ತಿರುಪತಿ ದರ್ಶನದ ಟೋಕನ್ ವಿತರಣೆ ವೇಳೆ ದುರಂತ: ಕಾಲ್ತುಳಿತದಿಂದ 6 ಭಕ್ತರು ಸಾವು
ತಿರುಮಲ: ತಿರುಪತಿಯಲ್ಲಿ ಭೀಕರ ಕಾಲ್ತುಳಿತ ಉಂಟಾಗಿದ್ದು, ಐವರು ಮಹಿಳಾ ಭಕ್ತರು ಸೇರಿ 6 ಮಂದಿ ಸಾವಿಗೀಡಾಗಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸರ್ವದರ್ಶನ ಟಿಕೆಟ್ಗಾಗಿ ಭಕ್ತರು ವಿತರಣಾ ಕೇಂದ್ರಗಳತ್ತ ಒಮ್ಮೆಲೇ ನುಗ್ಗಿ ಬಂದ ಕಾರಣ, ಕಾಲ್ತುಳಿತ ಉಂಟಾಗಿದೆ. ಇದರಿಂದ ಹಲವು ಭಕ್ತರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಮೃತ ಭಕ್ತರಲ್ಲಿ ತಮಿಳುನಾಡಿನ ಸೇಲಂ ಮೂಲದ ಮಹಿಳೆ ಕೂಡ ಇದ್ದಾರೆ.
ಇದೇ ಜನವರಿ 10 ರಂದು ವೈಕುಂಠ ಏಕಾದಶಿ ನಡೆಯಲಿದೆ. ಈ ವೇಳೆ ವಿಶ್ವ ಪ್ರಸಿದ್ಧ ತಿರುಪತಿ ದೇವಸ್ಥಾನದಲ್ಲಿ ವೈಕುಂಠ ದ್ವಾರ ತೆರೆಯಲಿದ್ದು, ತಿಮ್ಮಪ್ಪನ ಆಲಯದಲ್ಲಿ ಸಡಗರ ಮನೆ ಮಾಡಿರುತ್ತೆ. ಆದ್ರೆ ಏಕಾದಶಿಗೂ ಮುನ್ನವೇ ತಿರುಪತಿಯಲ್ಲಿ ದಾರುಣ ಘಟನೆ ನಡೆದುಹೋಗಿದೆ.
ಇದಕ್ಕಾಗಿ ಈಗಲೇ ಲಕ್ಷಗಟ್ಟಲೆ ಭಕ್ತರು ಕಾದು ಕುಳಿತಿದ್ದಾರೆ. ಈ ವೇಳೆ ವೈಕುಂಠ ದ್ವಾರದ ದರ್ಶನ ಟಿಕೆಟ್ ಪಡೆಯಲು ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಕೌಂಟರ್ ಬಳಿ ಬುಧವಾರ ಕಾಲ್ತುಳಿತ ಸಂಭವಿಸಿ 6 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.