವ ಸರ್ಕಾರದ ಅರೆಬರೆ ಜ್ಞಾನದಿಂದ ಪೊಲೀಸ್ ವರಿಷ್ಠಾಧಿಕಾರಿ ಮುಕುಲ್ ದ್ವಿವೇದಿ, ಪೇದೆ ಸಂತೋಷ್ ಯಾದವ್ ಸತ್ತುಹೋದರು. ಒಟ್ಟು ಇಪ್ಪತ್ತೊಂಬತ್ತು ಹೆಣಗಳು ಬಿದ್ದವು.

ಮುಕುಲ್ ದ್ವಿವೇದಿಯನ್ನು ಕೆಡವಿಕೊಂಡು ಬಡಿದು ಕೊಲ್ಲುವಾಗ ಅವರ ಜೊತೆಗಿದ್ದ ಬೆರಳೆಣಿಕೆಯ ಪೊಲೀಸರು ಜಾಗ ಖಾಲಿಮಾಡಿದ್ದರು. ಅದೀಗ ವಿವಾದವಾಗಿದೆ. ಆದರೆ ನಾವು ಮೊದಲೇ ಹೇಳಿದಂತೆ ಅಲ್ಲಿದ್ದಿದ್ದು ಬೆರಳೆಣಿಕೆಯ ಪೊಲೀಸರು. ದಂಗೆಯೆದ್ದವರನ್ನು ತಡೆಯಲು ಹೋಗಿದ್ದರೇ ಪೊಲೀಸರ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುತ್ತಿತ್ತು. ಜೀವಭಯದಿಂದ ಉಳಿದ ಪೊಲೀಸರು ಪೇರಿಕಿತ್ತರೇ ಮುಕುಲ್ ದ್ವಿವೇದಿಯನ್ನು ಬಡಿಗೆಯಲ್ಲಿ ಬಡಿದು ಕೊಂದಿದ್ದರು. ಈ ಕ್ಷಣಕ್ಕೆ ಮುಕುಲ್ ದ್ವಿವೇದಿ ಅವರ ಪತ್ನಿ ಸರ್ಕಾರವನ್ನು ದೂರುತ್ತ ಕುಳಿತಿರುವುದರಲ್ಲಿ ಅರ್ಥವಿದೆ. ಸರ್ಕಾರ ಇಪ್ಪತ್ತು ಲಕ್ಷ ಪರಿಹಾರ ಕೊಡ್ತೀನಿ ಎಂದಾಗ, `ನನಗೆ ನನ್ನ ಮಗನನ್ನು ವಾಪಾಸು ಕೊಡಿ, ನನಗೆ ಬೇಕಿರುವುದು ದುಡ್ಡಲ್ಲ ಎಂದು ಮುಕುಲ್ ದ್ವಿವೇದಿ ತಾಯಿಯ ಕಣ್ಣೀರು ಸರ್ಕಾರದ ಒಟ್ಟಾರೆ ವೈಫಲ್ಯಗಳನ್ನು ಎತ್ತಿತೋರಿಸುತ್ತಿದೆ. ಈ ತಾಯಿಗೆ ಅಖಿಲೇಶ್ ಸರ್ಕಾರ ಯಾವ ಮುಖ ಹೊತ್ತು, ಏನಂತ ಉತ್ತರ ಕೊಡುತ್ತೆ ಹೇಳಿ..? ಉತ್ತರಪ್ರದೇಶ ಸರ್ಕಾರಕ್ಕೆ ಸುಭಾಷ್ ಚಂದ್ರ ಭೋಸ್ ಹೆಸರನ್ನು ಬೆನ್ನಿಗೆ ಕಟ್ಟಿಕೊಂಡು ಸಂಘಟನೆ ಕಟ್ಟಿದ್ದ ರಾಮ್‍ವೃಕ್ಷ್ ಯಾದವ್‍ನ ಹಕೀಕತ್ತುಗಳೇ ಅರ್ಥವಾಗಲಿಲ್ಲ.

ಅದೇನು ಯುದ್ಧಭೂಮಿಯಾಗಿರಲಿಲ್ಲ. ಕೋಮುಗಲಭೆಯಾಗಿರಲಿಲ್ಲ. ಪೊಲೀಸರು ಹಾಗೂ ಅತಿಕ್ರಮಣಕಾರರ ನಡುವಿನ ಜಿದ್ದಾಜಿದ್ದಿಯಾಗಿತ್ತು. ಬಂದೂಕು ಮೊರೆದಿತ್ತು. ಪೊಲೀಸರಿಗಿಂತ ಹೆಚ್ಚು ಶಸ್ತ್ರಾಸ್ತ್ರ ಸಂಘಟನೆಯ ಬಳಿಯಿತ್ತು. ಅವರ ಬಳಿ ಅಷ್ಟೊಂದು ಪ್ರಮಾಣದ ಬಂದೂಕು, ಗುಂಡುಗಳು ಹೇಗೆ ಬಂತು..? ಉತ್ತರ ಪ್ರದೇಶ ಸರ್ಕಾರದ ಕಣ್ಣುತಪ್ಪಿ ಅದರ ಕಣ್ಣಳತೆಯಲ್ಲಿ ಇಷ್ಟೆಲ್ಲಾ ನಡೆಯುತ್ತಿದೆಯಾ..? ಅಂದರೇ ಭಾರತದ ಒಡಲಿಗೆ ಬಾಂಬಿಡುವ ಉಗ್ರರು ಶಸ್ತ್ರಾಸ್ತ್ರಗಳನ್ನು ಆರಾಮಾಗಿ ಯುಪಿಯಲ್ಲಿ ಶೇಖರಿಸಿಟ್ಟುಕೊಳ್ಳಬಹುದಲ್ವಾ..!? ಸಮಾಜವಾದಿ ಸರ್ಕಾರ ತನ್ನ ಇಮೇಜ್‍ಗೆ ಹಾಕಿಕೊಂಡಿರುವ ನಕಲಿ ಬೋರ್ಡ್ ಅನ್ನು ಮೊದಲು ಕಿತ್ತುಹಾಕಬೇಕು. ಇಲ್ಲಿಯವರೆಗೆ ಉತ್ತರಪ್ರದೇಶ ಪೊಲೀಸರು ಮುನ್ನೂರಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಅವರಿಂದ ಅಪಾರ ಪ್ರಮಾಣದಲ್ಲಿ ಬಂದೂಕು, ಕಾಡುತೂಸುಗಳನ್ನು ವಶಪಡಿಸಿಕೊಂಡಿದ್ದಾರೆ. ದಾದಾಗಿರಿ ಮಾಡಿಕೊಂಡು 260 ಎಕರೆ ಜಮೀನನ್ನು ಕಬ್ಜಾ ಮಾಡಿಕೊಂಡಿದ್ದ ಎಲ್ಲಾ ಘಟನೆಯ ರೂವಾರಿ ರಾಮ್‍ವೃಕ್ಷ್ ಯಾದವ್‍ನನ್ನು ಕೊಂದುಹಾಕಿದ್ದಾರೆ. ಮಂಪರಿನಲ್ಲಿದ್ದ ಸರ್ಕಾರ ತಡವಾಗಿ ಎದ್ದರೂ- ಆಗಿಹೋಗಿರುವ ಅನಾಹುತ ಸಣ್ಣದಲ್ಲ.

ಮೂರ್ನಾಲ್ಕು ಜನರ ತಂಡ ಮೂರುಸಾವಿರಕ್ಕೂ ಹೆಚ್ಚು ಜನರನ್ನು ಒಂದೆಡೆ ಸೇರಿಸಿ ನಗರವೊಂದರ 260 ಎಕರೆ ಜಮೀನನ್ನು ಕಬ್ಜಾ ಮಾಡಿಕೊಂಡು ಕೂರುವುದು ತಮಾಷೆಯ ಮಾತಲ್ಲ. ಅಲ್ಲಿ ಕುಂತು ಅವರದ್ದೇ ಆಡಳಿತ, ಅವರದ್ದೇ ಕಾನೂನು ಸರಿಸುಮಾರು ಎರಡು ವರ್ಷ ಮೂರು ತಿಂಗಳವರೆಗೆ ನಡೆಯುತ್ತದೆ ಅಂದರೆ ಅಖಿಲೇಶ್ ಸರ್ಕಾರ ಏನು ಮಾಡುತ್ತಿತ್ತು..? ಇದೀಗ ಇಪ್ಪತ್ತೇಳು ಹತ್ಯೆಗೆ ಉತ್ತರ ಕೊಡಬೇಕಾಗಿರುವ ಸರ್ಕಾರ ಕೋರ್ಟ್ ಆದೇಶವಿದ್ದರೂ ಅಲ್ಲಿಗ್ಯಾಕೆ ಪೊಲೀಸರನ್ನು ನುಗ್ಗಿಸಿತ್ತು..!? ಐಜಿಪಿ ಜಾವೇದ್ ಅಹ್ಮದ್ ಹೇಳುವ ಪ್ರಕಾರ ಈ ಕಾರ್ಯಾಚರಣೆಗೆ ಹದಿನೈದು ದಿನದ ರೂಪುರೇಶೆ ಹಾಕಲಾಗಿತ್ತಂತೆ. ಅವತ್ತಿನ ಘಟನೆಯನ್ನು ಗಮನಿಸಿದರೇ, ಪೊಲೀಸರು ಅತ್ತೆಮನೆಗೆ ಮಾಂಸದೂಟಕ್ಕೆ ಹೋದಂತಿತ್ತು. ಇದನ್ನು ಯಾರಾದ್ರೂ ನಂಬುತ್ತಾರಾ..!? ಸಾವಿನ ಮನೆಯೊಳಗೆ ಪೊಲೀಸರನ್ನು ಬಿಟ್ಟು ತಮಾಷೆ ಮಾಡಿದಂತಿತ್ತಲ್ಲವೇ ವಾಸ್ತವ..!

ಅವನ ಹೆಸರು ರಾಮ್‍ವೃಕ್ಷ್ ಯಾದವ್. ಇವನು ಸತ್ಯಾಗ್ರಹದ ಹೆಸರಿನಲ್ಲಿ ತನ್ನ ಸಂಘಟನೆಯ ಸಾವಿರಾರು ಜನರನ್ನು ಜವಾಹರ್ ಬಾಗ್‍ಗೆ ಕರೆದುಕೊಂಡು ಹೋಗಿ ಇಪ್ಪತ್ತೇಳು ತಿಂಗಳಿನಿಂದ ಠಿಕಾಣಿ ಹೂಡಿದ್ದ. ಅವರು ಎರಡು ವರ್ಷದ ಹಿಂದೆ ಮಧ್ಯಪ್ರದೇಶದ ಸಾಗರದಿಂದ ದೆಹಲಿಯವರೆಗೆ ರ್ಯಾಲಿ ಮಾಡಲು ಮುಂದಾಗಿದ್ದರು. ಇದಕ್ಕಾಗಿ 2014ರ ಮಾರ್ಚ್‍ನಲ್ಲಿ ಜವಾಹರ್‍ಬಾಗ್‍ನಲ್ಲಿ ಒಟ್ಟಾಗಿದ್ದರು. ಸರ್ಕಾರ ಎರಡು ದಿನದ ಮಟ್ಟಿಗೆ ಅಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಕೊಟ್ಟಿತ್ತು. ಆದರೆ ಎರಡು ದಿನಗಳ ನಂತರ ಅವರು ಜವಾಹರ್ ಬಾಗ್ ಬಿಟ್ಟು ಎಳಲಿಲ್ಲ. ಅಲ್ಲಿ ಕುಂತೆ ಸಂಘಟನೆಯನ್ನು ಕಟ್ಟತೊಡಗಿದರು. ಆ ಜಾಗವನ್ನೆ ಹೆಡ್‍ಕ್ವಾರ್ಟರ್ ಮಾಡಿಕೊಂಡರು. ರಾಮ್‍ವೃಕ್ಷ್ ಯಾದವ್ `ಅಜಾದ್ ಭಾರತ್ ವಿವಿಧ್ ವೈಚಾರಿಕ್ ಜನ್‍ಕ್ರಾಂತಿ ಜಾಗ್ರಣ್’ ಬ್ಯಾನರಿನಡಿ ಹಲವು ಸಂಘಟನೆಗಳ ನೇತಾರ ಆಗಿಬಿಟ್ಟಿದ್ದ. ತನ್ನನ್ನು ಖುದ್ದಾಗಿ ಸುಭಾಷ್ ಚಂದ್ರ ಬೋಸ್ ಅವರ ಅನುಯಾಯಿ ಎಂದು ಹೇಳಿ ಜನರನ್ನು ನಂಬಿಸತೊಡಗಿದ್ದ. ಅಜಾದ್ ಭಾರತ್ ವಿವಿಧ್ ವೈಚಾರಿಕ್ ಜನ್‍ಕ್ರಾಂತಿ ಜಾಗ್ರಣ್ ಸಂಘಟನೆಯಲ್ಲಿ ಸ್ವಾದೀನ್ ಭಾರತ್, ಸುಭಾಷ್ ಸೇನಾ, ಭಾರತೀಯ ಸುಭಾಷ್ ಸೇನಾ- ಸಂಘಟನೆಗಳು ಸೇರಿಕೊಂಡವು. ಇವರೆಲ್ಲ ಸೇರಿ ಜನರ ಮನಸ್ಸಿನಲ್ಲಿ ಆಗಿಹೋಗದ ಬೇಡಿಕೆಗಳನ್ನು ತುಂಬಿ- ತಾವು ಸುಭಾಷ್ ಚಂದ್ರ ಬೋಸ್ ದಾರಿಯಲ್ಲಿ ನಡೆಯುತ್ತಿದ್ದೇವೆ, ಸತ್ಯಕ್ಕಾಗಿ ನಮ್ಮ ಹೋರಾಟ ಎಂದರು.

ಭಾರತದಲ್ಲಿ ಅಜಾದ್ ಹಿಂದ್ ಸರ್ಕಾರವನ್ನು ಸ್ಥಾಪಿಸಬೇಕು, ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗಳಿಗಾಗಿ ಚುನಾವಣೆ ನಡೆಸಬಾರದು, ಅದನ್ನು ರದ್ದುಗೊಳಿಸಬೇಕು, ಭಾರತದ ಕರೆನ್ಸಿ ಜಾಗದಲ್ಲಿ ಅಜಾದ್ ಹಿಂದ್ ಕರೆನ್ಸಿಯನ್ನು ತರಬೇಕು, ಭಾರತದ ಕರೆನ್ಸಿ ಪ್ರಪಂಚದ ಅತ್ಯಂತ ಶಕ್ತಿಶಾಲಿ ಕರೆನ್ಸಿ, ಭಾರತದ ಒಂದು ರೂಪಾಯಿ 972 ಗ್ರಾಂ ಚಿನ್ನಕ್ಕೆ ಸಮ, ಭಾರತದ ಒಂದು ರೂಪಾಯಿಯಿಂದ 60 ಲೀಟರ್ ಡೀಸೆಲ್ ಖರೀದಿಸಬಹುದು. ಹಾಗಾಗಿ ಸರ್ಕಾರ ಒಂದು ರೂಪಾಯಿಗೆ 60 ಲೀಟರ್ ಡೀಸೆಲ್, 40 ಲೀಟರ್ ಪೆಟ್ರೋಲ್ ಕೊಡಬೇಕೆಂದು ಅವರ ಬೇಡಿಕೆಯಾಗಿತ್ತು. ಇವರ ಮಾತನ್ನು, ಇವರ ಬೇಡಿಕೆಯನ್ನು ಕೇಳುತ್ತಿದ್ದರೇ, ಇವರೆಂಥಾ ಮಾನಸಿಕ ಅಸ್ವಸ್ಥರು ಎಂಬುದು ಅರ್ಥವಾಗುತ್ತದೆ. ದುರಂತವೆಂದರೇ ಸುಭಾಷ್ ಚಂದ್ರ ಬೋಸ್ ಹೆಸರಿನಲ್ಲಿ ನಡೆಯುತ್ತಿದ್ದ ಈ ಹೈಡ್ರಾಮವನ್ನು ತಮಾಷೆ ಎಂಬಂತೆ ಯುಪಿ ಸರ್ಕಾರ ನೋಡಿತ್ತು. ಅವತ್ತೆ ಈ ಹುಚ್ಚಾಟಗಳಿಗೆ ಕಡಿವಾಣ ಹಾಕಲು ಸರ್ಕಾರ ಚಿಂತಿಸಲಿಲ್ಲ. ಹತ್ಯಾಕಾಂಡ ನಡೆದ ಮೇಲೆಯೇ ಈ ದೇಶದಲ್ಲಿ ಯಾವುದನ್ನೂ ತಮಾಷೆಯಾಗಿ ತೆಗೆದುಕೊಳ್ಳುವಂತಿಲ್ಲ ಎನ್ನುವುದು ಸಾಬೀತಾಗಿದೆ.

ಈ ರಾಮ್‍ವೃಕ್ಷ್ ಯಾದವ್ ಹಿನ್ನಲೆಯನ್ನು ಕೆದಕುತ್ತಾ ಹೋದರೇ ಇಂಟರೆಸ್ಟಿಂಗ್ ವಿಷ್ಯಗಳು ತೆರೆದುಕೊಳ್ಳುತ್ತವೆ. ಈತನ ಗುರುವಿನ ಹೆಸರು ಜೈಗುರುದೇವ್. ಆತನ ಆಣತಿಯಂತೇ ರಾಮ ವೃಕ್ಷ್ ಯಾದವ್ ನಡೆದುಕೊಳ್ಳುತ್ತಿದ್ದ. ಈ ಜೈ ಗುರುದೇವ್ 1975ರಲ್ಲಿ ತಾನೇ ಸುಭಾಷ್ ಚಂದ್ರ ಬೋಸ್ ಎಂಬುದಾಗಿ ರ್ಯಾಲಿಯೊಂದರಲ್ಲಿ ಹೇಳಿಕೊಂಡಿದ್ದ. ಇದರಿಂದ ಸಿಟ್ಟಿಗೆದ್ದ ಜನರು ಆತನ ಮೇಲೆ ಮೊಟ್ಟೆ, ಚಪ್ಪಲಿ, ಟೊಮೆಟೋಗಳನ್ನು ಎಸೆದಿದ್ದರು. ಈ ಘಟನೆ ನಡೆದ ಕೆಲವೇ ವರ್ಷಗಳಲ್ಲಿ ತನ್ನ ಖ್ಯಾತಿ ಹೆಚ್ಚಿಸಿಕೊಂಡ ಜೈ ಗುರುದೇವ್ ಉತ್ತರ ಪ್ರದೇಶದಲ್ಲಿ ಭಾರೀ ಬಂಗಲೆಗಳನ್ನು ನಿರ್ಮಿಸಿದ್ದ. ತಾಜ್‍ಮಹಲ್‍ಗಿಂತಲೂ ಶ್ರೀಮಂತವಾದ ಆಶ್ರಮಗಳನ್ನು ಹೊಂದಿದ್ದ. 4 ಸಾವಿರ ಕೋಟಿ ರೂಪಾಯಿ ಮೌಲ್ಯದ ಭೂಮಿ, 150 ಕೋಟಿ ಮೌಲ್ಯದ ಹತ್ತಾರು ಐಷಾರಾಮಿ ಕಾರುಗಳನ್ನೂ ಹೊಂದಿದ್ದನಂತೆ. 2012ರಲ್ಲಿ ತನ್ನ 116ನೇ ವಯಸ್ಸಿನಲ್ಲಿ ಜೈ ಗುರುದೇವ್ ಸಾವಿನಪ್ಪಿದ್ದ. ಬಳಿಕ ಆತನ ಎಲ್ಲ ಆಸ್ತಿಯನ್ನೂ ಆತನ ಕಾರು ಚಾಲಕ ಪಂಕಜ್ ಯಾದವ್ ಹೆಸರಿಗೆ ಬರೆಯಲಾಗಿತ್ತು. ಇದರಿಂದ ಸಿಟ್ಟಿಗೆದ್ದ ರಾಮ್ ವೃಕ್ಷ್ ಯಾದವ್ ಆಶ್ರಮ ತೊರೆದು ತನ್ನದೇ ಸ್ವಾಧೀನ ಭಾರತ ವಿಧಿಕ್ ಸತ್ಯಾಗ್ರಹಿ ಸಂಘಟನೆ ಸ್ಥಾಪಿಸಿದ್ದ. ಇವತ್ತಿಗೆ ಜೈ ಗುರುದೇವ್ ಬದುಕಿಲ್ಲ. ಆದರೆ ಆತ ಬದುಕಿದ್ದಾಗ ಉತ್ತರ ಪ್ರದೇಶದಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್ ಯಾದವ್ ಜೊತೆ ಗಳಸ್ಯ ಕಂಠಸ್ಯ ಗೆಳತನವಿಟ್ಟುಕೊಂಡಿದ್ದ. ಜೈ ಗುರುದೇವ್ ಜೊತೆ ಸಮಾಜವಾದಿ ಪಕ್ಷದವರಿಗೆ ಗಂಟು-ನಂಟುಗಳಿದ್ದವು..! ದೇಶದ ರಾಜಕಾರಣಿಗಳ ಜೊತೆಗೂ ಗುರುದೇವ್‍ಗೆ ಉತ್ತಮ ಸಂಬಂಧವಿತ್ತು. ಇವೆಲ್ಲಾ ಕಾರಣಗಳಿಂದ ರಾಮ್‍ವೃಕ್ಷ್ ಯಾದವ್‍ನನ್ನು ಜವಾಹರ್ಬಾಗ್‍ನಿಂದ ಹೊರಗೆ ಹಾಕುವ ಕೆಲಸವಾಗಿರಲಿಲ್ಲ.

ಇದೊಂದು ಕಾರಣವಾದರೇ, ರಾಮ್‍ವೃಕ್ಷ್ ಯಾದವ್‍ನ ತಮಾಷೆಯ ಬೇಡಿಕೆಗಳಿಗೆ ಸರ್ಕಾರ ತಲೆಕೆಡಿಸಿಕೊಳ್ಳಲು ಹೋಗಲಿಲ್ಲ. ಅವನ ಅರ್ಥವಿಲ್ಲದ ಸತ್ಯಾಗ್ರಹವನ್ನು ತಾತ್ಸಾರ ಮಾಡಿದ್ದೇ ಇವತ್ತಿನ ದೊಡ್ಡ ಅನಾಹುತಕ್ಕೆ ಕಾರಣವಾಗಿರಲೂಬಹುದು. ಒಟ್ಟಿನಲ್ಲಿ ಸರ್ಕಾರದ ಪರೋಕ್ಷ ಬೆಂಬಲ, ಚಿತಾವಣೆ ರಾಮ್‍ವೃಕ್ಷ್ ಯಾದವ್‍ನ ಸಂಘಟನೆ ಈ ಮಟ್ಟಕ್ಕೆ ಚಿಗಿತುಕೊಳ್ಳಲು ಕಾರಣವಾಗಿತ್ತು. ಒಂದು ವೇಳೆ ಸರ್ಕಾರ ಎಲ್ಲಾದರೂ ಪರೋಕ್ಷ ಬೆಂಬಲ ಕೊಟ್ಟು ಅಥವಾ ಸತ್ಯಾಗ್ರಹವನ್ನು ತಮಾಷೆ ಎಂಬಂತೆ ನೋಡಿದ್ದರೇ ಅವರು ಸಂಗ್ರಹಸಿಟ್ಟುಕೊಂಡಿದ್ದ ಗ್ರೆನೆಡ್ ಸೇರಿದಂತೆ ಮಾರಣಾಂತಿಕ ಶಸ್ತ್ರಾಸ್ತಗಳಿಗೆ- ಅದು ತಂದೊಡ್ಡಿರುವ ಅನಾಹುತಕ್ಕೆ ಸರ್ಕಾರವೇ ಹೊಣೆಯಾಗಬೇಕು. ಒಂದುವೇಳೆ ಆ ಗುಂಪಿನಲ್ಲಿ ಅನ್ಯಧರ್ಮದವರಿದ್ದಿದ್ದರೇ ಅದು ತೆಗೆದುಕೊಳ್ಳುತ್ತಿದ್ದ ತಿರುವು ಬೇರೆಯಾಗಿರುತ್ತಿತ್ತು. ಇಡೀ ದೇಶದಲ್ಲಿ ಬೆಂಕಿಹೊತ್ತಿಕೊಳ್ಳುತ್ತಿತ್ತು.

ಒಟ್ಟಿನಲ್ಲಿ ಕೋರ್ಟ್ ಆದೇಶಕ್ಕೆ ಯಾವುದೇ ತಯಾರಿಯಿಲ್ಲದೇ ಸರ್ಕಾರ ಬೆರಳೆಣಿಕೆಯ ಪೊಲೀಸರನ್ನು ಮುಂದೆಬಿಟ್ಟು ಅತಿಕ್ರಮಣಕಾರರನ್ನು ಹತ್ತಿಕ್ಕಲು ಪ್ರಯತ್ನಿಸಿದ್ದು ಬಾಲೀಶ ತೀರ್ಮಾನವಾಗಿದೆ. ಏಕೆಂದರೇ ಜಿಲ್ಲಾಡಳಿತ ಸೇರಿದಂತೆ, ಗುಪ್ತಚರ ವರದಿಗಳು ಕೂಡ ಅತಿಕ್ರಮಣಕಾರರ ಸಂಖ್ಯೆ, ಅವರ ಬಳಿಯಿರುವ ಮಾರಕಾಸ್ತ್ರಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ಕೊಟ್ಟಿತ್ತು. ಅರೆಸೇನಾಪಡೆಯನ್ನು ಬಳಸಿ ಪ್ರತಿಭಟನಾಕಾರರನ್ನು ಹತ್ತಿಕ್ಕಬಹುದಿತ್ತು. ಅದರ ಬದಲು ಪೊಲೀಸರನ್ನು ಮುಂದೆಬಿಟ್ಟು ಮುಕುಲ್ ದ್ವಿವೇದಿ, ಸಂತೋಷ್ ಯಾದವ್ ಸಾವಿಗೆ ಸರ್ಕಾರ ನೇರ ಕಾರಣವಾಗಿದೆ. ಅವರ ಕುಟುಂಬದ ಕಣ್ಣೀರನ್ನು ಪರಿಹಾರದ ನೋಟಿನಲ್ಲಿ ಒರೆಸುವ ಸರ್ಕಾರದ ನಿರ್ಧಾರ ಅತ್ಯಂತ ನಾಚಿಕೆಗೇಡು. ಸಮಾಜವಾದಗಳು ಅರ್ಥಕಳೆದುಕೊಳ್ಳುವುದೇ ಹೀಗೆ..!?

POPULAR  STORIES :

ಮಿಸ್ಟರ್ ಪರಮೇಶ್ವರ್ ನಾಯಕ್..! ಯಾವಾಗ ರಾಜೀನಾಮೆ ಕೊಡ್ತೀರಾ..!?

ಆಂಧ್ರದಲ್ಲಿ ಮೀನಿನ ಮಳೆ..! ಈ ಮಳೆ ಸುರಿಯುವ ವಿಡಿಯೋ ನೋಡಿ..!

`ಅರೆಸ್ಟ್ ಕರೋ ಇಸ್ ಸಾಲಿಕೋ..!’ ವಾಂತಿ ಮಾಡಿಕೊಂಡ ಖೇಣಿ ನೀರಿಳಿಸಿದ ಅರ್ನಾಬ್..!

ಬಾಕ್ಸರ್ ಮಹಮ್ಮದ್ ಅಲಿ ಡೆತ್ ಸೀಕ್ರೆಟ್..! ಸತ್ತಮೇಲೂ ಅವರು ಬದುಕಿದ್ದರು..!

ಕೇಳ್ರಪ್ಪೊ ಕೇಳ್ರಿ ಫೇಸ್ ಬುಕ್ ಸಂಸ್ಥಾಪಕನ ಅಕೌಂಟ್ ಹ್ಯಾಕ್ ಆಯ್ತು…!! ಪಾಸ್‍ವರ್ಡ್ ಏನಿತ್ತು ಗೊತ್ತಾ..?

ದೇವೇಗೌಡರಿಗೆ ಮುಸ್ಲೀಮರನ್ನು ಕಂಡರಾಗಲ್ಲ..!! ಜೂನ್ ಹನ್ನೆರಡರಂದು ಜೆಡಿಎಸ್‍ನಿಂದ ಜಮೀರ್ ಔಟ್..!?

ಇವ್ನಿಗೆ 3 ಹೆಂಡ್ತಿ, 35 ಮಕ್ಕಳು..! ನೂರು ಮಕ್ಕಳ ತಂದೆ ಆಗೋದೇ ಅವ್ನ ಟಾರ್ಗೆಟ್..!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...