ಗಣೇಶ ಮೆರವಣಿಗೆ ವೇಳೆ ಕಲ್ಲುತೂರಾಟ ಕೇಸ್: ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್
ದಾವಣಗೆರೆ: ನಾಗಮಂಗಲ ಗಲಭೆ ಪ್ರಕರಣ ಮಾಸುವ ಮುನ್ನವೇ ದಾವಣಗೆರೆಯ ಬೇತೂರ ರಸ್ತೆಯ ಗಣೇಶ ವಿಸರ್ಜನೆ ವೇಳೆ ಕಲ್ಲುತೂರಾಟ ನಡೆದಿದ್ದು, ಘಟನೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯವಾಗಿದೆ. ತಕ್ಷಣವೇ ಘಟನಾಸ್ಥಳಕ್ಕೆ ಆಗಮಿಸಿದ ಪೊಲೀಸರು ಎಷ್ಟೇ ನಿಯಂತ್ರಿಸಿದರೂ ಕಿಡಿಗೇಡಿಗಳು ಕಲ್ಲು ತೂರಾಟ ಮುಂದುವರಿಸಿದ್ದು, ಪೊಲೀಸರ ಎದುರೇ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರು ಕೂಡ ಕಲ್ಲಿನಿಂದ ರಕ್ಷಿಸಿಕೊಳ್ಳಲು ಬೋರ್ಡ್ ಹಿಡಿದುಕೊಂಡು ತಿರುಗಾಡುವಂತಾಗಿದೆ.
ಈ ಘಟನೆಯಿಂದಾಗಿ ಬೆಳ್ಳಂಬೆಳಿಗ್ಗೆ ಜನಜಂಗುಲಿಯಿಂದ ತುಂಬಿರ್ತಿದ್ದ ಇಮಾಂ ನಗರದ ಜನನಿಬಿಡ ರಸ್ತೆಗಳು ಖಾಲಿಖಾಲಿಯಾಗಿದ್ದು ಬಿಕೊ ಎನ್ನುತ್ತಿವೆ. ಇಲ್ಲಿರುವ ಮಸೀದಿ ಬಳಿ 10ಕ್ಕೂ ಹೆಚ್ಚು ಪೊಲೀಸ್ ವಾಹನಗಳನ್ನು ನಿಲ್ಲಿಸಿ ಬಿಗಿ ಭದ್ರತೆ ಒದಗಿಸಲಾಗಿದೆ. ಹಾಗೆಯೇ ಬೆಳಗಿನ ಜಾವ 5 ಗಂಟೆಗೆ ವ್ಯಾಪಾರ ವಹಿವಾಟಿಗೆ ತೆರಳುತಿದ್ದ ಜನರು ತಡವಾಗಿ ಹೊರಬರ್ತಿದ್ದು, ನಾಗರೀಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.