ಮಾರಕ ಕೊರೊನಾ ವೈರಸ್ ಎರಡನೇ ಅಲೆ ಭಾರತವನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಕೊರೊನಾ ಎರಡನೇ ಅಲೆಗೆ ಭಾರತ ಅಕ್ಷರಶ: ತತ್ತರಿಸಿದ್ದು, ಮಾರಕ ವೈರಾಣುವನ್ನು ಸೋಲಿಸಲು ಭಾರತವನ್ನು ಮತ್ತೆ ಸಂಪೂರ್ಣವಾಗಿ ಲಾಕ್‌ಡೌನ್ ಮಾಡಬೇಕು ಎಂಬ ಆಗ್ರಹ ಕೂಡ ಕೇಳಿ ಬರುತ್ತಿದೆ. ಈ ಮಧ್ಯೆ ಪ್ರಧಾನಿ ಮೋದಿ ಲಾಕ್‌ಡೌನ್ ನಿರ್ಧಾರ ಕೈಗೊಳ್ಳುವ ಒತ್ತಡದಲ್ಲಿದ್ದಾರಾ ಎಂಬ ಪ್ರಶ್ನೆ ಕಾಡತೊಡಗಿದೆ. ಹೌದು, ಕೊರೊನಾ ಎರಡನೇ ಅಲೆ ತಡೆಗಟ್ಟಲು ಸಂಪೂರ್ಣ ಲಾಕ್‌ಡೌನ್ ಒಂದೇ ಪರಿಹಾರ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಹಲವು ತಜ್ಞರು, ವಿಪಕ್ಷ ನಾಯಕರು ಹಾಗೂ ಬಹುತೇಕ ಜನ ಸಾಮಾನ್ಯರಯ ಈ ವಾದಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಕಳೆದ ವರ್ಷದಂತೆ ಈ ವರ್ಷವೂ ಕೂಡ ಇಡೀ ದೇಶದಲ್ಲಿ ಲಾಕ್‌ಡೌನ್ ಹೇರಬೇಕು ಎಂಬ ಧ್ವನಿ ಸಣ್ಣ ಪ್ರಮಾಣದಲ್ಲಿಯಾದರೂ ಕೇಳಿ ಬರುತ್ತಿದೆ. ಕೇವಲ ದೇಶೀಯ ತಜ್ಞರು ಮಾತ್ರವಲ್ಲದೇ ಜಾಗತಿಕ ತಜ್ಞರೂ ಕೂಡ ಭಾರತದಲ್ಲಿ ಲಾಕ್‌ಡೌನ್ ಘೋಷಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಎಲ್ಲ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ಸಂಪೂರ್ಣ ಲಾಕ್‌ಡೌನ್ ಹೇರುವ ಒತ್ತಡದಲ್ಲಿ ಸಿಲುಕಿದೆ ಎನ್ನಲಾಗುತ್ತಿದೆ. ಲಾಕ್‌ಡೌನ್ ಕೇಂದ್ರ ಸರ್ಕಾರದ ಕೊನೆಯ ಅಸ್ತ್ರವಾಗಿದೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಇದೀಗ ಈ ಕೊನೆಯ ಅಸ್ತ್ರವನ್ನು ಬಳಸುವ ಸಮಯ ಬಂದಿದೆಯಾ ಎಂಬ ಪ್ರಶ್ನೆಗೆ ಕೇಂದ್ರ ಸರ್ಕಾರವೇ ಉತ್ತರಿಸಬೇಕಿದೆ. ಹಾಗಾದರೆ ಪ್ರಧಾನಿ ಮೋದಿ ದೇಶದಲ್ಲಿ ಮತ್ತೆ ಲಾಕ್‌ಡೌನ್ ಘೋಷಿಸುವ ಒತ್ತಡಕ್ಕೆ ಸಿಲುಕಿದ್ದಾರಾ ಎಂಬುದನ್ನು ವಿಶ್ಲೇಷಿಸುವುದಾದರೆ.
ಹೌದು, ಭಾರತವನ್ನು ಅಕ್ಷರಶ: ನಲುಗಿಸಿರುವ ಕೊರೊನಾ ವೈರಸ್ ಅಲೆಯನ್ನು ತಡೆಗಟ್ಟಲು, ಕಳೆದ ವರ್ಷದಂತೆ ಈ ವರ್ಷವೂ ದೇಶದಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬತ್ತಳಿಕೆಯಲ್ಲಿರುವ ಕೊನೆಯ ಅಸ್ತ್ರ.
ಸಾಧ್ಯವಾದಷ್ಟು ಸಡಿಲ ನಿಯಮಾವಳಿಗಳೊಂದಿಗೆ ಕೊರೊನಾ ಅಲೆ ತಡೆಗಟ್ಟುವುದು ಮೋದಿ ಸರ್ಕಾರದ ಯೋಜನೆ. ಅದರೆ ಇದಕ್ಕೆ ಜನತೆಯ ಸಹಕಾರ ಅತ್ಯವಶ್ಯವಾಗಿದ್ದು, ಕೇಂದ್ರ ಸರ್ಕಾರವೂ ಸೇರಿದಂತೆ ಎಲ್ಲಾ ರಾಜ್ಯ ಸರ್ಕಾರಗಳು ಜನರ ಸಹಕಾರದ ಕೊರತೆಯನ್ನು ಎದುರಿಸುತ್ತಿವೆ.
ಇದರಿಂದಾಗಿ ಕೇಂದ್ರ ಸರ್ಕಾರ ಕೊರೊನಾ ಮಣಿಸಲು ಕಠಿಣ ನಿಯಮಾವಳಿಗಳ ಮೊರೆ ಹೋಗುವ ಸಂದರ್ಭ ಎದುರಾದರೂ ಅಚ್ಚರಿಯಿಲ್ಲ ಎನ್ನುತ್ತಾರೆ ವಿಶ್ಲೇಷಕರು.
ಹೌದು, ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಸೋಂಕು ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಎಂದಾದರೆ ಸಂಪೂರ್ಣ ಲಾಕ್‌ಡೌನ್ ಮೊರೆ ಹೊಗಬೇಕು ಎಂಬುದು ಬಹುತೇಕ ವಿಪಕ್ಷಗಳ ಆಗ್ರಹವಾಗಿದೆ. ಅದರಲ್ಲೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇಡೀ ದೇಶದಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಿಸಿ ಎಂದು ಬಹಿರಂಗವಾಗಿಯೇ ಆಗ್ರಹಿಸಿದ್ದಾರೆ.
ದೇಶದಲ್ಲಿ ಇಂದು ಕೋವಿಡ್ ಹರಡದಂತೆ ತಡೆಯಲು ಇರುವ ಏಕೈಕ ಮಾರ್ಗವೆಂದರೆ ಸಂಪೂರ್ಣ ಲಾಕ್‌ಡೌನ್ ಮಾತ್ರ. ಕೆಳಮಟ್ಟದಲ್ಲಿರುವ ವರ್ಗಗಳಿಗೆ ‘ನ್ಯಾಯ್’ ರಕ್ಷಣೆ ಒದಗಿಸುವ ಮೂಲಕ ಲಾಕ್‌ಡೌನ್ ಜಾರಿಗೊಳಿಸಬೇಕು. ಭಾರತ ಸರ್ಕಾರಕ್ಕೆ ಇದು ಅರ್ಥವಾಗುತ್ತಿಲ್ಲ ಎಂದು ರಾಹುಲ್ ಟ್ವೀಟ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.